- ಶ್ರೀ ಡಾ.ಗುರುಬಸವ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಆಯೋಜನೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಅಸಗೋಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಐತಿಹಾಸಿಕ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಶಿಖರ ಮತ್ತು ಗೋಪುರಗಳ ಕಲಶಾರೋಹಣ ಹಾಗೂ ಪುರಾತನ ಶ್ರೀ ಶಂಭುಲಿಂಗೇಶ್ವರ ಮತ್ತು ಶ್ರೀ ಆಂಜನೇಯ ಸ್ವಾಮಿ ಮಹಾ ರಥೋತ್ಸವ ಕಾರ್ಯಕ್ರಮಗಳು ಏಪ್ರಿಲ್ 1 ರಿಂದ 7 ರವರೆಗೆ ಜರುಗಲಿವೆ.

ಏ.1ರಂದು ಪಾಂಡೋಮಟ್ಟಿ- ಕಮ್ಮತ್ತಹಳ್ಳಿಯ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಅದ್ಧೂರಿ ಧಾರ್ಮಿಕ ಚಟುವಟಿಕೆಗಳು ಆರಂಭವಾಗಲಿವೆ. ಸಂಜೆ 5 ಗಂಟೆಗೆ ಗ್ರಾಮದ ರಾಜಬೀದಿಗಳಲ್ಲಿ ಕುಂಭಮೇಳದೊಂದಿಗೆ ಕಲಶಗಳ ಭವ್ಯ ಮೆರವಣಿಗೆ ನಡೆಯಲಿದೆ. ರಾತ್ರಿ 10 ಗಂಟೆಗೆ ದೇವಸ್ಥಾನ ಆವರಣದಲ್ಲಿ ಹೋಮ-ಹವನ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಶಂಭುಲಿಂಗೇಶ್ವರ ನಿರ್ಮಾಣ ಸಮಿತಿ ಅಧ್ಯಕ್ಷ, ಮಾಜಿ ಚೇರ್ಮನ್ ಕೆ.ಲೋಕನಾಥಪ್ಪ, ಶ್ರೀ ಶಂಭುಲಿಂಗೇಶ್ವರ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಧರ್ಮದರ್ಶಿ ಮತ್ತು ಅಧ್ಯಕ್ಷ ಆರ್.ಶಿವಣ್ಣ, ನಿರ್ಮಾಣ ಸಮಿತಿ ಉಪಾಧ್ಯಕ್ಷರಾದ ಎ.ಎಸ್.ಗುಡದಯ್ಯ, ಸದಸ್ಯ ಪಿ.ಸಿ. ರಂಗಪ್ಪ ತಿಳಿಸಿದ್ದಾರೆ.


ಕಲಶಾರೋಹಣ ಕಾರ್ಯಕ್ರಮ:

ಏಪ್ರಿಲ್ 2ರಂದು ಬೆಳಗ್ಗೆ ಉಮಾ ಮಹೇಶ್ವರ ಹಾಗೂ ಗಣಪತಿ ಪುಣ್ಯಾಹವಾಚನ, ನವಗ್ರಹ ಪೂಜೆ ಮತ್ತು ರುದ್ರಾಭಿಷೇಕ ನೆರವೇರಲಿದೆ. ಬೆಳಗ್ಗೆ 10:30ಕ್ಕೆ ಶುಭ ಮುಹೂರ್ತದಲ್ಲಿ ಕಲಶಾರೋಹಣ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕ ಅನ್ನ ದಾಸೋಹ ಏರ್ಪಡಿಸಲಾಗಿದೆ. ಶ್ರೀ ಶಂಭುಲಿಂಗೇಶ್ವರ ಮಹಾರಥೋತ್ಸವ ಏ.5ರಂದು ಸಂಜೆ 5 ಗಂಟೆಗೆ ಹಾಗೂ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಏ.6ರಂದು ಸಂಜೆ 5 ಗಂಟೆಗೆ ಜರುಗಲಿದೆ. ಏ.7ರಂದು ಬೆಳಗ್ಗೆ 9 ಗಂಟೆಗೆ ಓಕುಳಿ ಕಾರ್ಯಕ್ರಮದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

ಏ.6 ಮತ್ತು 7ರಂದು ರಾಜ್ಯಮಟ್ಟದ ಜಿದ್ದಾಜಿದ್ದಿನ ಕುಸ್ತಿ ಪಂದ್ಯಾವಳಿಗಳು ಹಾಗೂ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಥೋತ್ಸವಕ್ಕೆ ಆಗಮಿಸುವ ಪಾದಯಾತ್ರಿಗಳಿಗಾಗಿ ಶಿವಸೈನ್ಯ ಯುವಕ ಸಂಘ ವತಿಯಿಂದ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಸಮಾರಂಭಕ್ಕೆ ಮಹೋತ್ಸವ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಅಸಗೋಡು ಜಯಸಿಂಹ (ಅಧ್ಯಕ್ಷರು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ), ಶ್ರೀ ಪ್ರಸನ್ನಕುಮಾರ್ ಐ.ಆರ್.ಎಸ್. (ಆದಾಯ ತೆರಿಗೆ ಆಯುಕ್ತರು), ತಾಲೂಕು ದಂಡಾಧಿಕಾರಿಗಳು ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು, ದೇವಸ್ಥಾನದ ಕಟ್ಟಡ ನಿರ್ಮಾಣ ಸಮಿತಿ, ಧರ್ಮದರ್ಶಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಸಗೋಡು ಗ್ರಾಮಸ್ಥರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ. ಅಸಗೋಡು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು, ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಲಾಗಿದೆ.

- - -

-30ಜೆಜಿಎಲ್1: ಅಸಗೋಡು ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ.

-30ಜೆ.ಜಿ.ಎಲ್.2: ಶ್ರೀ ಶಂಭುಲಿಂಗೇಶ್ವರ.