ಶ್ರೀಸಿದ್ಧಚಕ್ರ ಆರಾಧನಾ ಮಹೋತ್ಸವಕ್ಕೆ ಚಾಲನೆ

| Published : Jul 09 2025, 12:18 AM IST

ಸಾರಾಂಶ

ಆಷಾಢ ಮಾಸದ ಅಷ್ಟಮಿವರೆಗೆ ೮ ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮಹಾವೀರರು ಸಿದ್ಧಿಯನ್ನು ಪಡೆದು ಸಿದ್ಧರಾದ ಕಾರಣ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತದೆ. ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಪಾಪಮುಕ್ತರಾಗುವರು ಎಂಬ ನಂಬಿಕೆ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಶ್ರೀಅನಂತನಾಥಸ್ವಾಮಿ ದಿಗಂಬರ ಜೈನ ಬಸದಿ ವತಿಯಿಂದ ಎಂಟು ದಿನಗಳ ಕಾಲ ನಡೆಯುವ ಬೃಹತ್ ಶ್ರೀ ಸಿದ್ಧಚಕ್ರ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಾಲಯದ ಅರ್ಚಕ ಪಾರ್ಶ್ವನಾಥ ಇಂದ್ರ ಮಾತನಾಡಿ, ಎಂಟು ದಿನಗಳ ಕಾಲ ನಡೆಯುವ ಸಿದ್ಧಚಕ್ರ ಆರಾಧನಾ ಮಹೋತ್ಸವವನ್ನು ಹಿಂದೆ ಜೈನ ಮುನಿಗಳು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಇದನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಆಷಾಢ ಮಾಸದ ಅಷ್ಟಮಿವರೆಗೆ ೮ ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮಹಾವೀರರು ಸಿದ್ಧಿಯನ್ನು ಪಡೆದು ಸಿದ್ಧರಾದ ಕಾರಣ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತದೆ. ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಪಾಪಮುಕ್ತರಾಗುವರು ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಜೈನ ಸಮುದಾಯದ ಎಲ್ಲರೂ ಮಂಗಳ ಕಾರ್ಯದಲ್ಲಿ ಪಾಲ್ಗೊಂಡು ಪೂಜಾ ಕಾರ್ಯದಲ್ಲಿ ತೊಡಗುತ್ತಾರೆ ಎಂದರು.

ಈ ಮಂಗಳ ಕಾರ್ಯಕ್ರಮದಲ್ಲಿ ಅನಂತನಾಥ ದೇವಾಲಯ ಸಮಿತಿ, ಮಹಿಳಾ ಸಂಘ, ಜ್ವಾಲಾಮಾಲಿನಿ ಮಹಿಳಾ ಸಂಘ ಸೇರಿದಂತೆ ಹಲವು ಸಂಘಟನೆಗಳು ಸೇರಿ ಈ ಮಹೋತ್ಸವವನ್ನು ನಡೆಸುತ್ತಿದ್ದು, ನಿತ್ಯವೂ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮುಖಂಡರಾದ ಎಂ.ಜೆ.ನಾಗರಾಜು, ಶ್ರೀಧರ್, ಲೋಕೇಶ್, ರಾಕೇಶ್, ರವಿ ಸೇರಿದಂತೆ ಹಲವರು ಹಾಜರಿದ್ದರು.

ನಾಳೆ ಹಡಪದ ಅಪ್ಪಣ್ಣ ಜಯಂತಿ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಜು. ೧೦ರಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಮಂಡ್ಯ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಬಿ.ಕೆಂಪರಾಜು ತಿಳಿಸಿದರು.

ದಿವ್ಯಸಾನ್ನಿಧ್ಯವನ್ನು ಶ್ರವಣಾಶ್ರಮ ಮಠದ ಶ್ರೀಶಂಕರಾನಂದ ಗುರೂಜಿ ವಹಿಸಲಿದ್ದು, ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉಪಸ್ಥಿತಿ ವಹಿಸುವರು. ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ ಗೌರವ ಉಪಸ್ಥಿತಿ ವಹಿಸುವರು. ಶಾಸಕ ಪಿ.ರವಿಕುಮಾರ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಪಿಇಎಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ.ಎಂ.ಎಸ್.ಅನಿತಾ ಉಪನ್ಯಾಸ ನೀಡುವರು ಎಂದು ವಿವರಿಸಿದರು.

ನಿರ್ದೇಶಕ ಬಾಲು, ಬೋರಪ್ಪ, ಮುಖಂಡರಾದ ಮಂಟೆಲಿಂಗಯ್ಯ, ತ್ರಿವೇಣ್‌ಮೂರ್ತಿ ಗೋಷ್ಠಿಯಲ್ಲಿದ್ದರು.