ಸಾರಾಂಶ
ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರಿಗೆ ಮುತ್ತಿನ ಅಭಿಷೇಕ ನಡೆಸಿ, ಬೃಹತ್ ಕಡೆಗೋಲು ಸಮರ್ಪಿಸಿ, ‘ಅಭಿನವ ಚಂದ್ರಿಕಾಚಾರ್ಯ’ ಬಿರುದು ನೀಡಿ, ಭಕ್ತ ಜನರ ಸಮ್ಮುಖದಲ್ಲಿ ಪರ್ಯಾಯ ಮಠದ ಉಭಯ ಶ್ರೀಗಳು ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಗುರುಗಳಾದ, ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯ ತೀರ್ಥರ ಆಶ್ರಮ ಶತಾಬ್ದಿ ಹಾಗೂ ಬೃಂದಾವನ ಪ್ರವೇಶ ರಜತೋತ್ಸವ ನಿಮಿತ್ತ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಜೀವ ಕರ್ತೃತ್ವದ ಬಗ್ಗೆ ವಾಕ್ಯಾರ್ಥ ಗೋಷ್ಠಿ ಆಯೋಜಿಸಲಾಯಿತು.ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರ ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು.ಶ್ರೀಪಾದರಿಗೆ ಮುತ್ತಿನ ಅಭಿಷೇಕ ನಡೆಸಿ, ಬೃಹತ್ ಕಡೆಗೋಲು ಸಮರ್ಪಿಸಿ, ‘ಅಭಿನವ ಚಂದ್ರಿಕಾಚಾರ್ಯ’ ಬಿರುದು ನೀಡಿ, ಭಕ್ತ ಜನರ ಸಮ್ಮುಖದಲ್ಲಿ ಪರ್ಯಾಯ ಮಠದ ಉಭಯ ಶ್ರೀಗಳು ಸನ್ಮಾನಿಸಿದರು.ನಂತರ ಆಶೀರ್ವಚನ ನೀಡಿದ ಸೋಸಲೇ ಶ್ರೀಪಾದರು, ಪ್ರತಿಯೊಬ್ಬ ಜೀವಕ್ಕೂ ಕರ್ತೃತ್ವತೆ ಇದೆ. ಕರ್ತ್ವತ್ವ ಎಂದರೆ ಸ್ವಾತಂತ್ರ್ಯ. ಇಚ್ಚೆ ಜೀವದ್ದಾದರೂ ಅದು ಭಗವಂತನ ಅಧೀನವಾಗಿರಬೇಕು, ಹೊರತು ಸ್ವೇಚ್ಛಾಚಾರವಾಗಬಾರದು, ಭಗವಂತ ಜೀವದ ಯೋಗ್ಯತೆ ಮತ್ತು ಪೂರ್ವಜನ್ಮದ ಪುಣ್ಯದ ಆಧಾರದಲ್ಲಿ ಕೆಲಸಗಳನ್ನು ಮಾಡಿಸುತ್ತಾನೆ ಎಂದು ವಿಶ್ಲೇಷಿಸಿದರು.ಸಂದೇಶ ನೀಡಿದ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥರು, ನಾವು ಬಯಸಿದ್ದೆಲ್ಲವೂ ಆಗುವುದಿಲ್ಲ, ಅಂದ ಮೇಲೆ ಎಲ್ಲವನ್ನೂ ಭಗವಂತನಿಚ್ಛೆಗೆ ಬಿಟ್ಟುಬಿಡಬೇಕು ಎಂದರು.ಜೀವ ಕರ್ತೃತ್ವ ವಿಚಾರ ಕುರಿತು ವಿದ್ವಾಂಸರಾದ ಹರಿದಾಸ ಭಟ್ಟಾಚಾರ್ಯ, ಆಚಾರ್ಯ ವೀರನಾರಾಯಣ ಪಾಂಡುರಂಗಿ, ಉಡುಪಿ ರಾಮನಾಥ ಆಚಾರ್ಯ, ತಿರುಮಲಾಚಾರ್ಯ, ಶ್ರೀನಿಧಿ ಆಚಾರ್ಯ ಪ್ಯಾಟಿ ಮುಂತಾದ ವಿಚಾರ ಮಂಡನೆ ಮಾಡಿದರು. ವಿದ್ವಾನ್ ಪ್ರಸನ್ನಾಚಾರ್ಯರು ಉಪಸ್ಥಿತರಿದ್ದರು, ವಿದ್ವಾನ್ ಗೋಪಾಲಾಚಾರ್ಯ ನಿರೂಪಿಸಿದರು.