ಶ್ರೀಉಪ್ಪರಿಕೆ ಬಸವೇಶ್ವರ ಉತ್ಸವ: ದನಗಳ ಜಾತ್ರೆಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ

| Published : Jan 16 2024, 01:48 AM IST

ಶ್ರೀಉಪ್ಪರಿಕೆ ಬಸವೇಶ್ವರ ಉತ್ಸವ: ದನಗಳ ಜಾತ್ರೆಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಯಂತ್ರಗಳ ಯುಗದಲ್ಲಿ ಜನರು ರಾಸುಗಳನ್ನು ಸಾಕುವುದನ್ನೇ ಕಡಿಮೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರೈತ - ದನಗಳ ಬಾಂದವ್ಯ ಹೆಚ್ಚಾಗಬೇಕಿದೆ. ಜಾತ್ರೆ ಮಾಳದ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತವರಿ ಮಾಡುತ್ತಿದ್ದಾರೆ. ಎಂತಹ ಪ್ರಭಾವ ಬೀರಿದರೂ ಜಾಗ ಒತ್ತುವರಿಯಾಗಲು ಬಿಡುವುದಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕೆಆರ್‌ಎಸ್ ರೈಲ್ವೆ ನಿಲ್ದಾಣದ ಸಮೀಪ ದನಗಳ ಜಾತ್ರೆಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸೋಮವಾರ ಬಸವೇಶ್ವರ ದೇವರ ಪ್ರತಿಮೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಶ್ರೀಉಪ್ಪರಿಕೆ ಬಸವೇಶ್ವರ ಉತ್ಸವ ಮೂರ್ತಿ ಕಾವೇರಿ ನದಿಯಲ್ಲಿ ಶುದ್ಧೀಕರಿಸಿ ಮೆರವಣಿಗೆ ಮೂಲಕ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸಲಾಯಿತು. ಈ ವೇಳೆ ಗ್ರಾಮದಲ್ಲಿ ಭಕ್ತಾದಿಗಳು ಹೂ-ಹಣ್ಣು ನೀಡಿ ಪೂಜೆ ಸಲ್ಲಿಸಿದರು. ನಂತರ ದೇವರಿಗೆ ಪಂಚಾಮೃತ ಅಭಿಷೇಕ ಸಲ್ಲಿಸಿ ಅಲಂಕರಿಸಿ ಪೂಜೆ ಮಾಡಲಾಯಿತು.

ಉಪ್ಪರಿಕೆ ಶ್ರೀಬಸವೇಶ್ವರ ದೇವಸ್ಥಾನದ ಜಾತ್ರೆಮಾಳದಲ್ಲಿ ಜಾತ್ರೆಗೆ ಚಾಲನೆ ನೀಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೆಗೌಡ ನಂತರ ಜಾತ್ರೆಗೆ ಬಂದ ಎತ್ತುಗಳು, ಅದರ ಹಲ್ಲುಗಳನ್ನು ವೀಕ್ಷಿಸಿದರು. ಜಾತ್ರೆಗೆ ಬಂದಿದ್ದ ರೈತರು, ವ್ಯಾಪಾರಿಗಳ ಯೋಗ ಕ್ಷೇಮ ವಿಚಾರಿಸಿ ಕಡೆಲೆ-ಪುರಿ ಖರೀದಿಸಿ ಹಣ ನೀಡಿದರು. ಜಾತ್ರೆಯಲ್ಲಿ ಸ್ವಚ್ಛತೆ ಕಾಪಾಡಲು ವ್ಯಾಪಾರಿಗಳಲ್ಲಿ ತಿಳಿಸಿದರು.

ಈ ವೇಳೆ ಮಾತನಾಡಿದ ಜಿ.ಟಿ.ದೇವೇಗೌಡರು, ಈ ಭಾಗದಲ್ಲಿ ಹಲವು ವರ್ಷಗಳಿಂದ ದನಗಳ ಜಾತ್ರೆ ನಡೆಯುತ್ತಿದೆ. ಚುಂಚನಕಟ್ಟೆ ಜಾತ್ರೆ ನಂತರ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಗಡಿ ಭಾಗದಲ್ಲಿ ಈ ದನಗಳ ಜಾತ್ರೆ ನಡೆಯುತ್ತಿರುವುದು ನಮಗೆ ಹಿರಿಮೆಯಾಗಿದೆ ಎಂದರು.

ಇಂದಿನ ಯಂತ್ರಗಳ ಯುಗದಲ್ಲಿ ಜನರು ರಾಸುಗಳನ್ನು ಸಾಕುವುದನ್ನೇ ಕಡಿಮೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರೈತ - ದನಗಳ ಬಾಂದವ್ಯ ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜಾತ್ರೆ ಮಾಳದ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತವರಿ ಮಾಡುತ್ತಿದ್ದಾರೆ. ಎಂತಹ ಪ್ರಭಾವ ಬೀರಿದರೂ ಜಾಗ ಒತ್ತುವರಿಯಾಗಲು ಬಿಡುವುದಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಉಪ್ಪರಿಕೆ ಶ್ರೀಬಸವೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ ವಿಷಕಂಠೇಗೌಡ, ಕಾರ್ಯದರ್ಶಿ ಎಂ.ಬಿ.ಕುಮಾರ್, ಗೌರವ ಅಧ್ಯಕ್ಷ ಹಾಲೇಗೌಡ, ಹುಲಿಕೆರೆ ಗ್ರಾಪಂ ಅಧ್ಯಕ್ಷೆ ಶ್ವೇತ ಕೃಷ್ಣ, ಆನಂದೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಕೆಆರ್‌ಎಸ್ ಗ್ರಾಪಂ ಸದಸ್ಯ ದೇವರಾಜು, ಕೆಆರ್‌ಎಸ್ ಪ್ರಾ.ಆ.ಕೇ ವೈದ್ಯೆ ಡಾ.ಪ್ರಪುಲ್ಲಾ, ಶ್ರೀರಂಗಪಟ್ಟಣ ತಾಲೂಕು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಜಿ ಸುರೇಶ್, ಕೆಆರ್‌ಎಸ್ ಪೊಲೀಸ್ ಠಾಣೆ ಪಿ.ಎಸ್‌ಐ ಬಸವರಾಜು ಸೇರಿದಂತೆ ಇತರರು ಇದ್ದರು.