ಈ ಹಬ್ಬವು 1967,1982 ಹಾಗೂ 2001ರಲ್ಲಿ ಅದ್ಧೂರಿಯಾಗಿ ಜರುಗಿದ್ದು, 2020ರಲ್ಲಿ ಕೊರೊನಾದಿಂದಾಗಿ ಮುಂದೂಡಲಾಗಿದ್ದ ಹಬ್ಬವು ಇದೀಗ ಮತ್ತೆ ಗ್ರಾಮಸ್ಥರು ಹಾಗೂ ಭಕ್ತರ ಸಡಗರ ಸಂಭ್ರಮಾಚರಣೆಯೊಂದಿಗೆ ನಡೆಯಲು ಸಜ್ಜಾಗಿದೆ. ಮೇ 5 ರಂದು ಬೆಳಗ್ಗೆ 5 ರಿಂದ ಗಂಗಾ ಪೂಜೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ಮಧ್ಯಾಹ್ನ 12 ಗಂಟೆಗೆ ಹೊಸ ನೀರು ತರುವರು.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಆಲಕೆರೆ ಗ್ರಾಮದಲ್ಲಿ ನೆಲೆಯೂರಿರುವ ಶ್ರೀವೀರಭದ್ರೇಶ್ವರ ಸ್ವಾಮಿ ಕೊಂಡ ಬಂಡಿ ಉತ್ಸವಕ್ಕೆ ಸಮರೋಪಾದಿಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.ಮೇ 5ರಿಂದ ನಾಲ್ಕು ದಿನಗಳ ಕಾಲ ನಡೆಯುವ ರಾಜ್ಯದ ಮೊದಲನೇ ದೊಡ್ಡ ಕೊಂಡೋತ್ಸವದ ದಾಖಲೆ ಇದಾಗಿದ್ದು ಕೀಲಾರ ಮತ್ತು ಆಲಕೆರೆ ಗ್ರಾಮಸ್ಥರು ಜೊತೆಯಾಗಿ ಹಬ್ಬವನ್ನು ಆಚರಿಸುತ್ತಿದ್ದಾರೆ.
ಈ ಹಬ್ಬವು 1967,1982 ಹಾಗೂ 2001ರಲ್ಲಿ ಅದ್ಧೂರಿಯಾಗಿ ಜರುಗಿದ್ದು, 2020ರಲ್ಲಿ ಕೊರೊನಾದಿಂದಾಗಿ ಮುಂದೂಡಲಾಗಿದ್ದ ಹಬ್ಬವು ಇದೀಗ ಮತ್ತೆ ಗ್ರಾಮಸ್ಥರು ಹಾಗೂ ಭಕ್ತರ ಸಡಗರ ಸಂಭ್ರಮಾಚರಣೆಯೊಂದಿಗೆ ನಡೆಯಲು ಸಜ್ಜಾಗಿದೆ.ಮೇ 5 ರಂದು ಬೆಳಗ್ಗೆ 5 ರಿಂದ ಗಂಗಾ ಪೂಜೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ಮಧ್ಯಾಹ್ನ 12 ಗಂಟೆಗೆ ಹೊಸ ನೀರು ತರುವರು. ಸಂಜೆಗೆ ಬೂದನೂರಿನ ತಗಡೂರು ಶ್ರೀ ಅಂಕನಾಥೇಶ್ವರ ದೇವರ ಬರಮಾಡಿಕೊಳ್ಳುವರು.
ಮೇ 6 ರಂದು ಬೆಳಗ್ಗೆ 8.30ಕ್ಕೆ ಬಾಯಿಬೀಗ ಮತ್ತು ಹೆಜ್ಜೆ ನಮಸ್ಕಾರ ಹಾಕುವುದು. ಮಧ್ಯಾಹ್ನ 1.55ಕ್ಕೆ ಬಂಡಿ ಉತ್ಸವ ಹಾಗೂ ದೇವಸ್ಥಾನದ ಮುಂಭಾಗದಲ್ಲಿ ಕೊಂಡಕ್ಕೆ ಜೋಡಿಸಿರುವ ಸೌದೆಗೆ ಸಂಜೆ 5.05 ಕ್ಕೆ ಅಗ್ನಿಸ್ಪರ್ಶ ಮಾಡುವರು.ಮೇ 7 ರಂದು ಬೆಳಗ್ಗೆ 5 ಗಂಟೆಗೆ ಬ್ರಾಹ್ಮೀ ಮಹೂರ್ತದಲ್ಲಿ ದೇವರ ಗುಡ್ಡರು ಕೊಂಡ ಹಾಯುವರು.
ಬಳಿಕ ಕೀಲಾರ ಗ್ರಾಮಕ್ಕೆ ತೆರಳುವ ಶ್ರೀವೀರಭದ್ರೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ಗ್ರಾಮದ ಬೀದಿ ಬೀದಿಗಳಲ್ಲಿ ನಡೆಯುವುದು.ಮೇ 8 ರಂದು ಬೆಳಗ್ಗೆ 8.30 ರಿಂದ ವೀರಭದ್ರೇಶ್ವರ ಸ್ವಾಮಿ ಹಬ್ಬದ ಅಂಗವಾಗಿ ಮಹಾಪ್ರಸಾದ (ಪರ) ವ್ಯವಸ್ಥೆ ಮಾಡಲಾಗಿದೆ. ಇದೇ ದಿನ ರಾತ್ರಿ ಆಲಕೆರೆ ಗ್ರಾಮದಲ್ಲಿ ಶ್ರೀವೀರಭದ್ರೇಶ್ವರ ಸ್ವಾಮಿ ರಥೋತ್ಸವ ಜರುಗಿ ಹಬ್ಬವು ಸಂಪನ್ನಗೊಳ್ಳುವುದು.
ರಾಜ್ಯಕ್ಕೆ ಮೊದಲನೇ ಕೊಂಡ:ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮೇಲಿನ ಬಸವನ ಪ್ರತಿಮೆಗೆ ಶಾಸ್ತ್ರದ ದಾರಕಟ್ಟಿ 72 ಅಡಿ ಉದ್ದದ ಕೊಂಡಕ್ಕೆ 25 ಅಡಿ ಎತ್ತರಕ್ಕೆ 12 ಅಡಿ ಅಗಲ ಸೌದೆ ಜೋಡಿಸುವರು. ಇದು ರಾಜ್ಯದಲ್ಲಿಯೇ ಮೊದಲ ಕೊಂಡ ಎನಿಸಲಿದೆ.
ಮೂರು ಮಾಸಕ್ಕೂ ಮೊದಲೇ ಸೌದೆ ಕಡಿಯುವ ಕಾರ್ಯದಲ್ಲಿ ಕೀಲಾರ ಗ್ರಾಮಸ್ಥರು ಆಲಕೆರೆ ಗ್ರಾಮದ ಗ್ರಾಮಸ್ಥರ ಜಮೀನಿನಲ್ಲಿ ಕೀಲಾರ ಗ್ರಾಮಸ್ಥರು ಒಂದು ಮರದಲ್ಲಿ ಒಂದು ಶಾಸ್ತ್ರದ ಕೊಂಬೆ ಕಡಿದು ಕೊಂಡಕ್ಕೆ ಸೌದೆ ಸಂಗ್ರಹಿಸಿದ್ದಾರೆ.ಕೀಲಾರ ಗ್ರಾಮಸ್ಥರು ಸೌದೆ ಕಡಿದು ಕೊಂಡದ ಬಳಿಗೆ ಸೌದೆ ಸಂಗ್ರಹಿಸಿದರೆ ಆಲಕೆರೆ ಗ್ರಾಮಸ್ಥರು ಕೀಲಾರ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಮಾಡುವುದು ಕಾಲದಿಂದ ಚಾಲ್ತಿಯಲ್ಲಿದೆ. ಸಂಜೆ ನಡೆಯುವ ಬಂಡಿ ಉತ್ಸವಕ್ಕೆ ಕೀಲಾರದ ಗ್ರಾಮಸ್ಥರು ದನಗಳ ವ್ಯವಸ್ಥೆ ಮಾಡಿದರೆ ಆಲಕೆರೆ ಗ್ರಾಮಸ್ಥರು ಬಂಡಿಗಳ ವ್ಯವಸ್ಥೆ ಮಾಡುವರು.