ಸಾರಾಂಶ
ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಶಂಕರ ಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶೃಂಗೇರಿ ಶ್ರೀ ಶಾರದ ಪೀಠಾಧೀಶ್ವರರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಜು.24 ರಿಂದ ಜೂ.26ರವರೆಗೆ ಶಿವಮೊಗ್ಗದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಭಕ್ತರನ್ನು ಅನುಗ್ರಹಿಸಲಿದ್ದಾರೆ ಎಂದು ಶಿವಮೊಗ್ಗ ಶಂಕರಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಗದ್ಗುರು ದರ್ಶನದ ಸಂದರ್ಭದಲ್ಲಿ ಶ್ರೀಶೃಂಗೇರಿ ಶಂಕರ ಮಠದಲ್ಲಿ ಭಿಕ್ಷಾವಂದನೆ, ಪಾದಪೂಜೆ, ವಸ್ತ್ರ ಸಮರ್ಪಣೆ ಇತ್ಯಾದಿ ಎಲ್ಲಾ ಸೇವೆಗಳಿಗೆ ಅವಕಾಶವಿದೆ ಎಂದರು. ಜೂ.24ರಂದು ಸಂಜೆ 6ಕ್ಕೆ ಶ್ರೀಗಳು ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದು, ನಂತರ ಕೋಟೆ ರಸ್ತೆ ಮೂಲಕ ಶೋಭಾಯಾತ್ರೆ ನಡೆಯಲಿದೆ. ಸಂಜೆ 7ಕ್ಕೆ ಶ್ರೀಶೃಂಗೇರಿ ಶಂಕರಮಠದಲ್ಲಿ ಪೂರ್ಣ ಕುಂಭ ಸ್ವಾಗತ, ಧೂಳೀ ಪಾದಪೂಜೆ ನಡೆಯಲಿದೆ. 8ಕ್ಕೆ ಶ್ರೀ ಚಂದ್ರಮೌಳೇಶ್ವರ ಪೂಜೆ ಶ್ರೀಗಳಿಂದ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜೂ.25ರಂದು ಬೆಳಗ್ಗೆ 6ಕ್ಕೆ 108 ನಾರಿಕೇಳ ಗಣಹೋಮ, 9ಕ್ಕೆ ಶ್ರೀ ಜಗದ್ಗುರು ಸಾನ್ನಿಧ್ಯದಲ್ಲಿ ಪೂರ್ಣಾಹುತಿ ನಡೆಯಲಿದೆ. ನಂತರ ಶ್ರೀಗಳು ನಗರದ ವಿವಿಧ ಸಂಘ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ. ಸಂಜೆ 6ಕ್ಕೆ ಶ್ರೀ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಶಿವಮೊಗ್ಗದ 30ಕ್ಕೂ ಹೆಚ್ಚು ಭಜನ ಮಂಡಳಿಗಳ 500 ಮಾತೆಯರಿಂದ ಶ್ರೀ ಶಂಕರ ಭಗವತ್ಪಾದರ ವಿರಚಿತ “ ಕಲ್ಯಾಣವೃಷ್ಟಿಸ್ತವ ಸ್ತೋತ್ರ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಹಾಗೂ ಶ್ರೀಲಕ್ಷ್ಮೀ ನೃಸಿಂಹ ಕರುಣಾರಸ ಸ್ತೋತ್ರಗಳ ಮಹಾ ಸಮರ್ಪಣೆ ನಡೆಯಲಿದೆ, 6ಕ್ಕೆ ಗುರುವಂದನೆ ಹಾಗೂ ಶ್ರೀಗಳಿಂದ ಆರ್ಶೀವಚನ ಮತ್ತು 8ಕ್ಕೆ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ ಎಂದರು.ಜೂ.26ರಂದು ಬೆಳಗ್ಗೆ 9ಕ್ಕೆ ಶಂಕರಮಠದ ಆವರಣದಲ್ಲಿ ಸುಮಾರು 5ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಭಿನವ ವಿದ್ಯಾತೀರ್ಥ ಮಂಟಪ ನಿರ್ಮಾಣಕ್ಕೆ ಶ್ರೀಗಳು ಶಂಖು ಸ್ಥಾಪನೆ ನೆರವೇರಿಸಲಿದ್ದಾರೆ. 11ಕ್ಕೆ ಶ್ರೀ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಶ್ರೀಗಳು ಭಕ್ತಾಧಿಗಳಿಗೆ ಫಲ, ಮಂತ್ರಾಕ್ಷತೆ ವಿತರಿಸಲಿದ್ದಾರೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊ. 9844137136, 9448943937, 8971525680ರಲ್ಲಿ ಸಂಪರ್ಕಿಸಬಹುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ನಟರಾಜ್ ಭಾಗವತ್, ಶಿವಶಂಕರ್, ಕೇಶವಮೂರ್ತಿ, ಚಂದ್ರಶೇಖರ್, ಮಂಜುನಾಥ್, ಚೇತನ್, ಲಕ್ಷ್ಮೀಶ್ರೀಧರ್, ಎಸ್.ನಾಗೇಶ್, ಕೃಷ್ಣಮೂರ್ತಿ, ಸುಧೀಂದ್ರ, ರವಿಕುಮಾರ್, ವೆಂಕಟೇಶ್ ಮೂರ್ತಿ ಇದ್ದರು.