ಮಾಗಡಿ: ಪಟ್ಟಣದ ಕಲ್ಯಾಗೇಟ್ ವಿನಾಯಕಸ್ವಾಮಿಯ 37ನೇ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು

ಮಾಗಡಿ: ಪಟ್ಟಣದ ಕಲ್ಯಾಗೇಟ್ ವಿನಾಯಕಸ್ವಾಮಿಯ 37ನೇ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಬ್ರಹ್ಮರಥೋತ್ಸವದ ಪ್ರಯುಕ್ತ ವರಸಿದ್ಧಿ ವಿನಾಯಕಸ್ವಾಮಿಗೆ ಸುಪ್ರಭಾತ ಸಭೆ, ಮಂಗಳವಾದ್ಯ, ಸಂಗೀತ ಸೇವೆ, ವೇದ ಪಾರಾಯಣ, ವೇದಿಕಾರ್ಜುನ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ರಾಮತಾರಕ ಹೋಮ, ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯೇಶ್ವರ ಹೋಮ ನೆರವೇರಿತು. ಮಧ್ಯಾಹ್ನ ಶುಭಲಗ್ನದಲ್ಲಿ ಉತ್ಸವ ಮೂರ್ತಿಯನ್ನುಕೂರಿಸಿ ರಥ ಎಳೆದು ಬ್ರಹ್ಮರಥೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.

ರಾಜ್ಯ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, 37 ವರ್ಷಗಳಿಂದಲೂ ವಿನಾಯಕ ಸ್ವಾಮಿ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಿದ್ದು, ಪ್ರತಿ ವರ್ಷ ರಥೋತ್ಸವದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಕೆಶಿಪ್‌ ರಸ್ತೆ ಕಾಮಗಾರಿಯಿಂದ ದೇವಸ್ಥಾನ ಉಳಿಯಬೇಕೆಂದು ಶಾಸಕರಿಗೂ ತಿಳಿಸಿದ್ದು ದೇವಸ್ಥಾನ ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.

ಕಾನ್ಫಿಡೆಂಟ್ ಗ್ರೂಪ್ ಮಾಲೀಕ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಸಿದ ಎಚ್.ಎಂ.ರೇವಣ್ಣ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಇಡಿ ವರ್ತಿಸುತ್ತಿದೆ. ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದ್ದು ಸತ್ಯಾಸತ್ಯತೆ ತನಿಖೆಯಿಂದ ತಿಳಿಯಲಿದೆ. ಕೇಂದ್ರದ ವರ್ತನೆಯನ್ನು ಜನತೆ ನೋಡುತ್ತಿದ್ದಾರೆ ಎಂದು ಹೇಳಿದರು.

ಪ್ರಸಾದ ವಿನಿಯೋಗ: ವಿನಾಯಕ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ವಿನಾಯಕಸ್ವಾಮಿ ಭಕ್ತರಿಂದ ಸಾರ್ವಜನಿಕರು ಅನ್ನ ಪ್ರಸಾದ ಸ್ವೀಕರಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.

ಈ ವೇಳೆ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ನಟರಾಜ ಶೆಟ್ಟರು, ಕಾರ್ಯದರ್ಶಿ ಸತೀಶ್ ಪ್ರಸಾದ್, ಖಜಾಂಚಿ ನಾರಾಯಣರಾವ್ ಮುಖಂಡರಾದ ಎಂ.ಎನ್ ಮಂಜು, ರೂಪೇಶ್ ಕುಮಾರ್, ಸತೀಶ್, ಪುರುಷೋತ್ತಮ್ ಪಟೇಲ್, ಶಿವರಾಜ್, ಎಂ.ಜಿ.ಮಂಜುನಾಥ್, ಪ್ರಧಾನ ಅರ್ಚಕರಾದ ಗೋಪಾಲ ದೀಕ್ಷಿತ್, ಸೋಮಸುಂದರ ದೀಕ್ಷಿತ್, ಕಿರಣ್ ದೀಕ್ಷಿತ್ ಇತರರು ಭಾಗವಹಿಸಿದ್ದರು.