ಶಿವಮೊಗ್ಗ: ಶ್ರೀಗಂಧ ಸಂಸ್ಥೆ ವತಿಯಿಂದ ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್ ಬೆಂಗಳೂರು ಹಾಗೂ ಭಜನಾಪರಿಷತ್ ಶಿವಮೊಗ್ಗ ಇವರ ಸಹಯೋಗದಲ್ಲಿ ಮಾ.30ರಂದು ಬೆಳಗ್ಗೆ 9.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಜನಾಪರಿಷತ್ ಅಧ್ಯಕ್ಷ ಸಂದೇಶ್ ಉಪಾಧ್ಯ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹಾಗೂ ಬಾಳಗಾರು ಮಠದ ಕಿರಿಯ ಪೀಠಾಧಿಪತಿ ಶ್ರೀ ಅಕ್ಷೆಭ್ಯ ರಾಮಪ್ರಿಯತೀರ್ಥ ಶ್ರೀಪಾದರು ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.ಅಧ್ಯಕ್ಷತೆಯನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ವಹಿಸಲಿದ್ದು, ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್ ಶಿವಮೊಗ್ಗ ಘಟಕದ ಅಧ್ಯಕ್ಷ ಜೋಯಿಸ್ ರಾಮಾಚಾರ್, ಮಾಜಿ ಜಿಪಂ ಸದಸ್ಯ ಹಾಗೂ ಶ್ರೀಗಂಧ ಸಂಸ್ಥೆ ಕೋಶಾಧ್ಯಕ್ಷ ಕೆ.ಈ.ಕಾಂತೇಶ್ ಉಪಸ್ಥಿತರಿರುವರು ಎಂದರು.
ಈ ಕಾರ್ಯಕ್ರಮಕ್ಕೆ ಭಜನಾಮಂಡಳಿಗಳ ಮಾತೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಆಸಕ್ತರು ಸೇರುವ ನಿರೀಕ್ಷೆ ಇದೆ ಎಂದರು.ಶ್ರೀಗಂಧ ಸಂಸ್ಥೆ ಕೋಶಾಧ್ಯಕ್ಷ ಕೆ.ಈ.ಕಾಂತೇಶ್ ಮಾತನಾಡಿ, ಈ ಕಾರ್ಯಕ್ರಮದ ಅಂಗವಾಗಿ ಮಾ.13ರಿಂದ 15ರವರೆಗೆ ನಗರದ ಸುಮಾರು 700ಕ್ಕೂ ಹೆಚ್ಚು ಮನೆಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆದಿದ್ದು, ಎಲ್ಲರಿಗೂ ಸಂಸ್ಥೆ ವತಿಯಿಂದ ಪಾರಾಯಣದ ಪುಸ್ತಕವನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಹಿಂದುಳಿದ ವಿವಿಧ ಸಮಾಜದವರು ಭಾಗವಹಿಸುತ್ತಿದ್ದು, 1200ಕ್ಕೂ ಹೆಚ್ಚು ಮನೆಗಳಲ್ಲಿ ಪಾರಾಯಣ ನಡೆಯುತ್ತಿದೆ ಎಂದರು.
ಗೋಷ್ಠಿಯಲ್ಲಿ ಜೋಯಿಸ್ ರಾಮಾಚಾರ್, ಶ್ರೀಕಾಂತ್, ಕೆ.ಜಿ.ಕುಮಾರಶಾಸ್ತ್ರಿ, ಶುಭ ರಾಘವೇಂದ್ರ, ನಿರ್ಮಲಾ, ಕುಬೇಂದ್ರಪ್ಪ, ಹಲವರಿದ್ದರು.