ಸಾರಾಂಶ
ಬದುಕಿನಲ್ಲಿ ಸಂಪಾದನೆ ಮಾಡುತ್ತೇವೆ. ಸಂಪಾದಿಸಿದ ಹಣವನ್ನು ಯಾವ ಕಾಲದಲ್ಲಿ ಯಾವುದಕ್ಕೆ ಉಪಯೋಗ ಮಾಡಿದೇವು ಎಂಬ ತಿಳವಳಿಕೆ ಇರಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಬಿಎಸ್‌ಎಸ್ ವಿದ್ಯೋದಯ ಶಾಲೆಯಲ್ಲಿ ಆಯೋಜಿಸಿರುವ 7 ದಿನಗಳ ಭಗಿನಿ ಸಂಗೀತೋತ್ಸವವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂಜೆ ಉದ್ಘಾಟಿಸಿದರು.ಬಳಿಕ ಬಿಎಸ್‌ಎಸ್ ವಿದ್ಯೋದಯ ಶಾಲೆಯ 350 ಜನ ಕೂರುವ ಸುಸಜ್ಜಿತ ಸಭಾಂಗಣ, ಗ್ರಂಥಾಲಯ ಶಬ್ಧಗಳ ಪ್ರಪಂಚ, ಮಕ್ಕಳ ಚಟುವಟಿಕೆಯ ಆನಂದ ಕಕ್ಷ, ಕಂಪ್ಯೂಟರ್ ಲ್ಯಾಬ್ ಶೂನ್ಯ, ಗಣಿತ ಪ್ರಯೋಗಾಲಯ ಲೀಲಾವತಿ, ಗ್ರಹಂ ಚೆಸ್ ರೂಂ ಕೊಠಡಿಯನ್ನು ಪೇಜಾವರ ಶ್ರೀಗಳು ಉದ್ಘಾಟಿಸಿದರು.
ನಂತರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಬದುಕಿನಲ್ಲಿ ಸಂಪಾದನೆ ಮಾಡುತ್ತೇವೆ. ಸಂಪಾದಿಸಿದ ಹಣವನ್ನು ಯಾವ ಕಾಲದಲ್ಲಿ ಯಾವುದಕ್ಕೆ ಉಪಯೋಗ ಮಾಡಿದೇವು ಎಂಬ ತಿಳವಳಿಕೆ ಇರಬೇಕು. ಇವತ್ತು ಎಷ್ಟು ಸಂಪಾದನೆ ಮಾಡಿದರೂ ಸಾಲುತ್ತಿಲ್ಲ. ದುಡ್ಡು ನಮ್ಮ ಹತ್ತಿರ ಬರಬೇಕೆಂದು ಕಾಯುತ್ತಿದ್ದಾರೆ. ಇದು ಮಹಾಲಕ್ಷ್ಮೀಯಾದ ಮಗಳನ್ನು ರಾಕ್ಷಸನಿಗೆ ಕೊಟ್ಟಂತಹ ಪರಿಸ್ಥಿತಿ ಅಪಾಯಕಾರಿ ಎಂದರು.ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಬಿಎಸ್‌ಎಸ್ ವಿದ್ಯೋದಯ ಶಾಲೆ ಆರಂಭಕ್ಕೆ ಗುರುಗಳ ಅನುಗ್ರಹ ಇದೆ ಮತ್ತು ಈ ನೆಲದಲ್ಲಿ ನೂರು ವರ್ಷಗಳ ಕಾಲ ತಪಸ್ಸು ಮಾಡಿದ ಚೇತನಗಳಿಂದ ಈ ಕೆಲಸ ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಬಿಎಸಎಸ್ ವಿದ್ಯೋದಯ ಸಂಸ್ಥೆ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್ ಮಾತನಾಡಿ, ಕಳೆದ ವರ್ಷ ವಿದ್ಯಾಸಂಸ್ಥೆ ಆರಂಭಿಸಿದಾಗ 211 ಮಕ್ಕಳು ದಾಖಲಾಗಿದ್ದರು. ಅವರಲ್ಲಿ ಮೇಘಾಲಯದ 18 ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ಕೊಡಲಾಗುತ್ತದೆ. ಈ ವರ್ಷ ಏಪ್ರಿಲ್ ನಲ್ಲಿ 160 ಮಕ್ಕಳು ದಾಖಲಾಗಿದ್ದಾರೆ. 300 ಮಕ್ಕಳು ದಾಖಲಿಸುವ ನಮ್ಮ ಗುರಿ ನೆರವೇರಲಿದೆ ಎಂದರು.ಇದೇ ವೇಳೆ ವಿದ್ಯಾಸಂಸ್ಥೆಯ ವಿವಿಧ ಚಟುವಟಿಕೆಗಳನ್ನು ಆರಂಭಿಸಲು ನೆರವಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಜಗನ್ನಾಥ್ ಶಣೈ, ಕಾರ್ಯದರ್ಶಿ ಶ್ರೀನಿವಾಸ, ಭಗಿನಿ ಸಂಗೀತೋತ್ಸವದ ಅಧ್ಯಕ್ಷ ಕೆ.ಎಸ್. ಗುರುರಾಜ್ ಇದ್ದರು. ಸುಜಾತ ಭಟ್ ಪ್ರಾರ್ಥಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಬಾಲು ಮಾಸ್ತಿ, ಸಿ.ಎಸ್. ಕೇಶವಚಂದ್ರ ಮತ್ತು ಎಂ. ಶ್ರೀನಿಧಿ ಅವರಿಂದ ವೀಣಾ- ವೇಣು- ವಯಲಿನ್ ವಾದನ ಜರುಗಿತು.