ವಿಜೃಂಭಣೆಯಿಂದ ನಡೆದ ಶ್ರೀಬಡಗೂಡಮ್ಮದೇವಿ ಕೊಂಡೋತ್ಸವ, ರಥೋತ್ಸವ

| Published : May 05 2024, 02:12 AM IST

ವಿಜೃಂಭಣೆಯಿಂದ ನಡೆದ ಶ್ರೀಬಡಗೂಡಮ್ಮದೇವಿ ಕೊಂಡೋತ್ಸವ, ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಬಡಗೂಡಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 1ರಂದು ಅಮ್ಮನವರಿಗೆ ಹೂವಿನಚಪ್ಪರ ಹಾಗೂ ಪಟ್ಟಣದ ಒಳಸುತ್ತಿನ ಮೆರವಣಿಗೆ ನಡೆಯಿತು. ಮೇ 2ರ ಗುರುವಾರ ಹತ್ತು ಹಳ್ಳಿಗಳ ಗ್ರಾಮಸ್ಥರಿಂದ ಇಡೀರಾತ್ರಿ ರಂಗಕುಣಿತ, ಪೂಜಾ ಕಾರ್ಯಗಳು ನೆರವೇರಿದವು. ಮೇ 3ರ ಶುಕ್ರವಾರ ಬೆಳಗಿನಿಂದ ಸಂಜೆವರೆಗೆ ಅಲಂಕಾರಭೂಷಿತಳಾದ ಶ್ರೀ ಬಡಗೂಡಮ್ಮದೇವಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣ ಸೇರಿದಂತೆ ನೆರೆಯ ಹತ್ತು ಗ್ರಾಮಗಳ ಅಧಿದೇವತೆ ಶ್ರೀಬಡಗೂಡಮ್ಮದೇವಿ ಕೊಂಡೋತ್ಸವ, ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಜೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಮೇ 1ರಂದು ಅಮ್ಮನವರಿಗೆ ಹೂವಿನಚಪ್ಪರ ಹಾಗೂ ಪಟ್ಟಣದ ಒಳಸುತ್ತಿನ ಮೆರವಣಿಗೆ ನಡೆಯಿತು. ಮೇ 2ರ ಗುರುವಾರ ಹತ್ತು ಹಳ್ಳಿಗಳ ಗ್ರಾಮಸ್ಥರಿಂದ ಇಡೀರಾತ್ರಿ ರಂಗಕುಣಿತ, ಪೂಜಾ ಕಾರ್ಯಗಳು ನೆರವೇರಿದವು. ಮೇ 3ರ ಶುಕ್ರವಾರ ಬೆಳಗಿನಿಂದ ಸಂಜೆವರೆಗೆ ಅಲಂಕಾರಭೂಷಿತಳಾದ ಶ್ರೀ ಬಡಗೂಡಮ್ಮದೇವಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಹೋಮ-ಹವನಾದಿ ಕಾರ್ಯಕ್ರಮಗಳೊಂದಿಗೆ ಅಭಿಷೇಕ, ಮಹಾಮಂಗಳಾರತಿ ನಂತರ ಸಂಜೆ ಕೊಂಡೋತ್ಸವಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

ಶನಿವಾರ ಬೆಳಗಿನ ಜಾವ 5 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದೇವಿಯ ದೇವರಗುಡ್ಡಪ್ಪ ಪೂಜೆಯೊಂದಿಗೆ ಕೊಂಡ ಹಾಯ್ದರು. ಮಧ್ಯಾಹ್ನ ಪಟ್ಟಣದ ಪಡುವಲಪಟ್ಟಣ ರಸ್ತೆಯ ಬಡಗೂಡಮ್ಮದೇವಿಯ ನೂರಾರು ವಕ್ಕಲುಗಳು ತಂಬಿಟ್ಟು ಬಾಳೆಹಣ್ಣು ತುಂಬಿದ ಬುಟ್ಟಿ ಸಮೇತ, ಶ್ರೀ ದೇವಿ ಉತ್ಸವ ಮೂರ್ತಿಯನ್ನು ಸರ್ವಾಲಂಕೃತ ಟ್ರ್ಯಾಕ್ಟರ್‌ನಲ್ಲಿರಿಸಿ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಮೂಲಕ ಟಿ.ಬಿ. ಬಡಾವಣೆಯ ಮೂಲ ದೇವಸ್ಥಾನಕ್ಕೆ ಕೊಂಡೊಯ್ದರು.

ಸಂಜೆ 5.30ರಗೋಧೂಳಿ ಲಗ್ನದಲ್ಲಿ ನಡೆದ ಅಮ್ಮನವರ ರಥೋತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಸ್ಥರು ಮತ್ತು ನಾಡಿನ ವಿವಿದೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು, ರಥದ ಕಳಶಕ್ಕೆ ಬಾಳೆಹಣ್ಣು ಜವನ ಎಸೆದು ತಮ್ಮ ಭಕ್ತಿಭಾವ ಸಮರ್ಪಣೆ ಮಾಡಿದರು.

ನಾಳೆ ವಿದ್ಯುತ್‌ ವ್ಯತ್ಯಯಮಂಡ್ಯ: ತಾಲೂಕಿನ ಬಸರಾಳು 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮೇ 6 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಬಸರಾಳು, ಶಿವಪುರ, ಬೇಬಿ, ಕಂಬದಹಳ್ಳಿ, ಬಿದರಕಟ್ಟೆ, ಮಾರಸಿಂಗನಹಳ್ಳಿ, ಅಂಕುಶಾಪುರ, ಬೆನ್ನಹಟ್ಟಿ, ಶಾನಭೋಗನಹಳ್ಳಿ, ಬೊಮ್ಮನಹಳ್ಳಿ, ಅನುಕುಪ್ಪೆ, ಮನುಗನಹಳ್ಳಿ, ಎಂ ಹಟ್ನ, ಗಣಿಗ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ನಲ್ಲಿ ವ್ಯತ್ಯಯ ಉಂಟಾಗುವುದರಿಂದ ಸಹಕರಿಸಬೇಕೆಂದು ಮಂಡ್ಯ ಸೆಸ್ಕ್ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 7ಕ್ಕೆ ವಿಶ್ವ ಮಲೇರಿಯಾ ದಿನಾಚರಣೆಮಂಡ್ಯ: ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಮೇ 7ರಂದು ಬೆಳಗ್ಗೆ 10 ಗಂಟೆಗೆ ಎಸ್.ಡಿ.ಜಯರಾಮ್ ಪ್ಯಾರಮೆಡಿಕಲ್ ವಿದ್ಯಾರ್ಥಿಗಳಿಂದ ನಗರದ ತಮಿಳು ಕಾಲೋನಿಯಿಂದ ಬೆಂಗಳೂರು-ಮೈಸೂರು ಮುಖ್ಯ ರಸ್ತೆ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಜಾಥಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಲಿದ್ದು, ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸಿಫ್‌ ಭಾಗವಹಿಸಲಿದ್ದಾರೆ.