ಸಾರಾಂಶ
-ಮರಳು ದಕ್ಕಾದಲ್ಲಿ ಮೃತಪಟ್ಟ ಯುವಕನ ಸಾವಿಗೆ ಕಾರಣನಾದ ಆರೋಪಿ ಬಂಧನ
-----ಕನ್ನಡಪ್ರಭವಾರ್ತೆ ಕಲಬುರಗಿ
ರಾಜಕೀಯವಾಗಿ ಬಿರುಗಾಳಿ ಎಬ್ಬಿಸಿದ್ದ ಹಾಗೂ ಹಲವಾರು ಸಘಟನೆಗಳವರ ಆಕ್ರೋಶಕ್ಕೆ ಕಾರಣವಾಗಿದ್ದಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗುಂಪಾ ಸೀಮಾಂತರದ ಹಫೀಸ್ ರಂಜೋಳ ಅವರಿಗೆ ಸೇರಿದ್ದ ಕಾಗಿಣಾ ನದಿ ಮರಳು ದಕ್ಕಾದಲ್ಲಿ (ತಗ್ಗು) ಮೃತಪಟ್ಟ ಬೆಳಗುಂಪಾ ಗ್ರಾಮದ ಶ್ರೀಧರ್ ತಂದೆ ಅಮೃತ ನವಲಾಕ್ ಸಾವಿಗೆ ಅಸಲಿ ಕಾರಣ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತ ಶ್ರೀಧರ್ ತಾಯಿ ಚೆನ್ನಮ್ಮ ಅವರು ನೀಡಿದ ದೂರಿನ ಅನ್ವಯ ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕಗ್ಗಂಟಾದ ಈ ಪ್ರಕರಣವನ್ನು ಭೇದಿಸಲು ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ್, ಶಹಾಬಾದ್ ಡಿಎಸ್‍ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಮಾಡಬೂಳ ಪಿಎಸ್‍ಐ ಶೀಲಾದೇವಿ, ಎಎಸ್‍ಐ ಗುಂಡಪ್ಪ, ಆರ್‌ಎಸ್‍ಐ ಉಪಳಪ್ಪ, ಎಪಿಸಿ ಮಂಜುನಾಥ, ಸಿಬ್ಬಂದಿ ವೀರಶೆಟ್ಟಿ, ನಂದಕುಮಾರ, ಕಮಲಾಕರ್, ಮಾಳಗೊಂಡ, ಪ್ರಶಾಂತ, ಅರುಣ, ಕೃಷ್ಣಾ, ಸಂಗಣ್ಣ, ಚಂದ್ರಶೇಖರ, ರಮೇಶ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
-----------....ಬಾಕ್ಸ್....
ಬೆಳಗುಂಪಾದ ಈಶ್ವರಪ್ಪ ಬಂಧಿಸಿದಾಗ ಹೊರಬಿದ್ದ ಸತ್ಯಶಂಕೆಯ ಹಿನ್ನೆಲೆಯಲ್ಲಿ ಬೆಳಗುಂಪಾ ಗ್ರಾಮದ ಈಶಪ್ಪ ಅಲಿಯಾಸ್ ವಿಶ್ವನಾಥ ಅಲಿಯಾಸ್ ವಿಶ್ವರಾಧ್ಯ ತಂದೆ ರುದ್ರಪ್ಪ ವಿಶ್ವಕರ್ಮ (32) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈಶಪ್ಪ ಅಲಿಯಾಸ್ ವಿಶ್ವನಾಥ ಮದ್ಯ ಸೇವಿಸಲು ಬೈಕ್ ಮೇಲೆ ಬೆಳಗುಂಪಾ ಗ್ರಾಮದಿಂದ ಇವಣಿ ಗ್ರಾಮಕ್ಕೆ ತೆರಳಿ ಮದ್ಯ ಸೇವಿಸಿದ್ದು, ಶ್ರೀಧರ್ ಸಹ ಮದ್ಯ ಸೇವಿಸಿದ್ದ. ನಂತರ ವಿಶ್ವನಾಥ ಬೈಕ್ ಮೇಲೆ ಬೆಳಗುಂಪಾ ಗ್ರಾಮಕ್ಕೆ ಹೋಗಬೇಕೆಂದಾಗ, ಗ್ರಾಮಸ್ಥರು ಶ್ರೀಧರ್‌ನನ್ನು ನೋಡಿ ಈತನು ನಿಮ್ಮೂರಿನವನೇ ಆಗಿದ್ದಾನೆ, ಆತನಿಗೆ ನಶೆಯಾಗಿದ್ದು ಕರೆದೊಯ್ಯುವಂತೆ ಹೇಳಿದಾಗ, ಶ್ರೀಧರ್‌ನನ್ನು ಬೈಕ್ ಹಿಂದೆ ಕೂರಿಸಿಕೊಂಡು ಬೆಳಗುಂಪಾ ಕಡೆಗೆ ಹೋಗುತ್ತಿದ್ದಾಗ, ಶ್ರೀಧರ್ ಮತ್ತೆ ಮದ್ಯ ಸೇವಿಸಲು ಇಚ್ಛಿಸಿದ್ದ.
-------ಹೊಂಡದ ಬಳಿ ಜಗಳ: ಮರಳು ದಕ್ಕಾದ ತಗ್ಗಿನಲ್ಲಿ ನೀರು ಕುಡಿಯಲು ಹೋಗಿ ಮತ್ತೆ ಮದ್ಯ ಸೇವಿಸಿದ್ದಾರೆ. ವಿಶ್ವನಾಥ ಮದ್ಯದ ಅಮಲಿನಲ್ಲಿ ಹಿಂದೆ ಮಹಿಳೆಯೊಬ್ಬರ ವಿಷಯದಲ್ಲಿ ಜಗಳ ತೆಗೆದು ಶ್ರೀಧರ್‌ಗೆ ಬೈಯ್ದಿದ್ದಾನೆ. ಶ್ರೀಧರ್ ಸಹ ಮರಳಿ ಬೈಯ್ದಿದಕ್ಕೆ ವಿಶ್ವನಾಥ ಶ್ರೀಧರ್ ಎಡ ಮೆಲಕಿಗೆ ಜೋರಾಗಿ ಹೊಡೆದಿದ್ದರಿಂದ ಶ್ರೀಧರ್ ಮೃತಪಟ್ಟಿದ್ದಾನೆ.
ಬಳಿಕ ವಿಶ್ವನಾಥ ಶ್ರೀಧರ್ ಕೈಯಲ್ಲಿದ್ದ ಬೆಳ್ಳಿ ಖಡೆ, ಮೊಬೈಲ್ ತೆಗೆದುಕೊಂಡು ಶವವನ್ನು ನೀರಿನ ತಗ್ಗಿಗೆ ನೂಕಿ, ಬೈಕ್ ಮೇಲೆ ಗ್ರಾಮಕ್ಕೆ ತೆರಳಿದ್ದಾನೆ. ಮೊಬೈಲ್, ಕೈಖಡೆ ತನ್ನ ಬಳಿಯೇ ಇಟ್ಟುಕೊಂಡರೆ ಸಿಕ್ಕಿಬೀಳಬಹುದೆಂದು ವಿಶ್ವನಾಥ ಅವನ್ನು ಶ್ರೀಧರ್ ಸಹೋದರನ ಕೈಗೆ ಒಪ್ಪಿಸಿ, ನಿಮ್ಮ ತಮ್ಮನಿಗೆ ನಶೆಯಾಗಿದ್ದರಿಂದ ಇವಣಿ ಅಡ್ಡದಾರಿಯಲ್ಲಿಯೇ ಬಿಟ್ಟಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಇದನ್ನು ನಂಬಿ ಮೃತನ ಮನೆಯವರು ಶ್ರೀಧರ್‌ನನ್ನು ಎಲ್ಲಾ ಕಡೆ ಹುಡುಕಾಡಿ ಶವ ದೊರೆತ ನಂತರ ಶ್ರೀಧರ್ ಆಕಸ್ಮಿಕ ನೀರಿನಲ್ಲಿ ಬಿದ್ದು ಮೃತಪಟ್ಟ ಬಗ್ಗೆ ದೂರು ಸಲ್ಲಿಸಿದ್ದರು.ಪ್ರಕರಣದ ಬೆನ್ನು ಹತ್ತಿದ ಪೊಲೀಸರು ತನಿಖೆ ನಡೆಸಿ ಸತ್ಯಾಂಶ ಬಯಲಿಗೆ ಎಳೆದಿದ್ದಾರೆ. ವಿಚಾರಣೆ ನಂತರ ಆರೋಪಿ ಈಶಪ್ಪ ಅಲಿಯಾಸ್ ವಿಶ್ವನಾಥನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಾರ್ಯವನ್ನು ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಸಿದ್ದಾರೆ.