ಸ್ಥಳೀಯ ಭಾಷೆ ಒಗ್ಗಿಸಿಕೊಂಡ ಶ್ರೀಧರ್‌: ಡಾ.ದೊಡ್ಡರಂಗೇಗೌಡ

| Published : Mar 04 2025, 12:31 AM IST

ಸಾರಾಂಶ

ಚಾಮರಾಜನಗರದ ಸಾಹಿತಿ ಕೆ.ಶ್ರೀಧರ್ (ಕೆ.ಸಿರಿ) ಅವರ 4 ಪುಸ್ತಕಗಳು ಬೆಂಗಳೂರಿನ ಕಾವ್ಯ ಸ್ಪಂದನಾ ಪ್ರಕಾಶನ ಹಾಗೂ ಅನ್ವೇಷಣಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡರು ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇಲ್ಲಿನ ಸಾಹಿತಿ ಕೆ.ಶ್ರೀಧರ್ (ಕೆ.ಸಿರಿ) ಅವರ 4 ಪುಸ್ತಕಗಳನ್ನು ಬೆಂಗಳೂರಿನ ಕಾವ್ಯ ಸ್ಪಂದನಾ ಪ್ರಕಾಶನ ಹಾಗೂ ಅನ್ವೇಷಣಾ ಸಾಂಸ್ಕೃತಿಕ ಅಕಾಡೆಮಿ (ರಿ) ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡರು ಲೋಕಾರ್ಪಣೆಗೊಳಿಸಿದರು.

ತಾಲೂಕಿನ ತಮ್ಮಡಹಳ್ಳಿ ಗ್ರಾಮ ಆಡಳಿತ ಅಧಿಕಾರಿ ಕೆ.ಶ್ರೀಧರ್ (ಕೆ.ಸಿರಿ) ಅವರ 4 ಪುಸ್ತಕಗಳಾದ ಗೌರಿಮಕ್ಕಳು (ಕಥಾಸಂಕಲನ), ದೊಡ್ಡಸಂಪಿಗೆ (ಕಥಾಸಂಕಲನ), ಒಡಪಾಡು (ಕಥಾಸಂಕಲನ) ಮತ್ತು ಪಂಚಮುಖಿ (ಕವಿತೆಗಳು) ಪುಸ್ತಕಗಳನ್ನುಲೋಕಾರ್ಪಣೆಗೊಳಿಸಿ ಮಾತನಾಡಿ, ಕೆ.ಶ್ರೀಧರ್ (ಕೆ.ಸಿರಿ) ಅವರು ಬಳ್ಳಾರಿಯ ಮೂಲದವರಾದರೂ ಚಾಮರಾಜನಗರದ ಭಾಷೆಗೆ ತನ್ನನ್ನು ತಾನು ಒಗ್ಗಿಕೊಂಡಿರುವುದು ವಿಶೇಷ. ಈ ನಾಲ್ಕು ಪುಸ್ತಕಗಳು ಭಿನ್ನ ಭಿನ್ನ ಆಯಾಮಗಳನ್ನೊಳಗೊಂಡಿವೆ ಎಂದರು.

ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಕೆ.ಶ್ರೀಧರ್ ಅವರು ಕೆ.ಸಿರಿ ಉಪನಾಮದಿಂದ ಪ್ರಸಿದ್ಧರಾಗಿದ್ದು, ಇವರ ಕಥೆಗಳಲ್ಲಿ ಬಡತನ, ರೈತರ ಸಂಕಷ್ಟಗಳು ದಮನಿತರ ನೋವುಗಳಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕೆ.ಶ್ರೀಧರ್ (ಕೆ.ಸಿರಿ) ಪಂಚಮುಖಿಯಲ್ಲಿನ ಮೊದಲನೇ ಕವಿತೆ ಓದಿ ಹೇಳುವ ಮುಖಾಂತರ ಪುಸ್ತಕಗಳಲ್ಲಿ ಸಮಾನತೆಯ ಕೂಗು ಇದೆ ಎಂದು ಹೇಳಿದರು. ಕೆ.ಶ್ರೀಧರ್ (ಕೆ.ಸಿರಿ) ಚಾಮರಾಜನಗರದ ಭರವಸೆಯ ಲೇಖಕರಲ್ಲಿ ಒಬ್ಬರು ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದ ಭದ್ರಾವತಿ ರಾಮಾಚಾರಿ, ನಟ ಸುಚೇಂದ್ರ ಪ್ರಸಾದ್, ಪುಸ್ತಕಗಳ ಲೇಖಕ ಕೆ.ಶ್ರೀಧರ್ (ಕೆ.ಸಿರಿ) ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಾರ್ವಜನಿಕರು, ರೈತರು, ಕಂದಾಯ ಇಲಾಖೆ ಸಿಬ್ಬಂದಿ ಆಗಮಿಸಿದ್ದರು.