ಸಾರಾಂಶ
ಬಸವನಬಾಗೇವಾಡಿ: ತಾಲೂಕಿನ ಆರೂಢನಂದಿಹಾಳ ಗ್ರಾಮದ ಶ್ರೀಗುರು ಆರೂಢರ 42ನೇ ಜಾತ್ರಾಮಹೋತ್ಸವ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಆರೂಢರ ಐಕ್ಯ ಮಂಟಪಕ್ಕೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಗಿತ್ತು. ಅಭಿಷೇಕದ ಬಳಿಕ ಕಳಸವನ್ನು ಗಂಗಸ್ಥಳಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ನಂತರ ಡೊಳ್ಳಿನ ಮೇಳದೊಂದಿಗೆ ಗ್ರಾಮದಲ್ಲಿ ಆರೂಢರ ಪಲ್ಲಕ್ಕಿ ಉತ್ಸವ ಕುಂಭಮೇಳದೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ. ಶ್ರೀಗುರು ಆರೂಢರು ಸಾಧನೆಗೈದ ಕೊಂಪಿಗೆ ತೆರಳಿ ನಂತರ ಶ್ರೀಮಠಕ್ಕೆ ಆಗಮಿಸುತ್ತದೆ. ಗ್ರಾಮದ ಗುರುನಗೌಡ ಪಾಟೀಲ, ಬಸಯ್ಯ ಹಿರೇಮಠ, ರಾಮನಗೌಡ ಹಳ್ಳಿ, ಕೆಂಚು ವಾಲೀಕಾರ, ನಿಂಗಣ್ಣ ಮದರಿ ಅವರ ಮನೆಗಳಿಂದ ಕಳಸ, ಹಗ್ಗ, ಛತ್ರಿ-ಛಾಮರಗಳನ್ನು ವಾದ್ಯ-ಮೇಳದೊಂದಿಗೆ ಮರಳಿತು. ಶ್ರೀಗುರು ಆರೂಢರ ರಥೋತ್ಸವಕ್ಕೆ ಕಡಕೋಳ ಹಿರೇಮಠದ ರಾಜಗುರು ಮಹಾಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಭಕ್ತರ ಜಯಘೋಷದೊಂದಿಗೆ ಶ್ರೀಮಠದಿಂದ ಯಾಳವಾರ ರಸ್ತೆಯ ಪಾದಗಟ್ಟೆವರೆಗೆ ಆರೂಢರ ರಥೋತ್ಸವ ಸಂಭ್ರಮದಿಂದ ಜರುಗಿತು. ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.