ಸಾರಾಂಶ
ಬನಹಟ್ಟಿಯ ಆರಾಧ್ಯ ದೈವ ಶ್ರೀಕಾಡಸಿದ್ಧೇಶ್ವರ ಜಾತ್ರೆಯ ೩ನೇ ಹಾಗೂ ಕೊನೆ ದಿನವಾದ ಗುರುವಾರ ಕಾಡಸಿದ್ದೇಶ್ವರ ಕಳಸೋತ್ಸವ ಕಾರ್ಯ ಸಂಪನ್ನಗೊಂಡಿತು. ಶ್ರೀಕಾಡಸಿದ್ದೇಶ್ವರ ಮಹಾರಾಜ ಕೀ ಜೈ ಎಂಬ ಘೋಷಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯ ಆರಾಧ್ಯ ದೈವ ಶ್ರೀಕಾಡಸಿದ್ಧೇಶ್ವರ ಜಾತ್ರೆಯ ೩ನೇ ಹಾಗೂ ಕೊನೆ ದಿನವಾದ ಗುರುವಾರ ಕಾಡಸಿದ್ದೇಶ್ವರ ಕಳಸೋತ್ಸವ ಕಾರ್ಯ ಸಂಪನ್ನಗೊಂಡಿತು. ಶ್ರೀಕಾಡಸಿದ್ದೇಶ್ವರ ಮಹಾರಾಜ ಕೀ ಜೈ ಎಂಬ ಘೋಷಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿತು.ಗುರುವಾರ ನಗರದ ಮಂಗಳವಾರ ಪೇಟೆಯಿಂದ ನಗರ ಪ್ರಮುಖ ಬೀದಿಗಳಲ್ಲಿ ನಡೆದ ಕಳಸೋತ್ಸವ ನಂದಿಕೋಲು, ಕರಡಿ ಮಜಲು, ಸನಾದಿ ಹಾಗೂ ಸಕಲ ವಾದ್ಯಗೋಷ್ಠಿಗಳೊಂದಿಗೆ ಕಾರ್ಯಕ್ರಮ ವೈಭವದಿಂದ ರಾತ್ರಿವರೆಗೂ ನಡೆಯಿತು.
ಮಧ್ಯಾಹ್ನ ೩ ಗಂಟೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಪಟಾಕಿ ಸಿಡಿಸುವುದರ ಮೂಲಕ ಕಳಸೋತ್ಸವಕ್ಕೆ ಚಾಲನೆ ದೊರೆಯಿತು. ಮಂಗಳವಾರದಂತೆ ಗುರುವಾರ ಕೂಡಾ ಕೋಟ್ಯಂತರ ರು.ಗಳ ಮದ್ದನ್ನು ಹಾರಿಸುವುದರ ಮೂಲಕ ಭಕ್ತರು ತಮ್ಮ ಹರಕೆ ಪೂರೈಸಿಕೊಂಡರು. ಪ್ರಮುಖ ಬೀದಿಗಳಲ್ಲಿ ಸುಮಾರು ೧ ಕಿ.ಮೀ.ನಷ್ಟು ಸಂಚರಿಸಿ ಸೋಮವಾರ ಪೇಟೆಯ ಶಂಕರ ಜುಂಜಪ್ಪನವರ ನಿವಾಸದವರೆಗೆ ತೆರಳಿ ಮತ್ತೆ ವಾಪಸ್ ರಥೋತ್ಸವದ ಹತ್ತಿರ ತೆರಳಿತು.ಸೂಕ್ತ ಬಂದೋಬಸ್ತ್:
ಶ್ರೀಕಾಡಸಿದ್ಧೇಶ್ವರರ ಕಳಸೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಳಸದ ಸುತ್ತ ಮುತ್ತಲೂ ಬನಹಟ್ಟಿ ಸಿಪಿಐ ಸಂಜು ಬಳಗಾರ, ಪಿಎಸ್‌ಐ ಶಾಂತಾ ಹಳ್ಳಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಿದ್ದರು. ಗಣ್ಯರಾದ ಶ್ರೀಶೈಲ ದಭಾಡಿ, ಶ್ರೀಪಾದ ಬಾಣಕಾರ, ಸಿದ್ದನಗೌಡ ಪಾಟೀಲ, ಭೀಮಶಿ ಮಗದುಮ್, ರಾಜುಗೌಡ ಪಾಟೀಲ, ಮಲ್ಲಪ್ಪ ಜನವಾಡ, ಮಹಾಶಾಂತ ಶೆಟ್ಟಿ, ಶೇಖರ ಸಂಪಗಾಂವಿ, ಶ್ರೀಶೈಲ ಯಾದವಾಡ, ದಾನಪ್ಪ ಹುಲಜತ್ತಿ, ಪಂಡಿತ ಪಟ್ಟಣ, ಸಿದ್ದು ಪಾಟೀಲ, ಚಿದಾನಂದ ಪತ್ತಾರ, ಶೇಖರ ಜವಳಗಿ, ಮಲ್ಲಪ್ಪ ಹೂಲಿ, ರವಿ ಪತ್ತಾರ, ಮಲ್ಲಪ್ಪ ಹೂಲಿ, ಬಾಳು ಗಣೇಶನವರ ಸೇರಿದಂತೆ ಸಾವಿರಾರು ಜನರು ಕಳಸೋತ್ಸವದಲ್ಲಿ ಭಾಗವಹಿಸಿದ್ದರು.