ಗೌತಮ ಪಂಚ ಮಹಾರಥೋತ್ಸವ: ಲಕ್ಷಾಂತರ ಮಂದಿ ಭಾಗಿ

| Published : Mar 23 2024, 01:15 AM IST / Updated: Mar 23 2024, 01:16 AM IST

ಗೌತಮ ಪಂಚ ಮಹಾರಥೋತ್ಸವ: ಲಕ್ಷಾಂತರ ಮಂದಿ ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರೆ ಅಂಗವಾಗಿ ಬೆಳಗಿನ ಜಾವ ಎರಡು ಗಂಟೆಯಿಂದಲೇ ದೇವಾಲಯದಲ್ಲಿ ಮೊದಲು ಕ್ಷೀರಾಭಿಷೇಕ, ಫಲಪಂಚಾಮೃತಾಭಿಷೇಕ, ಮಹೋನ್ನತ ಪೂರ್ವಕ ಏಕದಶಾವರ ರುದ್ರಾಭಿಷೇಕ, ಪ್ರಾತಃಕಾಲ ಪೂಜೆಯನ್ನು ನೆರವೇರಿಸಿ ನಂತರ ಹೋಮ ಹವನಾದಿಗಳನ್ನು ನೆರವೇರಿಸಿದರು. ನಂತರ ರಥದ ಬಳಿ ಬಲಿ ಪೂಜೆಯನ್ನು ನೆರವೇರಿತು.

ಕನ್ನಡಪ್ರಭ ವಾರ್ತೆ ನಂಜನಗೂಡು

ಗರಳಾಪುರಿ, ದಕ್ಷಿಣಕಾಶಿ ಎಂದು ಪ್ರಸಿದ್ದಿ ಪಡೆದಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ಗೌತಮ ಪಂಚ ಮಹಾರಥೋತ್ಸವವು ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಲಕ್ಷಾಂತರ ಭಕ್ತಾದಿಗಳು ಶ್ರೀಕಂಠೇಶ್ವರನ ಪಂಚ ರಥಗಳನ್ನು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು.

ಜಾತ್ರೆ ಅಂಗವಾಗಿ ಬೆಳಗಿನ ಜಾವ ಎರಡು ಗಂಟೆಯಿಂದಲೇ ದೇವಾಲಯದಲ್ಲಿ ಮೊದಲು ಕ್ಷೀರಾಭಿಷೇಕ, ಫಲಪಂಚಾಮೃತಾಭಿಷೇಕ, ಮಹೋನ್ನತ ಪೂರ್ವಕ ಏಕದಶಾವರ ರುದ್ರಾಭಿಷೇಕ, ಪ್ರಾತಃಕಾಲ ಪೂಜೆಯನ್ನು ನೆರವೇರಿಸಿ ನಂತರ ಹೋಮ ಹವನಾದಿಗಳನ್ನು ನೆರವೇರಿಸಿದರು. ನಂತರ ರಥದ ಬಳಿ ಬಲಿ ಪೂಜೆಯನ್ನು ನೆರವೇರಿತು.

ಉತ್ಸವ ಮೂರ್ತಿಗೆ ವಿಶೇಷ ರತ್ನ ಖಚಿತ, ವಜ್ರ, ವೈಡೂರ್ಯಗಳಿಂದ ಶೃಂಗರಿಸಲಾಗಿತ್ತು. ನಂತರ ಉತ್ಸವಮೂರ್ತಿಯನ್ನು ವಿಶೇಷ ಹೂಗಳಿಂದ ಅಲಂಕಾರವನ್ನು ನೆರವೇರಿತು.

ಉದಯಾತ್ಪೂರ್ವ 6.30 ರಿಂದ 6.50 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ದೇವಾಲಯದ ಆಗಮಿಕ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಜೆ. ನಾಗಚಂದ್ರ ದೀಕ್ಷಿತ್ ಹಾಗೂ ದೇಗುಲದ ಅರ್ಚಕ ವೃಂದವರು ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದ ನಂತರ ಶ್ರೀಕಂಠೇಶ್ವರ ಉತ್ಸವಮೂರ್ತಿಯಲ್ಲಿ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬೆಳಗ್ಗೆ 6.40ರ ವೇಳೆಯಲ್ಲಿ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಮತ್ತು ದೇವಾಲಯ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಇಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳು ಜೈ ಶ್ರೀಕಂಠೇಶ್ವರ ಎಂಬ ಜಯಘೋಷ ಉದ್ಘೋಷಗಳನ್ನು ಕೂಗಿ ತೇರಿನ ಹಗ್ಗ ಹಿಡಿದು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಬೆಳಗ್ಗೆ 8.30ರ ವೇಳೆಗೆ ಗೌತಮ ರಥವು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸ್ವಸ್ಥಾನವನ್ನು ಸೇರಿತು.

ಮೊದಲು ಗಣಪತಿ ರಥ, ನಂತರ ಶ್ರೀಕಂಠೇಶ್ವರ ಸ್ವಾಮಿಯವರ ದೊಡ್ಡರಥ (ಗೌತಮ ರಥ), ನಂತರ ಸುಬ್ರಮಣ್ಯೇಶ್ವರ, ಚಂಡಿಕೇಶ್ವರಸ್ವಾಮಿ ಮತ್ತು ಕೊನೆಯಲ್ಲಿ ಶ್ರೀ ಪಾರ್ವತಮ್ಮನವರ ರಥ ಸೇರಿದಂತೆ ಐದು ರಥಗಳು ರಥಬೀದಿಯಲ್ಲಿ 1.5 ಕಿ.ಮೀ ದೂರ ಕ್ರಮಿಸಿ ಯಾವುದೇ ಅಡ್ಡಿ ಆತಂಕವಿಲ್ಲದೆ ಬೆಳಿಗ್ಗೆ 10.30 ವೇಳೆಗೆ ಸ್ವಸ್ಥಾನಕ್ಕೆ ತಲುಪಿದವು. ರಥಗಳು ಚಲಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೆರದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಹಣ್ಣು-ಧವನ ಎಸೆದು ಹರಕೆ ತೀರಿಸಿಕೊಂಡರು. ನವವಧುವರರು ಇಷ್ಟಾರ್ಥ ನೆರವೇರಿಸುವಂತೆ ಕೋರಿಕೊಂಡರು.

ವಿವಿಧ ಸಂಘ ಸಂಸ್ಥೆಗಳಿಂದ ಪ್ರಸಾದ ವಿತರಣೆ

ವಿವಿಧ ಸಂಘ ಸಂಸ್ಥೆಗಳವರು ಶ್ರೀಕಂಠೇಶ್ವರ ಸ್ವಾಮಿರವರ ದೊಡ್ಡಜಾತ್ರೆ ಅಂಗವಾಗಿ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ರೈಸ್ ಬಾತ್, ಮೊಸರನ್ನ, ಲಾಡು, ಐಸ್ ಕ್ರೀಂ, ಕುಡಿಯುವ ನೀರಿನ ಬಾಟಲ್ ಗಳನ್ನು ವಿತರಣೆ ಮಾಡಿದರು.

ವಿಶೇಷ ಹೂವಿನ ಅಲಂಕಾರ

ರಾಜ್ಯದಲ್ಲೇ 5 ರಥಗಳು ಚಲಿಸುವುದು ನಂಜನಗೂಡಿನ ದೊಡ್ಡ ಜಾತ್ರೆಯಲ್ಲಿ ಮಾತ್ರ, ಶ್ರೀಕಂಠೇಶ್ವರ ಸ್ವಾಮಿರವರ ಗೌಥಮ ಪಂಚಮಹಾರಥೋತ್ಸವದ ಪ್ರಯುಕ್ತ ಐದು ರಥಗಳಿಗೂ ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಪಟ್ಟಣದ ವಿವಿಧ ಕಟ್ಟಡಗಳಿಗೆ ಗುರುವಾರದಿಂದಲೇ ವಿಶೇಷವಾಗಿ ವಿದ್ಯುತ್ ದೀಪಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ತಳಿರು ತೋರಣಗಳನ್ನು ಕಟ್ಟಲಾಗಿತ್ತು. ಅಲ್ಲದೆ ಭಕ್ತಾದಿಗಳ ಅನುಕೂಲಕ್ಕಾಗಿ ತಾತ್ಕಾಲಿಕ ಶೌಚಾಲಯ, ಆಸ್ಪತ್ರೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಸುರಕ್ಷತೆ ದೃಷ್ಟಿಯಿಂದ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿ ಸಿಸಿ ಕ್ಯಾಮರಾಗಳನ್ನು ಅವಳವಡಿಸಲಾಗಿತ್ತು. ಅಲ್ಲದೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಬಿಗಿ ಪೊಲೀಸ್ ಬಂದೋಬಸ್ತ್ನ್ನು ಏರ್ಪಡಿಸಿತ್ತು.

ಜಾತ್ರೋತ್ಸವದ ಅಂಗವಾಗಿ ಕಳೆದ ಶುಕ್ರವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿ ದೇವತಾ ಕಾರ್ಯಗಳು ಮುಂದುವರಿದು ಶುಕ್ರವಾರ ಗೌತಮ ಪಂಚ ರಥೋತ್ಸವ ನೆರವೇರಿತು.

ಮಾ. 24 ರಂದು ಅವಭೃತ ತೀರ್ಥಸ್ನಾನ, ಸಂಜೆ 7ಕ್ಕೆ ಕಪಿಲಾ ನದಿಯ ತಟದ ತೇಲುವ ದೇವಾಲಯದಲ್ಲಿ ತೆಪ್ಪೋತ್ಸವ ಜರುಗಲಿದ್ದು, ಮಾ. 25 ರಂದು ಪುಷ್ಪಯಾಗಪೂರ್ವಕ ಕೈಲಾಸ ಯಾನಾರೋಹಣೋತ್ಸವ ಜರುಗಲಿದೆ. ಮಾ 26 ರಂದು ಮಹಾಸಂಪ್ರೋಕ್ಷಣೆ, ಪೂರ್ವಕ ನಂದಿ ವಾಹನೋತ್ಸವ, ಮತ್ತು ಶಯನೋತ್ಸವದೊಂದಿಗೆ ದೊಡ್ಡ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಶಾಸಕ ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಬಿ. ಹರ್ಷವರ್ದನ್, ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ದೇವಾಲಯದ ಇಓ ಜಗದೀಶ್, ಎಇಒ ಸತೀಶ್, ಎಸ್ಪಿ ಸೀಮಾ ಲಾಟ್ಕರ್, ಎಎಸ್ಪಿ ಡಾ.ಬಿ.ಎನ್. ನಂದಿನಿ ಇದ್ದರು.