ಶ್ರೀಕಂಠೇಶ್ವರ ಸ್ವಾಮಿಯವರ ಅಂಧಕಾಸುರ ವಧೆ

| Published : Jan 13 2025, 12:49 AM IST

ಸಾರಾಂಶ

ಶ್ರೀಕಂಠೇಶ್ವರ ದೇವಾಲಯದಿಂದ ನಟರಾಜ ಅವತಾರದ ಉತ್ಸವ ಮೂರ್ತಿಯನ್ನು ದೇವಾಲಯದ ಅರ್ಚಕರ ತಂಡ ಹೂವಿನ ಪಲ್ಲಕ್ಕಿಯೊಡನೆ ಮೆರವಣಿಗೆ ಮೂಲಕ ಕರೆತರಲಾಯಿತು

ಕನ್ನಡಪ್ರಭ ವಾರ್ತೆ ನಂಜನಗೂಡು

ಕಳೆದ ಬಾರಿ ತಾರಕಕ್ಕೇರಿ ಗೊಂದಲ ಉಂಟಾಗಿದ್ದ ಶ್ರೀಕಂಠೇಶ್ವರ ಸ್ವಾಮಿಯವರ ಅಂಧಕಾಸುರನ ವಧೆ ಕಾರ್ಯಕ್ರಮ ಭಾನುವಾರ ಯಾವುದೇ ಗೊಂದಲವಿಲ್ಲದೆ ನಿರ್ವಿಘ್ನವಾಗಿ ನೆರವೇರಿತು.

ಶ್ರೀಕಂಠೇಶ್ವರ ದೇವಾಲಯದ ವತಿಯಿಂದ ನಗರದ ರಾಕ್ಷಸ ಮಂಟಪ ವೃತ್ತದ ಬಳಿ ಅಂಧಕಾಸುರನ ಚಿತ್ರವನ್ನು ರಂಗೋಲಿಯಲ್ಲಿ ಬರೆಯಲಾಗಿತ್ತು. ಅಲ್ಲದೆ ಬೃಹತ್ ಗಾತ್ರದ ಅಂಧಕಾಸುರನ ಚಿತ್ರಪಟವನ್ನು ನಿರ್ಮಿಸಲಾಗಿತ್ತು. ಮೊದಲಿಗೆ ದೇವಾಲಯದ ಆಗಮಿಕ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಅಂಧಕಾಸುರನ ರಂಗೋಲಿಯಲ್ಲಿ ಬರೆಯಲಾಗಿದ್ದ ಚಿತ್ರಕ್ಕೆ ಬಲಿ ಪೂಜೆ ನೆರವೇರಿಸಿ ಜೀವ ಕಳೆಯನ್ನು ತುಂಬಲಾಯಿತು.

ಬಳಿಕ ಶ್ರೀಕಂಠೇಶ್ವರ ದೇವಾಲಯದಿಂದ ನಟರಾಜ ಅವತಾರದ ಉತ್ಸವ ಮೂರ್ತಿಯನ್ನು ದೇವಾಲಯದ ಅರ್ಚಕರ ತಂಡ ಹೂವಿನ ಪಲ್ಲಕ್ಕಿಯೊಡನೆ ಮೆರವಣಿಗೆ ಮೂಲಕ ಕರೆತರಲಾಯಿತು. ರಾಕ್ಷಸ ಮಂಟಪ ಬಳಿ ಬರೆಯಲಾಗಿದ್ದ ಅಂಧಕಾಸುರನ ರಂಗೋಲಿಯ ಭಾವಚಿತ್ರವನ್ನು ಉತ್ಸವ ಮೂರ್ತಿಯನ್ನು ಹೊತ್ತಿದ್ದ ಅರ್ಚಕರ ತಂಡ ತುಳಿದು ರಂಗೋಲಿಯನ್ನು ಅಳಿಸುವ ಮೂಲಕ ಸಂಹಾರ ಕಾರ್ಯಕ್ರಮ ನೆರವೇರಿತು.

ಈ ವೇಳೆಗೆ ಅಂಧಕಾಸುರನ ಬೃಹತ್ ಗಾತ್ರದ ಭಾವಚಿತ್ರವನ್ನು ಕೆಳಗೆ ಇಳಿಸುವ ಮೂಲಕ ಅಂಧಕಾಸುರನ ವಧೆಯ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನಿರ್ವಿಘ್ನವಾಗಿ ನೆರವೇರಿಸಲಾಯಿತು.

ಈ ವೇಳೆ ನೆರೆದಿದ್ದ ಭಕ್ತಾಧಿಗಳು ಜೈ ಶ್ರೀಕಂಠೇಶ್ವರ, ಜೈ ಪಾರ್ವತಿ ದೇವಿ, ಎಂದು ಘೋಷಣೆಯನ್ನು ಮುಗಿಲು ಮುಟ್ಟುವಂತೆ ಕೂಗಿ, ಅಂಧಕಾಸುರನ ರಂಗೋಲಿಯ ಚಿತ್ರವನ್ನು ತುಳಿದು ಕುಣಿದು ಕುಪ್ಪಳಿಸಿದರಲ್ಲದೆ, ದೇವರ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡು, ಇಷ್ಟಾರ್ಥಗಳನ್ನು ನೆರವೇರಿಸುವಂತೆ ಹರಕ್ಕೆ ಕಟ್ಟಿ ಭಕ್ತಿ ಮೆರೆದರು.

ನಂತರ ಅಂಧಕಾಸುರನ ವಧೆಗಾಗಿ ನಟರಾಜನ ರೌದ್ರಾವತಾರದಲ್ಲಿ ಕಾಣಿಸಿಕೊಂಡ ಶ್ರೀಕಂಠೇಶ್ವರಸ್ವಾಮಿವರನ್ನು ಪಾರ್ವತಿ ದೇವಿಯ ಉತ್ಸವ ಮೂರ್ತಿಯನ್ನು ತಂದು ಸಮಾಧಾನಪಡಿಸಿ ಪೂಜೆ ನೆರವೇರಿಸಿ ದೇವಾಲಯದ ಕಡೆಗೆ ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ದೇವಾಲಯದಲ್ಲಿ ಧಾರ್ಮಿಕ ಪೂಜೆ ಕಾರ್ಯಗಳನ್ನು ನೆರವೇರಿಸುವ ಮೂಲಕ ಅಂಧಕಾಸುರ ವಧೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ಕಳೆದ ಬಾರಿ ಅಂಧಕಾಸುರನ ಚಿತ್ರಪಟದ ಬದಲಾಗಿ ಮಹಿಷಾಸುರನ ಚಿತ್ರವನ್ನು ಅಳವಡಿಸಿದ್ದರಿಂದಾಗಿ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿ ತಾರಕಕೇರಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಡಳಿತ ಪೂರ್ವಭಾವಿ ಸಭೆಯನ್ನು ಕರೆದು ಅಂಧಕಾಸುರನ ಭಾವಚಿತ್ರವನ್ನುಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಆಗಮಿಕರ ನೇತೃತ್ವದಲ್ಲಿ ಶಿವ ಪುರಾಣದಲ್ಲಿರುವಂತೆ ಚಿತ್ರಪಟವನ್ನು ಪ್ರದರ್ಶಿಸಿ ಒಪ್ಪಿಗೆ ಪಡೆಯಲಾಗಿತ್ತು. ಅಲ್ಲದೆ ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ರಘು, ವೃತ್ತ ನಿರೀಕ್ಷಕ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿತ್ತು.

ಈ ವೇಳೆ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಹೆಚ್ಚುವರಿ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ರಘು, ಯುವ ಬ್ರಿಗೇಡ್ ದಕ್ಷಿಣ ವಲಯ ಸಂಚಾಲಕ ಚಂದ್ರಶೇಖರ್, ಮುಖಂಡರಾದ ಕೃಷ್ಣಜೋಯಿಸ್, ರಾಚಪ್ಪ, ಸುನಿಲ್, ಗಿರೀಶ್ ಸೇರಿದಂತೆ ಪ್ರಮುಖರು ಇದ್ದರು.

ಭಕ್ತರ ಆಕ್ಷೇಪ

ಕಳೆದ ಬಾರಿ ಉತ್ಸವ ಮೂರ್ತಿಗೆ ನೀರು ಎರಚಿದ್ದವರು ಸ್ಥಳಕ್ಕೆ ಬಂದಿದ್ದಕ್ಕೆ ಶ್ರೀಕಂಠೇಶ್ವರನ ಭಕ್ತರು ಆಕ್ಷೇಪ ವ್ಯಕ್ತಪಡಿಸಿ ಅವರನ್ನು ಕಳುಹಿಸುವಂತೆ ಕೂಗಾಡಿದರು.

ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಮಾತುಕತೆ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.