ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ನಂಜೇದೇವನಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ 2ನೇ ಬಾರಿಗೆ ಎನ್.ಎಸ್.ಶ್ರೀಕಂಠಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಪರಶಿವಪ್ಪ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.ಗ್ರಾಮದ ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಕಂಠಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಪರಶಿವಪ್ಪ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಭಿವೃದ್ದಿ ಅಧಿಕಾರಿ ಸುಭಾಷಿಣಿ ಅವರು ಅಧಿಕೃತವಾಗಿ ಘೋಷಣೆ ಮಾಡಿದರು. ಸಂಘದ ೧೧ ಮಂದಿ ನಿರ್ದೇಶಕರು ಸಹ ಅವಿರೋಧವಾಗಿ ಆಯ್ಕೆಯಾದರು. ಹಾಲು ಉತ್ಪಾದಕ ರೈತರ ಹಿತ ರಕ್ಷಣೆಗೆ ಬದ್ಧ:
ನೂತನ ಅಧ್ಯಕ್ಷ ಎನ್.ಎಸ್.ಶ್ರೀಕಂಠಕುಮಾರ್ ಮಾತನಾಡಿ, ಸಂಘದ ಅಧ್ಯಕ್ಷನಾಗಿ ಎರಡನೇ ಬಾರಿಗೆ ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಸಂಘದ ಸರ್ವ ಸದಸ್ಯರು, ನಿರ್ದೇಶಕರು, ಗ್ರಾಮದ ಮುಖಂಡರು ಹಾಗೂ ಹಿರಿಯರಿಗೆ ಆಭಾರಿಯಾಗಿದ್ದೇನೆ. ಗ್ರಾಮದ ಮುಖಂಡರೆಲ್ಲರು ಸೇರಿ ಡೇರಿಯಲ್ಲಿರುವ ಹಣ ವ್ಯಯ ಮಾಡುವುದು ಬೇಡ. ಸಂಘದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳೋಣ ಎಂಬ ನಿಲುವಿನೊಂದಿಗೆ ಆಸಕ್ತಿ ಹೊಂದಿರುವ ಹಾಗೂ ಸಂಘದಲ್ಲಿ ಸಕ್ರಿಯ ಹಾಲು ಹಾಕಿ ಅಭಿವೃದ್ಧಿಗೆ ಶ್ರಮಿಸುತ್ತಿರು ೧೧ ಮಂದಿಯನ್ನು ನಿರ್ದೇಶಕರನ್ನಾಗಿ ಪಕ್ಷಾತೀತವಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈಗ ಎಲ್ಲರು ಒಮ್ಮತವಾಗಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಶ್ರಮಿಸಿ, ಡೇರಿ ಬೆಳವಣಿಗೆಗಾಗಿ ಒಕ್ಕೂಟ ಹಾಗೂ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ರೈತರಿಗೆ ತಲುಪಿಸುವ ಕೆಲಸವನ್ನು ಮಾಡೋಣ ಎಂದರು.ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಗ್ರಾಮದಲ್ಲಿ ಸಹಕಾರ ಸಂಘವು ರಾಜಕೀಯೇತರವಾಗಿ ಅಭಿವೃದ್ದಿ ಹೊಂದಬೇಕು. ಎಲ್ಲರು ಒಮ್ಮತದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಸಂಘದ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯ ತರುವುದು ಬೇಡ. ಶ್ರೀಕಂಠಕುಮಾರ್ ಕಳೆದ ಐದು ವರ್ಷ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಮತ್ತೊಂದು ಅವಕಾಶ ಕಲ್ಪಿಸಿರುವುದು ಸಂಘದ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲರು ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಿಕೊಂಡು ಹೋಗಿ ಎಂದು ಕಿವಿಮಾತು ಹೇಳಿದರು. ಸಭೆಯಲ್ಲಿ ಸಂಘದ ನೂತನ ನಿರ್ದೇಶಕರಾದ ಜಯಶಂಕರ್ ಎನ್, ಎಂ.ನಟರಾಜು, ರೇಚಣ್ಣ, ಮಾದೇಗೌಡ, ರಂಗಯ್ಯ, ಮಹದೇವನಾಯಕ, ರತ್ನಮ್ಮ, ನಾಗಮ್ಮ, ರಾಜಮ್ಮ ಹಾಗೂ ಗ್ರಾಪಂ ಅಧ್ಯಕ್ಷ ಪಿ.ಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಎಂ.ಶಿವಸ್ವಾಮಿ, ಮುಖಂಡರಾದ ಪಿ.ರಾಜಣ್ಣ, ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್, ಲಾಯರ್ ಮಹೇಶ್, ಸಂಘದ ಮಾಜಿ ಅಧ್ಯಕ್ಷ ಎಸ್.ಮಾದಪ್ಪ, ರಮೇಶ್, ಜೆ.ಮಾದಪ್ಪ, ಗ್ರಾಪಂ ಸದಸ್ಯ ಗುರುರಾಜ್, ಮಾಜಿ ಸದಸ್ಯ ಎನ್.ಎಂ.ಮಹೇಶ್, ಕೆ.ಎಲ್.ಶಾಂತಪ್ಪ, ಮಹದೇವೇಗೌಡ, ಎನ್.ಆರ್.ಪುರುಷೋತ್ತಮ್. ಸಂತೋಷ್, ಶಂಕರಪ್ಪ, ನವೀನ್‌ಕುಮಾರ್, ಎನ್.ಪಿ. ಗಿರೀಶ್, ಎನ್.ಎಂ. ನಾಗರಾಜು, ಸಿಇಒ ಮಹದೇವಕುಮಾರ್, ಮಹದೇವಪ್ಪ ಗ್ರಾಮದ ಮುಖಂಡರು, ಸದಸ್ಯರು ಇದ್ದರು.