ಭದ್ರಾಮೇಲ್ದಂಡೆಗೆ ಎಳ್ಳು ನೀರು ಬಿಟ್ಟ ಸಿದ್ದರಾಮಯ್ಯ ಸರ್ಕಾರ, ವಾರ್ಷಿಕ ಕೇವಲ 150 ಕೋಟಿ ರು.ಅನುದಾನ ಬಿಡುಗಡೆ । ನೌಕರರ ಸಂಬಳ, ನೀರು ಲಿಫ್ಟ್ ಮಾಡಿದ ಕರೆಂಟ್ ಬಿಲ್‌ಗೆ ಸಾಕಾಗುವುದಿಲ್ಲ । ಇಚ್ಚಾಶಕ್ತಿ ಕಳೆದುಕೊಂಡ ಜಿಲ್ಲೆಯ ಜನ ಪ್ರತಿನಿಧಿಗಳು, ಬಜೆಟ್ ಘೋಷಣೆಗೂ ದ್ರೋಹ ವೆಸಗಿದ ಸರ್ಕಾರ ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಎಳ್ಳು ನೀರು ಬಿಟ್ಟಂತೆ ಕಾಣಿಸುತ್ತಿದೆ. 2026-27ನೇ ಸಾಲಿಗೆ ಕೇವಲ 150 ಕೋಟಿ ರು. ಅನುದಾನ ಬಿಡುಗಡೆ ಮಾಡುವುದರ ಮೂಲಕ ಚರಮ ಗೀತೆಗೆ ಕೋರಸ್ ಒದಗಿಸಿದೆ. ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಮಾನ್ಯತೆ ನೀಡದಿದ್ದರೂ ಅನುದಾನ ಹಂಚಿಕೆ ಮಾಡುವಾಗ ಕೇಂದ್ರದ 600 ಕೋಟಿ ರು. ಅನುದಾನ ನಿರೀಕ್ಷಿಸಿ 150 ಕೋಟಿ ರು. ಮಾತ್ರ ಬಿಡುಗಡೆ ಮಾಡಲಾಗಿದೆ. ಕನ್ನಡಿಯೊಳಗಿನ ಗಂಟು ತೋರಿಸಿ ಬಯಲು ಸೀಮೆ ಜನರ ಏಮಾರಿಸಲಾಗಿದೆ.

ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಬಾಕಿ ಬಿಲ್ ಭಾರಕ್ಕೆ ಕುಸಿದಿದೆ. 2026ರ ಫೆಬ್ರವರಿ ಅಂತ್ಯಕ್ಕೆ ಭೂ ಸ್ವಾಧೀನ ಸೇರಿ 2200 ಕೋಟಿ ರು. ಬಾಕಿಬಿಲ್‌ಗಳಿವೆ. ಒಂದೆಡೆ ಗುತ್ತಿಗೆದಾರರು ಬಿಲ್ ಬಾರದ ಕಾರಣ ಕೆಲಸ ನಿಲ್ಲಿಸಿದ್ದರೆ, ಮತ್ತೊಂದೆಡೆ ಬಾಕಿ ಬಿಲ್ ಬೇಡಿಕೆಯಿಂದಾಗಿ ಅಧಿಕಾರಿಗಳು ಕಚೇರಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡದೆ ಕಚೇರಿಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಾಲಿ ಬಿಡುಗಡೆ ಮಾಡಲಾದ ಅನುದಾನ ಭವಿಷ್ಯದಲ್ಲಿ ಸಂಬಳಕ್ಕೆ ಸಾಕಾಗುತ್ತದೆಯೇ ಎಂಬ ಆತಂಕ ನೌಕರರಲ್ಲಿದೆ.

ಭದ್ರಾ ಮೇಲ್ದಂಡೆಯ ಎರಡು ವೃತ್ತ, ವಲಯ, ಮುಖ್ಯ ಎಂಜಿನಿಯರ್ ಕಚೇರಿ ಸೇರಿ ವಾರ್ಷಿಕವಾಗಿ 60 ಕೋಟಿಗೂ ಹೆಚ್ಚು ಅನುದಾನದ ಬೇಡಿಕೆಯಿದೆ. ಸಂಬಳ ಭತ್ಯೆ, ಸ್ಟೇಷನರಿ, ಜೆರಾಕ್ಸ್ ಸೇರಿದಂತೆ ಆಡಳಿತಾತ್ಮಕ ವೆಚ್ಚಕ್ಕೆ 2025-26ನೇ ಸಾಲಿಗೆ 61.64 ಕೋಟಿ ರು. ಭರಿಸಲಾಗಿದೆ. 2026-27ನೇ ಸಾಲಿಗೆ ತುಟ್ಟಿ ಭತ್ಯೆ ಸೇರಿದಂತೆ ಹಲವು ವೆಚ್ಚಗಳು ಜಾಸ್ತಿಯಾಗುವುದರಿಂದ 63 ಕೋಟಿ ರು. ನಷ್ಟು ಅನುದಾನ ನಿರೀಕ್ಷಿಸಲಾಗಿದೆ.


ಭದ್ರಾಮೇಲ್ದಂಡೆ ಯೋಜನೆಯಡಿ ಹಾಲಿ ವಿವಿ ಸಾಗರ ಜಲಾಶಯಕ್ಕೆ ಲಿಫ್ಟ್ ಮಾಡಿ 27 ಟಿಎಂಸಿ ನೀರು ಹರಿಸಲಾಗಿದೆ. ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹಾಯಿಸಿ ಶಾಂತಿಪುರ ಹಾಗೂ ಬೆಟ್ಟದಾವರೆಕೆರೆ ಪಂಪ್ ಹೌಸ್‌ನಿಂದ ನೀರು ಲಿಫ್ಟ್ ಮಾಡಲಾಗುತ್ತದೆ. 2025 ಜನವರಿಯಿಂದ 2026 ಫೆಬ್ರವರಿ ಅಂತ್ಯದವರೆಗೆ ಶಾಂತಿಪುರ ಪಂಪ್ ಹೌಸ್‌ದು 67.51 ಕೋಟಿ ರು. ಹಾಗೂ ಬೆಟ್ಟದಾವರೆಕೆರೆ 61.40 ಕೋಟಿ ಸೇರಿದಂತೆ 128.91 ಕೋಟಿ ಯಷ್ಟು ವಿದ್ಯುತ್ ಬಿಲ್ ಬಾಕಿ ಇದೆ. ಸಂಬಳ ಹಾಗೂ ಬಾಕಿ ವಿದ್ಯುತ್ ಬಿಲ್ ಸೇರಿದರೆ ಹೆಚ್ಚು ಕಡಿಮೆ 186 ಕೋಟಿ ರು.ಗಳಷ್ಟಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ 150 ಕೋಟಿ ರು.ಅನುದಾನ ನೀಡಿದೆ. ಕಾಮಗಾರಿ ಪೂರ್ಣಗೊಳಿಸುವುದು ಒತ್ತಟ್ಟಿಗಿರಲಿ, ಸಂಬಳಕ್ಕೂ ಕೊರತೆ ಯಾಗುವ ಸಾಧ್ಯತೆಗಳು ಗೋಚರಿಸಿವೆ.

2026-27ನೇ ಸಾಲಿನಲ್ಲಿ ಚಿತ್ರದುರ್ಗ ಶಾಖಾ ಕಾಲುವೆಯ 157 ಕಿಮೀ ಕಾಮಗಾರಿ ಪೂರ್ಣಗೊಳಿಸಿ ಗೋನೂರು ಕೆರೆವರೆಗೆ ನೀರು ಹಾಯಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದರು. ಈ ಕೆಲಸಗಳ ಮುಗಿಸಲು ಕನಿಷ್ಟ ಶೇ.25 ರಷ್ಟಾದರೂ ಬಾಕಿ ಬಿಲ್ ಕೊಟ್ಟಿದ್ದರೆ ಅಂದರೆ 500 ಕೋಟಿ ಕೊಟ್ಟಿದ್ದರೆ ಗುತ್ತಿಗೆದಾರರೂ ಕೆಲಸ ಮಾಡುತ್ತಿದ್ದರು. ಆದರೆ 150 ಕೋಟಿ ಕೊಟ್ಟಿದೆ. ಕಾದ ಹೆಂಚಿನ ಮೇಲೆ ನೀರು ಚುಮುಕಿಸುವಷ್ಟಾದರೂ ಅನುದಾನವಿಲ್ಲದಂತಾಗಿದೆ. ಬಜೆಟ್ ಘೋಷಣೆಗೂ ದ್ರೋಹ ಎಸಗಲಾಗಿದೆ.

ಕಳೆದ ಡಿಸೆಂಬರ್ ನಲ್ಲಿ ಭದ್ರಾ ಮೇಲ್ಡಂಡೆ ಕಾಮಗಾರಿ ವೀಕ್ಷಿಸಿದ್ದ ಸಚಿವ ಡಿ.ಸುಧಾಕರ್ ನೇತೃತ್ವದ ಶಾಸಕರ ತಂಡ ಗಣರಾಜ್ಯೋತ್ಸವದ ವೇಳೆಗೆ ಗೋನೂರು ಕೆರೆಗೆ ನೀರು ಹಾಯಿಸಲಾಗುವುದು. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಿ 200 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದಿದ್ದರು. ನಂತರ ಹೇಳಿಕೆಗಳು ಗಣರಾಜ್ಯೋತ್ಸವದಿಂದ ಶಿವರಾತ್ರಿ, ತರುವಾಯ ಯುಗಾದಿ ಹಬ್ಬದ ವರೆಗೆ ವಿಸ್ತರಣೆ ಆದವು. ಇದೀಗ ಜನ ಪ್ರತಿನಿಧಿಗಳು ಈ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದಾರೆ. ಕೇವಲ 200 ಕೋಟಿ ರು. ಅನುದಾನ ತರುವಷ್ಟು ಇಚ್ಚಾಶಕ್ತಿ ಜನಪ್ರತಿನಿಧಿಗಳಿಂದ ಪ್ರದರ್ಶನವಾಗದಂತಾಗಿದೆ.