ಕಸ್ತೂರಿ ರಂಗನ್ ವರಧಿ ಯಥಾವತ್ ಜಾರಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿರುವ ಪರಿಸರ ಸೂಕ್ಷ್ಮ ವಲಯ 7 ನೇ ಕರಡು ಅಧಿಸೂಚನೆ ಹಾಗೂ ಕಸ್ತೂರಿ ರಂಗನ್ ಯಥಾವತ್ ಜಾರಿ ವಿರೋಧಿಸಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮೀತಿ, ರೈತರಪರ ಸಂಘಟನೆಗಳು, ಸರ್ವಪಕ್ಷಗಳು, ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಶೃಂಗೇರಿ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಕಸ್ತೂರಿ ರಂಗನ್ ವರಧಿ ಯಥಾವತ್ ಜಾರಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿರುವ ಪರಿಸರ ಸೂಕ್ಷ್ಮ ವಲಯ 7 ನೇ ಕರಡು ಅಧಿಸೂಚನೆ ಹಾಗೂ ಕಸ್ತೂರಿ ರಂಗನ್ ಯಥಾವತ್ ಜಾರಿ ವಿರೋಧಿಸಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮೀತಿ, ರೈತರಪರ ಸಂಘಟನೆಗಳು, ಸರ್ವಪಕ್ಷಗಳು, ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಶೃಂಗೇರಿ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು.

ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು, ಹೋಟೇಲುಗಳು ಸಂಪೂರ್ಣ ಮುಚ್ಚಿದ್ದವು. ಆಟೋ, ಬಸ್, ಟ್ಯಾಕ್ಸಿ ಸಹಿತ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಪಟ್ಟಣದ ಪ್ರಮುಖ ರಸ್ತೆಗಳು ಖಾಲಿಯಾಗಿ ಬಿಕೋ ಎನ್ನುತ್ತಿದ್ದವು. ಬಸ್ ನಿಲ್ದಾಣದಲ್ಲಿ, ಆಟೋ ನಿಲ್ದಾಣದಲ್ಲಿ ಆಟೋಗಳಿಲ್ಲದೇ ಖಾಲಿ ಖಾಲಿಯಾಗಿತ್ತು. ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಜನರಿಲ್ಲದೇ ಬಣಗುಟ್ಟುತ್ತಿತ್ತು.

ಪಟ್ಟಣದಲ್ಲಿ ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಗ್ರಾಮೀಣ ಪ್ರದೇಶಗಳಲ್ಲಿಯೂ ಅಂಗಡಿ, ಹೋಟೆಲುಗಳು ಮುಚ್ಚಲ್ಪಟ್ಟು ಬಂದ್ ಬಿಸಿ ತಟ್ಟಿತ್ತು. ನ್ಯಾಯಬೆಲೆ ಅಂಗಡಿಗಳು ಬಾಗಿಲು ಹಾಕಿದ್ದವು. ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಗ್ರಾಹಕರು ಇರಲಿಲ್ಲ. ತಾಲೂಕಿನ ಕಿಗ್ಗಾ, ನೆಮ್ಮಾರು, ಮೆಣಸೆ, ಕೆರೆಕಟ್ಟೆ, ಬೇಗಾರು, ತೆಕ್ಕೂರು ಸೇರಿದಂತೆ ಗ್ರಾಮಗಳಲ್ಲಿಯೂ ಕಸ್ತೂರಿ ರಂಗನ್ ಜಾರಿ ವಿರೋಧಿಸಿ ಜನರು ಬಂದ್ ನಡೆಸಿದರು.

ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಮಂಗಳೂರು, ಕಾರ್ಕಳ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಇತರೆಡೆಗಳಿಂದ ಬರುವ ಬಸ್ ಗಳು ಸಂಚರಿಸಲಿಲ್ಲ. ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಮಾವೇಶಕ್ಕಾಗಿ ವೇದಿಕೆ ಸಿದ್ದಪಡಿಸಲಾಗಿತ್ತು.

ಪ್ರತಿಭಟನಾ ಮೆರವಣಿಗೆ, ಸಮಾವೇಶ:

ಬೆಳಗ್ಗೆ ಪಟ್ಟಣದ ವೀರಪ್ಪಗೌಡ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿತು. ತಾಲೂಕಿನ ನಾನಾ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡಿತು. ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹಸಿರು ಶಾಲು ಹಾರಿಸುವುರ ಮೂಲಕ ಪ್ರತಿಭಟನಾ ಸಮಾವೇಶಕ್ಕೆ ಚಾಲನೆ ನೀಡಿದರು.

ಪರಿಸರವಾದಿ ರಾಮಸ್ವಾಮಿ ಹುಲುಕೋಡು ದಿಕ್ಸೂಚಿ ಭಾಷಣ ಮಾಡಿ, ಕಸ್ತೂರಿ ರಂಗನ್ ವರದಿಯನ್ನು ಎಲ್ಲರೂ ತಿರಸ್ಕರಿಸಬೇಕು. ಜನರ ಅಭಿಪ್ರಾಯ ಪಡೆಯದೇ ವರದಿ ತಯಾರಿಸಲಾಗಿದೆ. ಈ ವರದಿ ಜಾರಿಯಾದರೆ ಕೃಷಿ ಮಾಡುವಂತಿಲ್ಲ. ಅಭಿವೃದ್ಧಿ ಇಲ್ಲ, ಮೂಲ ಸೌಕರ್ಯಗಳಿಲ್ಲ, ಮನೆ, ಜಮೀನು ಮಾರಾಟ ಮಾಡುವಂತಿಲ್ಲ. ಜನರ ಬದುಕುವ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾಗುತ್ತದೆ. ಈ ಭಾಗದ ಶಾಸಕರು, ಸಂಸದರು ಎಚ್ಚೆತ್ತುಕೊಳ್ಳಬೇಕು. ಜನರನ್ನು, ಜನವಸತಿ ಪ್ರದೇಶಗಳನ್ನು, ಕೃಷಿ ಜಮೀನನ್ನು ಉಳಿಸಬೇಕು. ನಮಗೆ ಕೇರಳ ಮಾದರಿಯೂ ಬೇಡ ಹಾಗೂ ಕಸ್ತೂರಿ ರಂಗನ್ ವರದಿಯೂ ಬೇಡ ಎಂದರು.

ಇಚ್ಛಾಶಕ್ತಿಯ ಕೊರತೆ: ಪರಿಸರವಾದಿ ದಿಗಂತ್ ಬಿಂಬೈಲ್ ಮಾತನಾಡಿ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಪರಿಸ್ಥಿತಿ ಬಂದೊದಗಿದೆ. ಶಾಸಕರ, ಸಂಸದರ ಪ್ರಯತ್ನಗಳು ಕೇವಲ ಭಾಷಣಗಳಲ್ಲಿ ಮಾತ್ರ ಕಾಣುತ್ತೇವೆ. ವಿಧಾನಸೌದದ ಹೊರಗೆ ಕೂರಬೇಕು. ಈ ಭಾಗದ ಜನರ ಸಮಸ್ಯೆಯನ್ನು ಪ್ರತಿಧ್ವನಿಸಬೇಕು. 7 ಬಾರಿ ಅಧಿಸೂಚನೆ ಹೊರಡಿಸಿದ್ದರೂ ನಮ್ಮ ರಾಜಕಾರಣಿಗಳು ಏನು ಮಾಡುತ್ತಿದ್ದರು? ಸರ್ಕಾರಕ್ಕೆ ಬದ್ಧತೆ ಬೇಕು. ಸರ್ಕಾರಗಳು ಇಂದು ಇಲ್ಲಿನ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ. ಇವರೆಲ್ಲರ ಅಜೆಂಡ ಹಂತಹಂತವಾಗಿ ಎಲ್ಲರನ್ನು ಒಕ್ಕಲೆಬ್ಬಿಸುವುದು. ಒಂದೇ ಒಂದು ಹಳ್ಳಿಯನ್ನು ಒಕ್ಕಲೆಬ್ಬಿಸಲಿ. ಆಗ ಅದರ ಪರಿಣಾಮವೇ ಬೇರೆಯಾಗುತ್ತದೆ ಎಂದು ಎಚ್ಚರಿಸಿದರು.

ಹೋರಾಟ ಸಮೀತಿಯ ರಂಜಿತ್ ಕಲ್ಕಟ್ಟೆ, ರೈತ ಸಂಘಟನೆಯ ಚಂದ್ರಶೇಖರ್, ಕರಾವಳಿ ಮಲೆನಾಡು ಜನಪರ ಒಕ್ಕೂಟದ ಅನಿಲ್, ಮಾಜಿ ಸಚಿವ ಡಿ.ಎನ್.ಜೀವರಾಜ್, ಜೆಡಿಎಸ್ ಮುಖಂಡ ಸುಧಾಕರ ಶೆಟ್ಟಿ, ಬಿಎಸ್‌ಪಿಯ ಕೆ.ಎಂ.ಗೋಪಾಲ್, ಕಾಂಗ್ರೆಸ್‌ನ ರಮೇಶ್ ಭಟ್ ಸಹಿತ ಸರ್ವಪಕ್ಷಗಳ ಮುಖಂಡರು, ಕಾರ್ಯಕರ್ತರು, ರೈತರು, ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.