ಶೃಂಗೇರಿ ಕಪ್ಪೆಶಂಕರ ದೇಗುಲ ಮುಳುಗಡೆ

| Published : Jul 16 2024, 12:32 AM IST

ಸಾರಾಂಶ

ತುಂಗಾನದಿ ತೀರದಲ್ಲಿರುವ ಕಪ್ಪೆಶಂಕರ ದೇವಾಲಯ, ಸಂಧ್ಯಾವಂದನಾ ಮಂಟಪಕ್ಕೆ ನೀರು ನುಗ್ಗಿ, ಕಪ್ಪೆಶಂಕರ ದೇಗುಲ ಸಂಪೂರ್ಣವಾಗಿ ಪ್ರವಾಹದಲ್ಲಿ ಮುಳುಗಡೆಯಾಗಿದೆ.

ಶೃಂಗೇರಿ: ತಾಲೂಕಿನಾದ್ಯಂತ ಪುನರ್ವಸು ಮಳೆ ಆರ್ಭಟ ಮುಂದುವರೆದಿದ್ದು, ತಾಲೂಕಿನೆಲ್ಲೆಡೆ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೂ ಎಡಬಿಡದೆ ಭಾರೀ ಮಳೆ ಸುರಿಯಿತು. ಗಾಳಿ ಆರ್ಭಟದೊಂದಿಗೆ ಮಳೆ ಆರ್ಭಟಿಸುತ್ತಿದ್ದರು, ಶಾಲಾ ಕಾಲೇಜುಗಳಿಗೆ ರಜೆ ನೀಡಿರಲಿಲ್ಲ. ಎಂದಿನಂತೆ ಶಾಲೆ ಕಾಲೇಜುಗಳು ತೆರೆದಿತ್ತು.

ಕೆರೆಕಟ್ಟೆ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳೆಲ್ಲ ಮುಳುಗಡೆಯಾಗಿದೆ. ಕೆರೆಕಟ್ಟೆ, ನೆಮ್ಮಾರು ಶೃಂಗೇರಿಯವರೆಗೆ ತುಂಗಾ ನದಿ ದಡದಲ್ಲಿರುವ ಹೊಲಗೆದ್ದೆಗಳು, ಜಮೀನುಗಳು ಜಲಾವೃತಗೊಂಡಿವೆ.

ತುಂಗಾನದಿ ತೀರದಲ್ಲಿರುವ ಕಪ್ಪೆಶಂಕರ ದೇವಾಲಯ, ಸಂಧ್ಯಾವಂದನಾ ಮಂಟಪಕ್ಕೆ ನೀರು ನುಗ್ಗಿ, ಕಪ್ಪೆಶಂಕರ ದೇಗುಲ ಸಂಪೂರ್ಣವಾಗಿ ಪ್ರವಾಹದಲ್ಲಿ ಮುಳುಗಡೆಯಾಗಿದೆ. ಗಾಳಿ ಆರ್ಭಟಕ್ಕೆ ಮರಗಳು ಧರೆಗುರುಳುತ್ತಿದ್ದು ರಸ್ತೆ, ವಿದ್ಯುತ್‌ ಲೈನ್‌ ಬೀಳುತ್ತಿರುವುದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುತ್ತಿದ್ದು, ರಸ್ತೆ ಸಂಚಾರಕ್ಕೂ ಅಡಚಣೆಯಾಗುತ್ತಿದೆ.

ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169ರ ತ್ಯಾವಣ, ದುರ್ಗಾದೇವಸ್ಥಾನ ಸಮೀಪ ಗುಡ್ಡಕುಸಿದು ರಸ್ತೆ ಮೇಲೆ ಮಣ್ಣು ಜಾರುತ್ತಿದೆ. ಅಡಕೆ, ಬಾಳೆ ತೋಟಗಳಲ್ಲಿ ಮರಗಳು ತುಂಡಾಗಿ ಬೀಳುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌, ಮೊಬೈಲ್ ಸಂಪರ್ಕ ಕೂಡ ವ್ಯತ್ಯಯಗೊಳ್ಳುತಿದೆ.