ಸಾರಾಂಶ
ಶೃಂಗೇರಿ: ತಾಲೂಕಿನಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆ, ಗಾಳಿಯ ಆರ್ಭಟ ರಸ್ತೆ ಸಂಪರ್ಕ ಅವ್ಯವಸ್ಥೆಯ ನಡುವೆಯೂ ಶೃಂಗೇರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಶೃಂಗೇರಿ: ತಾಲೂಕಿನಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆ, ಗಾಳಿಯ ಆರ್ಭಟ ರಸ್ತೆ ಸಂಪರ್ಕ ಅವ್ಯವಸ್ಥೆಯ ನಡುವೆಯೂ ಶೃಂಗೇರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಕಳೆದೆರೆಡು ದಿನಗಳಿಂದ ಶೃಂಗೇರಿ ಪಟ್ಟಣ, ಗಾಂಧಿ ಮೈದಾನ, ಶ್ರೀಮಠದ ಆವರಣ, ಶ್ರೀ ಶಾರದಾಂಬಾ ದೇವಾಲಯ, ನರಸಿಂಹವನ ಎಲ್ಲೆಲ್ಲೂ ಪ್ರವಾಸಿಗರ ನೂಕು ನುಗ್ಗಲಿದೆ. ವಾರದ ಕೊನೆ ದಿನವಾದ ಭಾನುವಾರವೂ ಪಟ್ಟಣದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿತ್ತು. ಶನಿವಾರ ಸಂಜೆ ಮಂಗಳೂರು ಶೃಂಗೇರಿ ಸಂಪರ್ಕ ನೆಮ್ಮಾರು ಬಳಿ ಗುಡ್ಡಕುಸಿತ ಉಂಟಾಗಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡು ಸಾಲು ಸಾಲಾಗಿ ಪ್ರವಾಸಿ ವಾಹನಗಳು ನಿಂತಿತ್ತು.ಪಟ್ಟಣದ ವಾಹನ ನಿಲುಗಡೆ ಪ್ರದೇಶವಾದ ಗಾಂಧಿಮೈದಾನದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ವಾಹನ ದಟ್ಟಣೆಯಿದ್ದು, ರಾತ್ರಿ ದಿಡೀರನೆ ಪ್ರವಾಹದ ನೀರು ನುಗ್ಗಿದ್ದರಿಂದ ಬಹುತೇಕ ವಾಹನಗಳು ಪ್ರವಾಹದಲ್ಲಿ ಸಿಲುಕಿಕೊಂಡಿತು. ಕೆಲವು ವಾಹನ ಗಳನ್ನು ಸ್ಥಳೀಯರು, ಪೋಲೀಸರು ಮೇಲೆ ತರುವ ಪ್ರಯತ್ನ ಮಾಡಿದರು.
ಒಂದೆಡೆ ಪ್ರವಾಸಿಗರು, ಇನ್ನೊಂದೆಡೆ ಪ್ರವಾಸಿ ವಾಹನಗಳಿಂದ ಶೃಂಗೇರಿ ಪಟ್ಟಣದೆಲ್ಲೆಡೆ ವಾಹನ ಸಂಚಾರ, ವಾಹನ ನಿಲುಗಡೆಯಾಗುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಮುಂದುವರಿದಿದೆ. ಭಾನುವಾರ ಬೆಳಿಗ್ಗೆಯಿಂದಲೂ ಶೃಂಗೇರಿ ಮಠದ ಆವರಣದಲ್ಲಿ ಪ್ರವಾಸಿಗರು ದಂಡು ನೆರೆದಿತ್ತು. ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆಗೆ ನಿಷೇಧಿಸಿ ಬ್ಯಾರಿಕೇಡ್ ಅಳವಡಿಸಿರುವುದರಿಂದ ಪಟ್ಟಣದ ಎಲ್ಲೆಡೆ ಅಲ್ಲಲ್ಲಿ ವಾಹನ ನಿಲ್ಲಿಸಲಾಗಿತ್ತು.ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಸಿರಿಮನೆಯಲ್ಲಿಯೂ ಮಳೆ ನಡುವೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಭಾರೀ ಮಳೆಯಾಗುತ್ತಿರುವುದರಿಂದ ಜಲಪಾತದಲ್ಲಿ ನೀರು ಭೋರ್ಗೆರೆಯುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಶೃಂಗೇರಿ ಅಂಗಡಿ, ಹೋಟೇಲು,ವಸತಿಗೃಹಗಳು ಎಲ್ಲೆಡೆ ಪ್ರವಾಸಿಗರೇ ಕಂಡು ಬರುತ್ತಿದ್ದಾರೆ.
27 ಶ್ರೀ ಚಿತ್ರ 1-ಶೃಂಗೇರಿ ಶ್ರೀ ಮಠದ ಆವರಣದಲ್ಲಿ ಮಳೆಯ ನಡುವೆಯೂ ಕಂಡು ಬಂದ ಭಕ್ತರು