ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ಮೆರಗು ಪಡೆಯುತ್ತಾ ರಾಜ್ಯ,ದೇಶದ ನಾನಾ ಕಡೆಗಳ ಜನರನ್ನು ಆಕರ್ಷಿಸುತ್ತಿದೆ. ಧಾರ್ಮಿಕ,ಸಾಂಸ್ಕ್ರೃತಿಕ,ಬೀದಿ ಉತ್ಸವಗಳು,ದಸರೆಯ ದರ್ಬಾರ್ ಕಳೆಗಟ್ಟಿವೆ.

- ಉಭಯ ಜಗದ್ಗುರುಗಳಿಂದ ವಿಶೇಷ ಪೂಜೆ । ಕೈಯಲ್ಲಿ ಆಯುಧ ಹಿಡಿದು ನವಿಲನ್ನೇರಿ ಭಕ್ತರ ಕಣ್ತುಂಬಿದ ದೇವಿ

ಕನ್ನಡಪ್ರಭ ವಾರ್ತೆ ಶೃಂಗೇರಿ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ಮೆರಗು ಪಡೆಯುತ್ತಾ ರಾಜ್ಯ,ದೇಶದ ನಾನಾ ಕಡೆಗಳ ಜನರನ್ನು ಆಕರ್ಷಿಸುತ್ತಿದೆ. ಧಾರ್ಮಿಕ,ಸಾಂಸ್ಕ್ರೃತಿಕ,ಬೀದಿ ಉತ್ಸವಗಳು,ದಸರೆಯ ದರ್ಬಾರ್ ಕಳೆಗಟ್ಟಿವೆ.

ನವರಾತ್ರಿ ಆರಂಭದಿಂದ ಬ್ರಾಹ್ಮಿ, ಮಾಹೇಶ್ವರಿಯಾಗಿ ಭಕ್ತರನ್ನು ಅನುಗ್ರಹಿಸಿದ ಶಾರದೆ ನಾಲ್ಕನೆ ದಿನವಾದ ಬುಧವಾರ ಮಯೂರವಾಹನವನ್ನೇರಿ ಕೌಮಾರಿಯಾಗಿ ಭಕ್ತರನ್ನು ಅನುಗ್ರಹಿಸಿದಳು. ಕೈಯಲ್ಲಿ ಶಸ್ತ್ರ, ಆಯುಧಗಳನ್ನು ಧರಿಸಿ ನವಿಲನ್ನೇರಿ ಭಕ್ತರನ್ನು ಅನುಗ್ರಹಿಸುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು.

ಬೆಳಿಗ್ಗೆ ಶ್ರೀ ಶಾರದಾಂಬೆ ಸನ್ನಿಧಿಯಲ್ಲಿ ಪೀಠದ ಅಧಿದೇವತೆ ಶಾರದಾಂಬೆಗೆ ಜಗದ್ಗುರು ನವರಾತ್ರಿ ವಿಶೇಷ ಪೂಜೆ ನೆರವೇರಿಸಿದರು. ಶ್ರೀ ಮಠದ ಆವರಣದ ಶ್ರೀ ಶಂಕರಾಚಾರ್ಯ,ಶ್ರೀ ತೋರಣಗಣಪತಿ,ಶ್ರೀ ಸುಬ್ರಮಣ್ಯ,ಶ್ರೀ ವಿದ್ಯಾಶಂಕರ ದೇವಾಲಯ ಸಹಿತ ಎಲ್ಲಾ ದೇವಾಲಯಗಳಲ್ಲಿ ನವರಾತ್ರಿ ವಿಶೇಷ ಪೂಜೆ ನೆರವೇರಿತು.

ಶ್ರೀ ಮಠದಲ್ಲಿ ಶ್ರೀ ಸೂಕ್ತ, ಸರಸ್ವತಿ ಸೂಕ್ತ, ದೇವಿ ಪಾರಾಯಣ, ಪ್ರಸ್ಥಾನತ್ರಯಭಾಷ್ಯ, ಮೊದಲಾದ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರಿತು. ದೇವಾಲಯಗಳು, ದೇವಾಲಯದ ಆವರಣ, ನರಸಿಂಹವನ,ರಾಜಗೋಪುರ ಸಹಿತ ಎಲ್ಲೆಡೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಎಲ್ಲೆಡೆ ಜನವೋ ಜನ. ಭಾರತೀ ಬೀದಿ, ಗಾಂಧಿ ಮೈದಾನ ಸಹಿತ ಇಡೀ ಪಟ್ಟಣವೇ ಜನಜಂಗುಳಿಯಿಂದ ತುಂಬಿದೆ.

ರಾಜಬೀದಿ ಉತ್ಸವದಲ್ಲಿ ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು ಪಾಲ್ಗೊಂಡಿದ್ದರು. ವಿವಿಧ ಸಂಘಸಂಸ್ಥೆಗಳು,ವಿ ವಿ ಧ ಭಜನಾ ತಂಡಗಳು,ಶ್ರೀ ಮಠದ ಆನೆಗಳು,ಅಶ್ವಗಳು,ಛತ್ರಿ ಛಾಮರ,ವಾದ್ಯವೃಂದ ಸಾಂಸ್ಕೃತಿಕ ಕಲಾತಂಡ ರಾಜಬೀದಿ ಉತ್ಸವಕ್ಕೆ ವಿಶೇಷ ಮೆರಗು ನೀಡಿತು. ಅಮ್ಮನವರ ಉತ್ಸವ ಸಾಗುವ ಮೊದಲು ದಾರಿಯುದ್ದಕ್ಕೂ ಶುಭ್ರಗೊಳಿಸಿದ ರಸ್ತೆಯನ್ನು ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು.

ಶ್ರೀಮಠದ ಆವರಣದಲ್ಲಿ ನಡೆಯುತ್ತಿರುವ ನವರಾತ್ರಿಯ ಸಾಂಸ್ಕೃತಿಕ ಮಹೋತ್ಸವದಲ್ಲಿ ವಿದ್ವಾನ್ ರವಿಭಾಗವತ್ತಾರ್ ತಂಡದವರರಿಂದ ನಾಮಸಂಕೀರ್ತನೆ. ಗುರುವಾರ ಶಾರದೆಗೆ ಗರುಡವಾಹಿನಿಯಲಂಕಾರ ನಡೆಯಲಿದೆ. ರಾಜಬೀದಿ ಉತ್ಸವದಲ್ಲಿ ಧರೆಕೊಪ್ಪ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೆನ್ನೈನ ವಿದ್ವಾನ್ ಡಾ.ಗಣೇಶ್ ಭಾಗವತ್ತಾರ್ ತಂಡದವರಿಂದ ನಾಮಸಂಕೀರ್ತನೆ ನಡೆಯಲಿದೆ.

14 ಶ್ರೀ ಚಿತ್ರ 1-ಶೃಂಗೇರಿ ಶಾರದಾ ಪೀಠದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವದಲ್ಲಿ ಶೃಂಗೇರಿ ಶಾರದೆ ಮಯೂರವಾಹನವನ್ನೇರಿ ಕೌಮಾರಿಯಾಗಿ ಕಂಗೊಳಿಸಿದಳು.