ಸಾರಾಂಶ
ಹಲವಾರು ವಾದ-ವಿವಾದ, ಪೈಪೋಟಿಯ ನಡುವೆ ಫೈನಲ್
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಸರ್ಕಾರ ಬದಲಾಗಿ ಒಂದೂವರೆ ವರ್ಷವಾದರೂ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕ ಆಗದೆ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಈಗ ರಾಜ್ಯ ಸರ್ಕಾರ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಶ್ರೀನಿವಾಸ ಗುಪ್ತಾ ಅವರನ್ನು ನೇಮಕ ಮಾಡಿದ್ದು, ಇನ್ನೇನು ಅಂತಿಮ ಆದೇಶ ಹೊರಬೀಳಬೇಕಾಗಿದೆ.
ಸರ್ಕಾರದ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸರ್ಕಾರ ಈಗ ಶ್ರೀ ನಿವಾಸ ಗುಪ್ತಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗುವ ಕುರಿತು ವಿವರಣೆಯನ್ನು ಜಿಲ್ಲಾಧಿಕಾರಿಗಳಿಗೆ ಕೇಳಿದೆ.ಜಿಲ್ಲಾಧಿಕಾರಿಗಳ ವರದಿಯನ್ನು ಆಧರಿಸಿ ಶ್ರೀನಿವಾಸ ಗುಪ್ತಾ ಅವರ ನೇಮಕ ಆದೇಶ ಹೊರಬೀಳಲಿದೆ.
ಏನಿದು ವರದಿ?:ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಲು ಪ್ರಾಧಿಕಾರ ವ್ಯಾಪ್ತಿಯ ನಿವಾಸಿಯಾಗಿರಬೇಕು. ಮತದಾರರ ಯಾದಿಯಲ್ಲಿ ಇರಬೇಕು. ಇಂಥ ಹತ್ತಾರು ಷರತ್ತುಗಳ ಜೊತೆಗೆ ಕಾನೂನು ರೀತಿಯಿಂದಲೂ ಪರಿಶೀಲನೆ ಮಾಡಿ, ವರದಿಯನ್ನು ನೀಡುವಂತೆ ಕೇಳಲಾಗುತ್ತದೆ. ಅದರಂತೆ ಕೊಪ್ಪಳ ಜಿಲ್ಲಾಧಿಕಾರಿಗೆ ಬಂದಿದ್ದ ಪತ್ರಕ್ಕೆ ಈ ಎಲ್ಲ ಅಂಶಗಳನ್ನು ಒಳಗೊಂಡು ವರದಿಯನ್ನೂ ಸರ್ಕಾರಕ್ಕೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.ನೇಮಕಾತಿ ಆದೇಶ:
ವರದಿ ಸರ್ಕಾರದ ಕೈ ಸೇರುತ್ತಿದ್ದಂತೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಶ್ರೀನಿವಾಸ ಗುಪ್ತಾ ಅವರನ್ನು ನೇಮಕ ಮಾಡಿದ ಆದೇಶ ಹೊರಬೀಳಲಿದೆ. ಇದರ ಜೊತೆಗೆ ನಾಲ್ವರು ಸದಸ್ಯರನ್ನು ನೇಮಕವನ್ನು ಮಾಡಲಾಗಿದೆ. ಭಾರಿ ಪೈಪೋಟಿ:ಪ್ರಾಧಿಕಾರದ ಅಧ್ಯಕ್ಷ ಭಾರಿ ಪೈಪೋಟಿ ಇತ್ತು. ಇದೇ ಕಾರಣಕ್ಕಾಗಿಯೇ ನೇಮಕಾತಿ ಮುಂದೂಡತ್ತಾ ಬರಲಾಯಿತು. ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಾರದು ಎಂದು ಪುನಃ ಮುಂದೂಡಲಾಗಿತ್ತು. ಈಗ ಕೊನೆಗೂ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಶೀಘ್ರ ಆದೇಶ ಹೊರಬೀಳಲಿದೆ.ವೆಂಕಟೇಶ ಬಾರಕೇರ, ಶಿವು ಪಾವಲಿ, ಮಲ್ಲಿಕಾರ್ಜುನ ಪೂಜಾರ, ಪ್ರಸನ್ ಗಡಾದ ಸೇರಿದಂತೆ ಹಲವರು ಹೆಸರು ಪೈಪೋಟಿಯಲ್ಲಿದ್ದವು. ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ಘೋಷಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಪೈಪೋಟಿದಾರರು ಹಿಂದೆ ಸರಿದರು.ಹಂಚಿಕೆ:
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಉಳಿದಿರುವುದು ಮೂರುವರೆ ವರ್ಷಗಳ ಅವಧಿ ಮಾತ್ರವಾಗಿದೆ. ಈಗಾಗಲೇ ಸರ್ಕಾರ 1.5 ವರ್ಷ ಪೂರ್ಣಗೊಳಿಸುತ್ತ ಬಂದಿರುವುದರಿಂದ ಮೂರುವರೆ ವರ್ಷ ಬಾಕಿ ಇದೆ. ಹೀಗಾಗಿ, ಉಳಿದ ಅವಧಿಯನ್ನು ಮೂರು ಭಾಗಗಳಾಗಿ ಹಂಚಿಕೆ ಮಾಡಿ, ವರ್ಷಕ್ಕೊಬ್ಬರಂತೆ ಅಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಮೊದಲ ಅವಧಿಗೆ ಶ್ರೀನಿವಾಸ ಗುಪ್ತಾ ಅಧ್ಯಕ್ಷರಾಗಲಿದ್ದು, ಎರಡನೇ ಅವಧಿಗೆ ಪ್ರಸನ್ ಗಡಾದ ಅಧ್ಯಕ್ಷರಾಗಲಿದ್ದಾರೆ. ಇದಾದ ಮೇಲೆ ಮೂರನೇ ಅವಧಿಗೆ ಚುನಾವಣೆ ಸಮೀಪಿಸುವುದರಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡುವ ಕುರಿತು ಮಾತುಕತೆಯಾಗಿದೆ ಎನ್ನಲಾಗಿದೆ.ಪ್ರಾಧಿಕಾರಕ್ಕೆ ಬೇಕು ಕಾಯಕಲ್ಪ:
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕಾಯಕಲ್ಪ ಬೇಕಾಗಿದೆ. ಪ್ರಾಧಿಕಾರ ಇದುವರೆಗೂ ಗಮನಾರ್ಹ ಯಾವುದೇ ಕಾರ್ಯ ಮಾಡಿದ ಉದಾಹರಣೆ ಇಲ್ಲ. ತನ್ನ 25 ವರ್ಷಗಳ ಅವಧಿಯಲ್ಲಿ ಮಾಡಿದ್ದ ಒಂದೇ ಲೇ ಔಟ್ ಮಾತ್ರ. ಅದು ಸಂಪೂರ್ಣವಾಗಿ ಹಂಚಿಕೆ ಮಾಡಲು ಆಗಲಿಲ್ಲ. ಮೆಡಿಕಲ್ ಕಾಲೇಜಿಗೆ ನೀಡಿದ್ದರಿಂದ ಅದು ಕೆಲವೇ ಕೆಲವು ನಿವೇಶನ ಹಂಚಿಕೆ ಮಾಡಲಾಗಿದೆ. ಹೀಗಾಗಿ, ಇನ್ನಾದರೂ ಪ್ರಾಧಿಕಾರದಿಂದ ಜನರು ಅಪಾರ ನಿರೀಕ್ಷೆ ಇಟ್ಟಿಕೊಂಡಿರುವುದಂತೂ ಸುಳ್ಳಲ್ಲ.