ಸ್ವಚ್ಛ ಶಿರಸಿಗೆ ಪಣತೊಟ್ಟ ಶ್ರೀನಿವಾಸ ಹೆಬ್ಬಾರ್

| Published : Dec 15 2024, 02:01 AM IST

ಸ್ವಚ್ಛ ಶಿರಸಿಗೆ ಪಣತೊಟ್ಟ ಶ್ರೀನಿವಾಸ ಹೆಬ್ಬಾರ್
Share this Article
  • FB
  • TW
  • Linkdin
  • Email

ಸಾರಾಂಶ

ಜೀವ ಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಚಿಪಗಿ ಗ್ರಾಪಂ ವ್ಯಾಪ್ತಿಯ ಶಿರಸಿ-ಹುಬ್ಬಳ್ಳಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಹಿಟಾಚಿ ಮೂಲಕ ಕಳೆದ ಒಂದು ವಾರದಿಂದ ತೆರವು ಮಾಡುತ್ತಿದ್ದಾರೆ.

ಶಿರಸಿ: ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಶಿರಸಿ ಜೀವಜಲ ಕಾರ್ಯಪಡೆಯ ಮೂಲಕ ಕೆರೆ ಅಭಿವೃದ್ಧಿಗೊಳಿಸಿದ ಶ್ರೀನಿವಾಸ ಹೆಬ್ಬಾರ್ ಇದೀಗ ಶಿರಸಿ ನಗರವನ್ನು ಸ್ವಚ್ಛವಾಗಿಡಲು ಪಣತೊಟ್ಟಿದ್ದಾರೆ.

ಶಿರಸಿ ತಾಲೂಕಿನ ಸುತ್ತಮುತ್ತಲಿನ ಕೆರೆ ಅಭಿವೃದ್ಧಿ ಮಾಡುವ ಚಿರಪರಿಚಿತರಾದ ಶ್ರೀನಿವಾಸ ಹೆಬ್ಬಾರ್ ಚಿಪಗಿ ಗ್ರಾಪಂ ವ್ಯಾಪ್ತಿಯ ಶಿರಸಿ-ಹುಬ್ಬಳ್ಳಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಹಿಟಾಚಿ ಮೂಲಕ ತೆರವು ಮಾಡಿಸುತ್ತಿದ್ದು, ಕಳೆದ ಒಂದು ವಾರದಿಂದ ಸ್ವಚ್ಛತೆ ಕಾರ್ಯ ಕೈಗೊಂಡಿದ್ದಾರೆ.

ನಾಮಫಲಕ್ಕೆ ಮಾತ್ರ ಸೀಮಿತವಾಗಿಯೇ ಸ್ವಚ್ಛ ಶಿರಸಿ?: ಸಹ್ಯಾದ್ರಿ ಶೃಂಗ ಶಿರಸಿ ನಗರಕ್ಕೆ ಸ್ವಾಗತ ಎಂದು ನಗರದ ಮುಖ್ಯದ್ವಾರಗಳಲ್ಲಿ ನಾಮಫಲಕಗಳನ್ನು ನಗರಸಭೆಯಿಂದ ಅಳವಡಿಸಲಾಗಿದೆ. ಆದರೆ ಎಲ್ಲಿ ನೋಡಿದರೂ ಕಸದ ರಾಶಿಯೇ ರಾರಾಜಿಸುತ್ತದೆ. ನಗರದಂಚಿನ ಪ್ರದೇಶಗಳಲ್ಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಚೀಲದಲ್ಲಿ ತ್ಯಾಜ್ಯಗಳನ್ನು ತುಂಬಿ ಬಿಸಾಕುತ್ತಿದ್ದಾರೆ. ಇದರಿಂದ ನಗರದ ಸೌಂದರ್ಯವೇ ಹಾಳಾಗುತ್ತಿದೆ. ಆದರೂ ನಗರಸಭೆಯು ಕಣ್ಮುಚ್ಚಿಕುಳಿತಿರುವುದಕ್ಕೆ ಸಾರ್ವಜನಿಕರು ತೀವ್ರ ಆರೋಪಿಸಿದ್ದಾರೆ.

ಮೀನು-ಮಟನ್ ಅಂಗಡಿಯವರು ಹೆಚ್ಚುಳಿದ ತ್ಯಾಜ್ಯವನ್ನು ತಂದು ಎಸೆಯುತ್ತಿದ್ದು, ನಾಯಿಗಳಿಗೂ ಈ ಸ್ಥಳ ನೆಚ್ಚಿನ ತಾಣವಾಗಿದೆ. ಈ ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರು ಭಯಪಡುವಂತಾಗಿದೆ. ಅಲ್ಲದೇ ಗಲೀಜಿನಿಂದ ಗಬ್ಬು ನಾರುವಂತಾಗಿದೆ.

ಸ್ವಚ್ಛತೆಗೆ ಪಣ ತೊಟ್ಟ ಕೆರೆ ಹೆಬ್ಬಾರ್: ಚಿಪಗಿ ಗ್ರಾಪಂ ವ್ಯಾಪ್ತಿಯ ಕಾಲೇಜು ಬಳಿಯ ಶಿರಸಿ-ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿ ದಿನನಿತ್ಯದ ನಗರದ ಜನತೆ ವಾಯುವಿಹಾರಕ್ಕೆ ತೆರಳುತ್ತಾರೆ. ಆದರೆ ಈ ಪ್ರದೇಶ ವ್ಯಸನಿಗಳ ನೆಚ್ಚಿನ ತಾಟವಾಗಿ ಮಾರ್ಪಟ್ಟಿತ್ತು. ಎಲ್ಲಿ ನೋಡಿದರೂ ಬಿಯರ್ ಬಾಟಲಿ, ಬಟ್ಟೆ ಹಾಗೂ ಪಾದರಕ್ಷೆಯ ರಾಶಿಯಿಂದ ತುಂಬಿ ತುಳುಕುತ್ತಿತ್ತು. ಇದನ್ನು ಗಮನಿಸಿದ ಶ್ರೀನಿವಾಸ ಹೆಬ್ಬಾರ್ ತಮ್ಮ ಸ್ವಂತ ಖರ್ಚಿನಲ್ಲಿ ಕಸದ ರಾಶಿಯನ್ನು ತೆರವುಗೊಳಿಸಿ, ಸ್ವಚ್ಛ ಶಿರಸಿಗೆ ಕಾರ್ಯೋನ್ಮುಖರಾಗಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಹಾಗೂ ಕಸ ಬಿಸಾಡುವುದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತದೆ. ಸಾರ್ವಜನಿಕರು ಸ್ವಚ್ಛತೆ ಬಗ್ಗೆ ಹೆಚ್ಚು ಗಮನವಹಿಸಬೇಕು. ಕಳೆದ ೬ ತಿಂಗಳ ಹಿಂದೆ ನಗರದ ಮಾರಿಕಾಂಬಾ ಕ್ರೀಡಾಂಗಣದ ಶಿರಸಿ-ಹುಬ್ಬಳ್ಳಿ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಲಾಗಿತ್ತು. ಈಗ ಅಷ್ಟೇ ಕಸ ಹಾಕಿದ್ದಾರೆ. ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ನೂರಾರು ಜನರು ವಾಯುವಿಹಾರ ಹಾಗೂ ಕಾಲೇಜು ವಿದ್ಯಾರ್ಥಿಗಳು ತೆರಳುವ ರಸ್ತೆಯಲ್ಲಿ ಕಸ ಬಿಸಾಡುವುದನ್ನು ನಿಲ್ಲಿಸಬೇಕು ಎಂದು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ವಿನಂತಿಸಿದರು.

ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಸ್ವಂತ ಖರ್ಚಿನಲ್ಲಿ ಸ್ವಚ್ಛತೆ ಮಾಡಿಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆ ವರೆಗೆ ಶ್ರಮ ವಹಿಸಿ, ಸ್ವಚ್ಛತೆ ಮಾಡಿದಾಗ ರಾತ್ರಿಯ ವೇಳೆ ಆ ಜಾಗದಲ್ಲಿ ಮತ್ತೆ ಕಸ ತಂದು ಎಸೆಯುತ್ತಿದ್ದಾರೆ. ಸೋಲಾರ್ ಸಿಸಿ ಕ್ಯಾಮೆರಾ ಅಳವಡಿಸಿಕೊಡಲು ಶ್ರೀನಿವಾಸ ಹೆಬ್ಬಾರ್ ಬಳಿ ವಿನಂತಿಸಿದ್ದೇವೆ. ಅವರ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಇನ್ನು ಮುಂದೆ ಕಸ ಎಸೆದರೆ ಗ್ರಾಪಂನಿಂದ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಚಿಪಗಿ ಗ್ರಾಪಂ ಸದಸ್ಯ ನವೀನ ಶೆಟ್ಟಿ ಹೇಳಿದರು.

ಸಾಮೂಹಿಕವಾಗಿ ಸ್ವಚ್ಛತೆ ಬಗ್ಗೆ ಆದ್ಯತೆ ನೀಡಬೇಕಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ನಿಲ್ಲಿಸಬೇಕು. ನಗರಸಭೆ ಹಾಗೂ ಗ್ರಾಪಂನಿಂದ ಕಸ ಸಂಗ್ರಹಣಾ ವಾಹನ ಬರುತ್ತದೆ. ಅದಕ್ಕೆ ನೀಡಬೇಕು ಎಂದು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.