ಶ್ರೀರಾಮ- ಬಾಬರ್ ನಡುವೆ ಚುನಾವಣೆ: ಸಿ.ಟಿ. ರವಿ

| Published : Feb 02 2024, 01:02 AM IST

ಸಾರಾಂಶ

ದೇಶ ಮತ್ತು ಧರ್ಮ ರಕ್ಷಿಸುವುದು ಬಿಜೆಪಿಯ ಆದ್ಯತೆ. ಈ ಚುನಾವಣೆಯನ್ನು ನಾವು ಹನುಮ ಮತ್ತು ಟಿಪ್ಪುವಿನ ನಡುವಿನ ಚುನಾವಣೆ ಎಂದೇ ಭಾವಿಸಿದ್ದೇವೆ ಎಂದು ಮಾಜಿ ಸಚಿವ ಸಿ.ಟಿ. ರವಿ ತಿಳಿಸಿದರು.

ಬಳ್ಳಾರಿ: ಈ ಬಾರಿಯ ಲೋಕಸಭಾ ಚುನಾವಣೆ ಶ್ರೀರಾಮ ಹಾಗೂ ಬಾಬರ್ ನಡುವಿನ ಚುನಾವಣೆಯಾಗಿದ್ದು, ದೇಶ ಹಾಗೂ ಧರ್ಮ ರಕ್ಷಿಸುವ ಚುನಾವಣೆಯಾಗಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಬಣ್ಣಿಸಿದರು.

ನಗರದ ಬಸವಭವನದಲ್ಲಿ ಗುರುವಾರ ಜರುಗಿದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಈ ಹಿಂದಿನಿಂದಲೂ ಬಾಬರ್ ಪರವಾಗಿದೆ. ಬಿಜೆಪಿ ಶ್ರೀರಾಮನ ಪರವಾಗಿದೆ. ಕಾಂಗ್ರೆಸ್ ನಾಯಕರು ಶ್ರೀರಾಮ ಕಾಲ್ಪನಿಕ ವ್ಯಕ್ತಿ. ಆತ ಹುಟ್ಟೇ ಇಲ್ಲ ಎಂದಿದ್ದರು. ಆದರೆ, ಈಗ ಅದೇ ಕಾಂಗ್ರೆಸ್ ನಾಯಕರು ಜೈ ಶ್ರೀರಾಮ ಎನ್ನುವಂತೆ ಶ್ರೀರಾಮನೇ ಮಾಡಿದ್ದಾನೆ.

ದೇಶ ಮತ್ತು ಧರ್ಮ ರಕ್ಷಿಸುವುದು ಬಿಜೆಪಿಯ ಆದ್ಯತೆ. ಈ ಚುನಾವಣೆಯನ್ನು ನಾವು ಹನುಮ ಮತ್ತು ಟಿಪ್ಪುವಿನ ನಡುವಿನ ಚುನಾವಣೆ ಎಂದೇ ಭಾವಿಸಿದ್ದೇವೆ. ಈ ಚುನಾವಣೆ ಕಾಶಿ ವಿಶ್ವನಾಥ- ಔರಂಗಜೇಬನ ನಡುವಿನ ಮತ್ತು ಸೋಮನಾಥ- ಗಝನಿ ಮಹ್ಮದ್ ನಡುವಿನ ಚುನಾವಣೆ ಎಂದು ತಿಳಿದಿದ್ದೇವೆ. ಕಾಂಗ್ರೆಸ್ ಟಿಪ್ಪುವಿನ ಆರಾಧಿಸಿದರೆ, ಬಿಜೆಪಿ ಹನುಮನನ್ನು ಆರಾಧಿಸುತ್ತದೆ ಎಂದು ಸಿಟಿ ರವಿ ತಿಳಿಸಿದರು.

ಏಕ್ ಮಾರ್ ದೋ ತುಕುಡಾ: ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ಕೊಡುವುದು ಗಾಂಧಿಯುಗ. ಇದು ಮೋದಿ ಯುಗ. ಹೊಡೆಯಲು ಕೈ ಎತ್ತಿದ ಭಯೋತ್ಪಾದಕರ ಕೈ ಇಲ್ಲವಾಗುತ್ತವೆ. ಮುಲಾಜಿಲ್ಲದೆ ಸರ್ಜಿಕಲ್ ಸ್ಟ್ರೈಕ್ ಆಗುತ್ತದೆ. ಮೋದಿ ಯುಗ ಆರಂಭದ ಬಳಿಕ ಭಯೋತ್ಪಾದಕರಿಗೆ ದಿಗಲು ಮೂಡಿದೆ. ಭಯೋತ್ಪಾದಕರ ವಿರುದ್ಧ ಏಕ್ ಮಾರ್ ದೋ ತುಕುಡಾ ನೀತಿ ನಮ್ಮದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಬಳಿಕ ಅಭಿವೃದ್ಧಿ ಶೂನ್ಯವಾಗಿದೆ. ದರಗಳ ಏರಿಕೆಯಾಗುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಮುಂದುವರಿಯುವುದಿಲ್ಲ ಎಂದು ಕಾಂಗ್ರೆಸ್‌ನವರು ಬೆದರಿಸುತ್ತಿದ್ದಾರೆ. ಆದರೆ, ಬಿಜೆಪಿಗೆ ನರೇಂದ್ರ ಮೋದಿಯವರೆ ಗ್ಯಾರಂಟಿ ಎಂದರು.

ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ವಿಧಾನಪರಿಷತ್ ಸದಸ್ಯ ರವಿಕುಮಾರ್, ನೂತನ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ ಮೋಕಾ ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಮಾಜಿ ಶಾಸಕ ಸೋಮಲಿಂಗಪ್ಪ, ಸುರೇಶ್ ಬಾಬು, ಶಿಲ್ಪಾ ರಾಘವೇಂದ್ರ, ಬಂಗಾರ ಹನುಮಂತು, ಪಾರ್ವತಿ ಇಂದುಶೇಖರ್, ಗುರುಲಿಂಗನಗೌಡ, ಪ್ರಭುಕಪ್ಪಗಲ್, ಡಾ. ಮಹಿಪಾಲ್, ಗುತ್ತಿಗನೂರು ವಿರುಪಾಕ್ಷಗೌಡ ಉಪಸ್ಥಿತರಿದ್ದರು.

ಡಾ. ಅರುಣಾ ಕಾಮಿನೇನಿ ಹಾಗೂ ಉಡೇದ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್ ಅವರು ನೂತನ ಜಿಲ್ಲಾಧ್ಯಕ್ಷರಿಗೆ ಬಿಜೆಪಿ ಬಾವುಟ ಹಸ್ತಾಂತರಿಸಿದರು.

ಲೋಕಾ ಬಳಿಕ ಕಾಂಗ್ರೆಸ್ ಸರ್ಕಾರ ಪತನ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಷ್ಟ್ರಪತಿಗಳಿಗೆ ಅಪಮಾನ ಮಾಡಿದ್ದಾರೆ. ಅವಳು- ಇವಳು ಎಂದು ಸಂಬೋಧಿಸಿದ್ದಾರೆ. ಇನ್ನೊಬ್ಬ ನನ್ನ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾನೆ. ನನ್ನ ಸಾಮರ್ಥ್ಯ ಇದೆಯೋ ಇಲ್ಲವೋ ಎಂಬುದಕ್ಕೆ ಮನೆಯಲ್ಲಿ ತೋರಿಸಿದ್ದೇನೆ. ಎರಡು ಮುದ್ದಾದ ಮಕ್ಕಳಿವೆ ಎಂದು ಮಾಜಿ ಸಚಿವ ಸಿ.ಟಿ. ರವಿ ತಿಳಿಸಿದರು.

ಹನುಮನ ಬಾಲಕ್ಕೆ ಬೆಂಕಿ ಇಟ್ಟ ಕಾರಣಕ್ಕೆ ಲಂಕಾವೇ ದಹನವಾಯಿತು. ರಾವಣ ಹತನಾದ. ಲೋಕಸಭಾ ಚುನಾವಣೆ ಬಳಿಕದ ಒಂದೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಪತನವಾಗುತ್ತದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಮಾಜಿಗಳಾಗುತ್ತಾರೆ, ಇದು ಖಚಿತ. ಹನುಮನ ಕೆಣಕಿದವರಿಗೆ ತಕ್ಕಶಾಸ್ತಿಯಾಗಲಿದೆ ಎಂದು ಸಿಟಿ ರವಿ ಹೇಳಿದರು.