ಪಾಲಿಕೆಯಿಂದ ಶ್ರೀರಾಮ ಫ್ಲೆಕ್ಸ್‌ ತೆರವು; ಬಿಜೆಪಿ ಆಕ್ರೋಶ

| Published : Jan 24 2024, 02:02 AM IST

ಸಾರಾಂಶ

ಭಗವಾಧ್ವಜ, ಶ್ರೀರಾಮನ ಕಟೌಟ್‌, ಬ್ಯಾನರ್, ಬಂಟಿಂಗ್ಸ್‌ಗಳನ್ನು ಬಲವಂತವಾಗಿ ಕಿತ್ತು ಹಾಕುವುದು ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ. ಪಾಲಿಕೆ ಆಯುಕ್ತರು, ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಏಜೆಂಟರಂತೆ ಕೆಲಸ ಮಾಡಬಾರದು. ಸರ್ಕಾರ ಮೌಖಿಕ ಆದೇಶ ನೀಡಿದೆಯೆಂದರೆ, ಅದನ್ನು ಹಿಂದೂಗಳು ಸಹಿಸಲ್ಲ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ, ಮಂದಿರ ಉದ್ಘಾಟನೆ ಅಂಗವಾಗಿ ಹಿಂದೂ ಪರ ಸಂಘಟನೆಗಳು ಹಾಕಿದ್ದ ಬಂಟಿಂಗ್ಸ್‌, ಭಗವಾಧ್ವಜ ಹಾಗೂ ಫ್ಲೆಕ್ಸ್‌ಗಳ ಪಾಲಿಕೆ ಏಕಾಏಕಿ ತೆರವುಗೊಳಿಸಿದ ಪಾಲಿಕೆ ಆಯುಕ್ತರ ಕ್ರಮ ಖಂಡಿಸಿ, ಪಾಲಿಕೆಯ ಹಿಂದೂ ವಿರೋಧಿ ಧೋರಣೆ ವಿರುದ್ಧ ಹಿಂದೂ ಪರ ಸಂಘಟನೆಗಳು, ಬಿಜೆಪಿ ಮುಖಂಡರ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ವಿನೋಬ ನಗರ, ಯಲ್ಲಮ್ಮ ನಗರ, ವಿವಿಧ ಬಡಾವಣೆಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಪಾಲಿಕೆ ಆಯುಕ್ತರ ಸೂಚನೆ ಎಂಬುದಾಗಿ ಹೇಳಿ ಅಧಿಕಾರಿಗಳು, ಸಿಬ್ಬಂದಿ ಫ್ಲೆಕ್ಸ್, ಬ್ಯಾನರ, ಬಂಟಿಂಗ್ಸ್, ಧ್ವಜಗಳ ತೆರವಿಗೆ ಮುಂದಾಗುತ್ತಿದ್ದಂತೆಯೇ ಪಾಲಿಕೆ ಸದಸ್ಯ ಆರ್.ಶಿವಾನಂದ, ದೂಡಾ ರಾಜನಹಳ್ಳಿ ಶಿವಕುಮಾರ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಹಿರಿಯ ಮುಖಂಡ ಬಿ.ಎಂ.ಷಣ್ಮುಖಯ್ಯ ಆವರಗೊಳ್ಳ, ಯುವ ಮುಖಂಡ ಟಿ.ಶ್ರೀನಿವಾಸ ದಾಸಕರಿಯಪ್ಪ, ಡಾ.ಟಿ.ಜಿ.ರವಿಕುಮಾರ, ಎಸ್.ಟಿ.ವೀರೇಶ, ಎಸ್‌.ಟಿ.ಯೋಗೇಶ, ಸುರೇಶ ಗಂಡಗಾಳೆ ಸೇರಿ ನೂರಾರು ಮುಖಂಡರು ಸ್ಥಳಕ್ಕೆ ದೌಡಾಯಿಸಿ ಹಳೆ ಪಿಬಿ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಪಾಲಿಕೆ ಆಯುಕ್ತರು, ಅಧಿಕಾರಿಗಳು ಮೊದಲು ಹಲವು ಕಡೆ ಕಟ್ಟಿಕೊಂಡಿರುವ ಚರಂಡಿ, ಒಳ ಚರಂಡಿಗಳ ಸ್ವಚ್ಛತೆ, ಎಲ್ಲೆಂದರಲ್ಲಿ ಕಸ ಎಸೆಯುದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಲಿ. ಅದು ಬಿಟ್ಟು, ಪಾಲಿಕೆ ಆಯುಕ್ತರು ಯಾರನ್ನೋ ಮೆಚ್ಚಿಸಲು ಹಿಂದುಗಳ ಹಬ್ಬ, ಆಚರಣೆಗಳಿಗೆ ಅಡ್ಡಿಪಡಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಯಾರೋ ದೊಡ್ಡ ವ್ಯಕ್ತಿಗಳ ಫ್ಲೆಕ್ಸ್, ಬ್ಯಾನರ್ ಹಾಕಿದರೆ ತಿಂಗಳುಗಳಾದರೂ ತಿರುಗಿ ನೋಡದ ಪಾಲಿಕೆ ಅಧಿಕಾರಿಗಳು ಹಿಂದೂಗಳ ಹಬ್ಬ, ಆಚರಣೆಗಳಿಗೆ ಅಡ್ಡಿಯಾಗುವುದು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರ ಹಾಕಿ ಪಾಲಿಕೆಗೆ ಮುತ್ತಿಗೆ ಹಾಕಿದರು.

..........ಹಿಂದೂ ವಿರೋಧಿ ಧೋರಣೆ; ಪಾಲಿಕೆಗೆ ಬಿಜೆಪಿ ಮುತ್ತಿಗೆವಿಧಾನಪರಿಷತ್‌ ಮುಖ್ಯ ಸಚೇತಕ, ಮಾಜಿ ಸಚಿವ ನೇತೃತ್ವ । ಆಯುಕ್ತರು ಕ್ಷಮೆ ಕೇಳುವುದರೊಂದಿಗೆ ಹೋರಾಟ ವಾಪಸ್‌ದಾವಣಗೆರೆ: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಳವಡಿಸಿದ್ದ ಫ್ಲೆಕ್ಸ್, ಬ್ಯಾನರ್‌, ಬಂಟಿಂಗ್ಸ್‌,ಧ್ವಜಗಳ ಪಾಲಿಕೆಯು ದಿಢೀರ್‌ ತೆರವು ಖಂಡಿಸಿ ಹಿಂದೂ ಪರ ಸಂಘಟನೆಗಳು, ಬಿಜೆಪಿ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ಇಲ್ಲಿನ ಪಾಲಿಕೆ ಆವರಣದಲ್ಲಿ ಪ್ರತಿಭಟನಾನಿರತರ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌.ರವಿಕುಮಾರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇತರರು ಕೇಸರಿ ಧ್ವಜಗಳ ತೆರವುಗೊಳಿಸಿ ಪಾಲಿಕೆ ಆಯುಕ್ತರು, ಆಡಳಿತ ಯಂತ್ರ ಹಿಂದೂ ವಿರೋಧಿ ನೀತಿ, ಧೋರಣೆ ಅನುಸರಿಸುತ್ತಿದೆ. ಇಂತಹ ಧೋರಣೆ ಒಳ್ಳೆಯದಲ್ಲ ಎಂದು ಎಚ್ಚರಿಸಿದರು.

ಭಗವಾಧ್ವಜ, ಶ್ರೀರಾಮನ ಕಟೌಟ್‌, ಬ್ಯಾನರ್, ಬಂಟಿಂಗ್ಸ್‌ಗಳನ್ನು ಬಲವಂತವಾಗಿ ಕಿತ್ತು ಹಾಕುವುದು ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ. ಪಾಲಿಕೆ ಆಯುಕ್ತರು, ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಏಜೆಂಟರಂತೆ ಕೆಲಸ ಮಾಡಬಾರದು. ಸರ್ಕಾರ ಮೌಖಿಕ ಆದೇಶ ನೀಡಿದೆಯೆಂದರೆ, ಅದನ್ನು ಹಿಂದೂಗಳು ಸಹಿಸಲ್ಲ ಎಂದು ಹರಿಹಾಯ್ದರು.

ಧ್ವಜ ಕಟ್ಟುವುದು ಹಿಂದೂಗಳ ಹಕ್ಕು. ಇದು ಹಿಂದೂ ರಾಷ್ಟ್ರ. ಮುಖ್ಯಮಂತ್ರಿಯವರು ತಮ್ಮ ಸ್ವಾರ್ಥಕ್ಕಾಗಿ ಹಿಂದೂಗಳ ಬಗ್ಗು ಬಡಿಯಲು ನೋಡುತ್ತಿದ್ದಾರೆ. ಇಂತಹ ಹಿಂದು ವಿರೋಧಿ ಧೋರಣೆ ಅನುಸರಿಸಿದರೆ ನಾವ್ಯಾರಿಗೂ ಬಗ್ಗುವುದೂ ಇಲ್ಲ. ಕಾಂಗ್ರೆಸ್ ಸರ್ಕಾರ ಇಂತಹ ಹಿಂದೂ ವಿರೋಧಿ ಧೋರಣೆಗೆ ಪ್ರತಿಫಲ ಎದುರಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಕೇಸರಿ ಧ್ವಜಗಳ ತೆರವುಗೊಳಿಸುವ ದುಸ್ಸಾಹಸಕ್ಕೆ ಕೈಹಾಕಿದರೆ ತೀವ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ರಾಜಶೇಖರ ನಾಗಪ್ಪ, ಎಸ್.ಎಂ.ವೀರೇಶ ಹನಗವಾಡಿ, ಜಿ.ಎಸ್.ಅನಿತಕುಮಾರ, ಲೋಕಿಕೆರೆ ನಾಗರಾಜ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್‌, ಬಿ.ಎಸ್.ಜಗದೀಶ, ಡಾ.ಟಿ.ಜಿ.ರವಿಕುಮಾರ, ಎಂ.ಪಿ.ಕೃಷ್ಣಮೂರ್ತಿ ಪವಾರ್, ಎಸ್.ಟಿ.ವೀರೇಶ, ರಾಜನಹಳ್ಳಿ ಶಿವಕುಮಾರ, ಟಿ.ಶ್ರೀನಿವಾಸ ದಾಸಕರಿಯಪ್ಪ, ಬಿ.ಜಿ.ಅಜಯಕುಮಾರ, ಕೆ.ಎಂ.ವೀರೇಶ, ಹಿಂದು ಪರ ಸಂಘಟನೆಗಳ ಮುಖಂಡರಾದ ಸತೀಶ ಪೂಜಾರಿ, ಜೊಳ್ಳಿ ಗುರು, ಅರುಣ, ದೊಡ್ಡೇಶ ಸೇರಿ ಪಾಲಿಕೆ ವಿರುದ್ಧ ಘೋಷಣೆ ಕೂಗಿದರು. ಕೊನೆಗೆ ಪಾಲಿಕೆ ಆಯುಕ್ತರು ಕ್ಷಮೆ ಕೇಳುವುದರೊಂದಿಗೆ ಪ್ರತಿಭಟನಾಕಾರರು ಹೋರಾಟ ಹಿಂಪಡೆದರು.

........

ಡಿಸಿ, ಎಸ್‌ಪಿ ಹಿಂದೂಗಳಲ್ವಾ?

ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಹಿಂದೂ ವಿರೋಧಿ ಧೋರಣೆ ತಾಳಿದರೆ ನಾವು ಸುಮ್ಮನಿರಲ್ಲ. ದಾವಣಗೆರೆ ಡಿಸಿ, ಎಸ್ಪಿ ಹಿಂದೂಗಳಲ್ವಾ? ಔರಂಗಜೇಬ್, ಬಾಬರ್ ಫ್ಲೆಕ್ಸ್‌ಗಳ ತೆರವುಗೊಳಿಸಲ್ಲ. ಹಿಂದೂಗಳ ಫ್ಲೆಕ್ಸ್‌, ಬ್ಯಾನರ್, ಬಂಟಿಂಗ್ಸ್‌ ತೆರವುಗೊಳಿಸಲು ಮುಂದಾಗುತ್ತೀರಾ? ಕೆಲ ದಿನಗಳ ನಂತರ ನಾವೇ ಗೌರವಯುತವಾಗಿ ತೆರವು ಮಾಡುತ್ತೇವೆ. ಅಷ್ಟರಲ್ಲೇ ಅವುಗಳ ತೆರವಿಗೆ ಆಡಳಿತ ಯಂತ್ರ ಮುಂದಾದರೆ, ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.

.......................

ರಾಜಕೀಯ ಒತ್ತಡ ಇತ್ತೆ?

ಸಿಎಂ ಸಿದ್ದರಾಮಯ್ಯ ಜೈ ಶ್ರೀರಾಮ್ ಅಂತಾ ಘೋಷಣೆ ಕೂಗಿದ್ದು ಒಂದೇ ದಿನಕ್ಕೆ ಸೀಮಿತವಾಗಿತ್ತೆಯೆಂಬ ಅನುಮಾನ ಕಾಡುತ್ತದೆ. ದಾವಣಗೆರೆಯಲ್ಲಿ ಬೆಳಗ್ಗೆನೇ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರು ಕಟ್ಟಿರುವ ಬಂಟಿಂಗ್ಸ್, ತೋರಣಗಳ ತೆರವುಗೊಳಿಸಲು ಮುಂದಾಗಿದ್ದರ ಹಿಂದೆ ಯಾರದ್ದಾದರೂ ರಾಜಕೀಯ ಒತ್ತಡ ಇತ್ತೆ? ಈ ಬಗ್ಗೆ ಪಾಲಿಕೆ ಆಯುಕ್ತರು ಸ್ಪಷ್ಟನೆ ನೀಡಬೇಕು. ಶ್ರೀರಾಮನ ಬ್ಯಾನರ್‌ಗಳಿಂದ ಯಾರಿಗೂ ತೊಂದರೆಯಾಗಿಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಪಾಲಿಕೆ ಆಯುಕ್ತರು ಮಾಡಬಾರದು. ಪ್ರಮುಖ ಸ್ಥಳದಲ್ಲಿ ಹಾಕಿರುವ ಶ್ರೀರಾಮನ ಫ್ಲೆಕ್ಸ್ ತೆರವು ಮಾಡಬಾರದು, ನೋಟಿಸ್ ಕೊಡಬಾರದು. ಒಂದು ವೇಳೆ ಅಸಡ್ಡೆ ತೋರಿದರೆ, ಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ.

ಎನ್.ರವಿಕುಮಾರ, ವಿಧಾನ ಪರಿಷತ್‌ ಮುಖ್ಯ ಸಚೇತಕ. ಪೊಲೀಸರು-ಪ್ರತಿಭಟನಾಕಾರರ ಮಧ್ಯೆ ವಾಕ್ಸಮರ

ಫ್ಲೆಕ್ಸ್, ಬ್ಯಾನರ್, ಕಟೌಟ್‌, ಧ್ವಜಗಳ ತೆರವಿಗೆ ಮುಂದಾದ ಪಾಲಿಕೆ ಆಯುಕ್ತರು, ಅಧಿಕಾರಿಗಳ ವಿರುದ್ಧ ಬಿಜೆಪಿ, ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಗಳು, ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ, ತಳ್ಳಾಟವೂ ನಡೆಯಿತು. ಹಳೆ ಪಿಬಿ ರಸ್ತೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಧಾವಿಸಿ, ಹೋರಾಟ ಕೈಬಿಡಲು ಮಾಡಿದ ಮನವಿಗೆ ಪ್ರತಿಭಟನಾಕಾರರು ಕಿವಿಗೊಡದೆ ಹೋರಾಟ ಮುಂದುವರಿಸಿದರು. ನಂತರ ಎಸ್ಪಿ ಅಲ್ಲಿಂದ ಹೊರಟ ನಂತರ ಹೋರಾಟ ಮತ್ತಷ್ಟು ತೀವ್ರತೆ ಪಡೆಯಿತು. ಆಗ ಗಲಾಟೆ ನಿಯಂತ್ರಿಸುವ ವೇಳೆ ಮಾತಿನ ಚಕಮಕಿ, ತಳ್ಳಾಟದಿಂದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೋರಾಟ ತೀವ್ರತೆ ಪಡೆಯುವುದು ಗ್ರಹಿಸಿ ಅಧಿಕಾರಿಗಳು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಲು ಪೊಲೀಸರ ಯತ್ನಿಸಿದರೂ ಯಶಸ್ವಿಯಾಗಲಿಲ್ಲ.