ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ಬಹುತೇಕ ದೇವಸ್ಥಾನಗಳಲ್ಲಿ ನೇರ ಪ್ರಸಾರ ವೀಕ್ಷಣೆ, ರಾಮತಾರಕ ಹೋಮ, ಅನ್ನಸಂತರ್ಪಣೆ ಸೇರಿದಂತೆ ವಿಶೇಷ ಧಾರ್ಮಿಕ ಕೈಂಕರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಮುಖ ರಸ್ತೆ, ವೃತ್ತ, ಜನಸಂದಣಿ ಸ್ಥಳಗಳಲ್ಲಿ ಶ್ರೀರಾಮನ ಕಟೌಟ್, ಕೇಸರಿ ಬಂಟಿಂಗ್ಸ್, ಫ್ಲೆಕ್ಸ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.ಅನೇಕ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಈಗಾಗಲೇ ಅನೇಕ ಕಡೆ ರಾಮ ಸ್ಮರಣೆ, ಭಜನೆಗಳು ಆರಂಭ ನಡೆಯುತ್ತಿವೆ. ಸೋಮವಾರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲು ಮುಂದಾಗಿವೆ.
ನಗರದ ಬನಶಂಕರಿಯ ಬನಶಂಕರಿ ದೇವಾಲಯ, ಮಲ್ಲೇಶ್ವರ ಶ್ರೀ ರಾಮ ಮಂದಿರ, ಚಾಮರಾಜನಗರದ ವಿದ್ಯಾಗಣಪತಿ ದೇವಸ್ಥಾನ, ಮಲ್ಲೇಶ್ವರದ ದೇವಿ ಮಂದಿರ ಸೇರಿದಂತೆ ವಿಜಯನಗರ, ಮಲ್ಲೇಶ್ವರ, ರಾಜಾಜಿನಗರ, ಗಾಂಧೀನಗರ, ಯಶವಂತಪುರ ಸೇರಿ ಪ್ರಮುಖ ದೇವಸ್ಥಾನಗಳಲ್ಲಿ ಶ್ರೀರಾಮ ಉತ್ಸವ, ಲಕ್ಷ ದೀಪೋತ್ಸವ, ಭಜನೆ, ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸಲಾಗಿದೆ.ಬನಶಂಕರಿ ದೇವಸ್ಥಾನದಲ್ಲಿ ಜಾತ್ರಾ ಪ್ರಯುಕ್ತ ವಿಶೇಷ ಕೈಂಕರ್ಯಗಳು ನಡೆಯುತ್ತಿವೆ. ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಮತಾರಕ ಹೋಮ ಏರ್ಪಡಿಸಲಾಗಿದೆ. ಜೊತೆಗೆ ದೇವಸ್ಥಾನದಿಂದ ಬನಶಂಕರಿ ವೃತ್ತದವರೆಗೆ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಪ್ರಮುಖರಾದ ಚಂದ್ರು ಮೋಹನ್ ತಿಳಿಸಿದರು.
ತ್ಯಾಗರಾಜನಗರದ ಅಭಯಲಕ್ಷ್ಮಿ ನರಸಿಂಹ ಶ್ರೀ ಪಟ್ಟಾಭಿರಾಮ ದೇವಸ್ಥಾನದಲ್ಲಿ ರಾಮದೇವರ ರಥೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಲ್ಲೇಶ್ವರದ ದೇವಿ ದೇವಸ್ಥಾನದಲ್ಲಿ ಭಜನಾ ಸಪ್ತಾಹ ನಡೆಯುತ್ತಿದ್ದು, ಸೋಮವಾರ ವಿಶೇಷ ಧಾರ್ಮಿಕ ಪೂಜೆ, ಪ್ರಸಾದ ವಿತರಣೆ ಆಯೋಜಿಸಲಾಗಿದೆ. ರಾಜಾಜಿನಗರದಲ್ಲಿ ಶಂಕರ ಸೇವಾ ಸಮಿತಿಯಿಂದ ರಾಮತಾರಕ ಹೋಮ ನಡೆಯಲಿದೆ.ಮಕರ ಸಂಕ್ರಮಣ ಹಬ್ಬದಿಂದ ದೇವಸ್ಥಾನಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಗಿದೆ. ಸೋಮವಾರ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ದೇವಸ್ಥಾನಗಳಲ್ಲಿ ಎಲ್‌ಇಡಿ ಸ್ಕ್ರೀನ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸಂಜೆ ವೇಳೆಗೆ ದೀಪ ಬೆಳಗುವುದು ಸೇರಿ ಸಾಮೂಹಿಕ ರಾಮನಾಮ ಜಪ ಹಮ್ಮಿಕೊಳ್ಳಲಾಗಿದೆ.
ಮಾಗಡಿ ರಸ್ತೆ, ವಿಜಯನಗರದ ಪ್ರಮುಖ ರಸ್ತೆ ಸಂಪೂರ್ಣ ಕೇಸರಿಮಯವಾಗಿದೆ. ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಶ್ರೀರಾಮನ ವಿಗ್ರಹ ಇಡಲಾಗಿದ್ದು, ಜನತೆಯ ಸೆಲ್ಫೀ ಪಾಯಿಂಟ್ ಆಗಿದೆ. ರಾಜಾಜಿನಗರದ ಶ್ರೀರಾಮ ಮಂದಿರದಲ್ಲಿ ಭಜನೆ ನಡೆಯುತ್ತಿದ್ದು, ಸೋಮವಾರ ವಿಶೇಷ ಪೂಜೆ ಆಯೋಜನೆಯಾಗಿದೆ. ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇವಾ ಮಂಡಳಿ, ಹಿಂದೂ ಜನಜಾಗೃತಿ ಸಮಿತಿಗಳು ನಗರದ ಹಲವೆಡೆ ಕಾರ್ಯಕ್ರಮ ಆಯೋಜಿಸಿವೆ. ಶನಿವಾರ ಸಂಪಂಗಿರಾಮ ನಗರದಲ್ಲಿ ಮಕ್ಕಳು ರಾಮ, ಹನುಮಂತನ ವೇಷ ಧರಿಸಿ ಸಂಭ್ರಮಿಸಿದರು.ಕೇಸರಿ ಬಟ್ಟೆಗಳಿಗೆ ಹೆಚ್ಚಿದ ಬೇಡಿಕೆನಗರದಲ್ಲಿ ಶ್ರೀರಾಮನ ಚಿತ್ರವಿರುವ ಬಂಟಿಂಗ್ಸ್, ಬಾವುಟ, ಶಾಲುಗಳು, ಟಿ ಶರ್ಟ್ ಸೇರಿದಂತೆ ಹಲವು ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಎಲ್ಲೆಡೆ ರಾಮನ ಚಿತ್ರವಿರುವ ಕೇಸರಿ ಬಾವುಟ ಹಾಕಿ, ಅದ್ಧೂರಿ ಆಚರಣೆ ಮಾಡಲು ಉತ್ಸುಕರಾಗಿದ್ದಾರೆ. ಕೇಸರಿ ಶಾಲು, ಶ್ರೀರಾಮನ ಭಾವಚಿತ್ರವಿರುವ ಬಂಟಿಂಗ್ ಖರೀದಿಸತೊಡಗಿದ್ದಾರೆ.
ಬೇಲಿಮಠ ರಸ್ತೆಯ ಎಸ್ ಆರ್ ಎಂಟರ್ ಪ್ರೈಸಸ್ ಮಾಲೀಕ ಶೇಖರ್, ರಾಮನ ಚಿತ್ರವಿರುವ ಬಂಟಿಂಗ್ಸ್, ಟಿ ಶರ್ಟ್, ಬ್ಯಾನರ್, ಶಾಲುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ಹದಿನೈದು ದಿನದಿಂದಲೇ ಬುಕ್ಕಿಂಗ್ ಪ್ರಾರಂಭವಾಗಿದೆ. ಉತ್ತರ ಕರ್ನಾಟಕ ಭಾಗದಿಂದಲೂ ಇವುಗಳಿಗೆ ಆರ್ಡರ್ ಬಂದಿದೆ. ಕೇಸರಿ ಶಾಲುಗಳಿಗೆ ಹೋಲ್‌ಸೆಲ್ ದರ ₹12 ನಿಗದಿಸಲಾಗಿದೆ. ಉಳಿದಂತೆ ಬ್ಯಾನರ್, ಬಂಟಿಂಗ್ಸ್, ಟಿ ಶರ್ಟ್ ಗಳಿಗೆ ಗುಣಮಟ್ಟ, ಅಳತೆ ಅನುಗುಣವಾಗಿ ₹100 ದರ ನಿಗದಿ ಪಡಿಸಲಾಗಿದೆ ಎಂದರು.ಬ್ರಿಗೇಡ್ ಗೇಟ್‌ವೇ ಓರಾಯನ್ ಮಾಲ್‌ನಲ್ಲಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ನೇರ ಪ್ರಸಾರ ಆಯೋಜಿಸಲಾಗಿದೆ. ನಗರದ ಚಿನ್ನಾಭರಣ, ಗ್ರಂಥಿಗೆ ಮಳಿಗೆಗಳ ಬಳಿ ಶ್ರೀರಾಮನ ವಿಗ್ರಹವನ್ನು ಇಡಲಾಗಿದ್ದು, ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ.