ಶ್ರೀರಾಮ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು 70ರಿಂದ80 ಕೋಟಿ ರೂಪಾಯಿಗಳ ವಹಿವಾಟು
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಈ ಭಾಗದ ರೈತರ ಜೀವನಾಡಿ ಶ್ರಿರಾಮಸಕ್ಕರೆ ಕಾರ್ಖಾನೆ ಕ್ಷೇತ್ರದ ಎಲ್ಲ ರಾಜಕಾರಿಣಿಗಳ ಸ್ವಾರ್ಥ ರಾಜಕೀಯದಿಂದ ಹಾಳಾಗಲು ಕಾರಣವಾಗಿದ್ದು, ಕೂಡಲೆ ಕಾರ್ಖಾನೆ ಪ್ರಾರಂಭಿಸದಿದ್ದರೆ ಕಬ್ಬುಬೆಳೆಗಾರರ ಸಂಘದ ವತಿಯಿಂದ ಕ್ಷೇತ್ರದಲ್ಲಿ ಉಗ್ರಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಎಚ್ಚರಿಸಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಕಬ್ಬುಬೆಳೆಗಾರರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.ಶ್ರೀರಾಮ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು 70ರಿಂದ80 ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದ್ದು ಇದರಿಂದ ಈ ಭಾಗದ ರೈತರು, ಕೂಲಿಕಾರ್ಮಿಕರು ವಂಚಿತರಾಗುವಂತಾಗಿದೆ ಇದಕ್ಕೆ ಕಾರಣ ನಮ್ಮ ಕ್ಷೇತ್ರದ ಹಾಲಿ, ಮಾಜಿ ಎಲ್ಲಾ ರಾಜಕಾರಿಣಿಗಳು ರಾಜಕಿಯ ಲಾಭಕ್ಕೆ ಉಪಯೋಗಿಸಿಕೊಂಡು ಕಾರ್ಖಾನೆ ಪ್ರಾರಂಭಿಸದೆ ಕೈಚೆಲ್ಲಿರುವುದೆ ಕಾರಣ ಎಂದು ಆರೋಪಿಸಿದರು.ನಿರಾಣಿಯವರಿಗೆ ನೀಡಿರುವ ಗುತ್ತಿಗೆಯನ್ನು ರದ್ದುಮಾಡಿ 2027ಕ್ಕೆ ಕಾರ್ಖಾನೆಯನ್ನು ಸರಕಾರದಿಂದಲೆ ಇಲ್ಲವೆ ಬೇರೆಯವರಿಗೆ ನೀಡಿ ಪ್ರಾರಂಭಿಸುವಂತೆ ಒತ್ತಾಯಿಸಿದ ಅವರು ಟನ್ ಕಬ್ಬಿಗೆ 5300 ರೂಪಾಯಿಗಳನ್ನು ನೀಡುವಂತೆ ತಪ್ಪಿದಲ್ಲಿ ಉತ್ತರ ಕರ್ನಾಟದಲ್ಲಿ ನಡೆದಂತಹ ದೊಡ್ಡಮಟ್ಟದ ಪ್ರತಿಭಟನೆ ದಕ್ಷಣಕರ್ನಾಟಕದಲ್ಲೂ ನಡೆಯಲಿದೆ ಎಂದು ಎಚ್ಚರಿಸಿದರು.ರಾಜ್ಯ ಸರಕಾರ ರೈತರಿಗೆ 2500ರೂಪಾಯಿ ಪರಿಹಾರ ಕೊಡುವುದಾಗಿ ಹೇಳಿರುವ ಮುಖ್ಯಮಂತ್ರಿಗಳ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, 2500ಕ್ಕೆ ಇನ್ನೂ100 ರೂಪಾಯಿ ಸೇರಿಸಿ ನಿಮ್ಮ ಸರ್ಕಾರಕ್ಕೆ ನಾವೇ 2600 ಕೊಡುತ್ತೇವೆ ನಮ್ಮ ಬಿಕ್ಷೆಯಲ್ಲಿ ನೀವು ಅಧಿಕಾರ ನಡೆಸಿ ನಿಮ್ಮ ಬಿಕ್ಷೆಯಲ್ಲಿ ರೈತರು ಜೀವನ ನಡೆಸುತ್ತಿಲ್ಲ ಎಂದು ಕಿಡಿಕಾರಿದರು. ಇಡೀ ರಾಜ್ಯದಲ್ಲಿ ಬರಗಾಲವಿದ್ದು ಕೆಲವು ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಕೆಲವು ತಾಲೂಕನ್ನು ಕೈಬಿಟ್ಟರುವುದು ಏಕೆ ಎಂದು ಪ್ರಶ್ನಿಸಿದ ಅವರು, ಪ್ರತಿ ತಾಲೂಕಿನಲ್ಲಿ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇವುಬ್ಯಾಂಕ್ ಪ್ರಾರಂಬಿಸಿ ದನಕರುಗಳಿಗೆ ಮೇವು ಕುಡಿಯುವ ನೀರು ನೀಡುವ ಕೆಲಸ ಆಗಬೇಕೆಂದರು.ಕಾಲುವೆಗಳಲ್ಲಿ ನೀರುಹರಿಸಿ ಕೆರೆಕಟ್ಟೆಗಳನ್ನು ತುಂಬಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ ಅವರು ತಪ್ಪಿದಲ್ಲಿ ನೀರಾವರಿ ಕಛೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ಕಛೇರಿಯಿಂದ ಹೊರಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ಸಭೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಶಿವರಾಜ್, ಕಾರ್ಯದರ್ಶಿ ದಿನೇಶ್, ಮಹಿಳಾಧ್ಯಕ್ಷೆ ಮಂಜುಳಾ, ಮಾಯಿಗೌಡ, ವಿನೋದ, ಮಂಗಳಮ್ಮ, ನಾಗೇಶ್, ಜಿತೇಂದ್ರ, ನಂದಕುಮಾರ್, ರಾಜನಾಯಕ, ಶಿವರಾಜ್, ಶ್ರೀನಿವಾಸ್, ಸ್ವಾಮಿಗೌಡ, ಶ್ರೀನಿವಾಸದೊಡ್ಡಪ್ಪ, ಬಸವರಾಜ್, ನಾಗರಾಜ್ ಮತ್ತಿತರರು ಇದ್ದರು.