ಕೆಟ್ಟ ಕೆಲಸಗಳಿಗೆ ಬಳ್ಳಾರಿಯನ್ನು ಉರುಗೋಲಾಗಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ಯೋಗ್ಯತೆ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತಾಯಿತು. ಶಾಸನಸಭೆಯ ಮಹತ್ವ ಗೊತ್ತಿಲ್ಲದವರು ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ

ಬಳ್ಳಾರಿ: ಬ್ಯಾನರ್ ಗಲಾಟೆ ವೇಳೆ ಮಾಜಿ ಸಚಿವ ಶ್ರೀರಾಮುಲು ಭಗವಂತನ ರೂಪದಲ್ಲಿ ಬಂದು ಜನಾರ್ದನ ರೆಡ್ಡಿ ಅವರನ್ನು ಕಾಪಾಡಿದ್ದಾರೆ. ಇಲ್ಲದಿದ್ದರೆ ರೆಡ್ಡಿ ಅವರ ಕುಟುಂಬದ ಪರಿಸ್ಥಿತಿ ಏನಾಗುತ್ತಿತ್ತು? ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿರಿಸಿಕೊಂಡೇ ದಾಳಿ ನಡೆಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ವಿನಾಕಾರಣ ಗಲಾಟೆ ಎಬ್ಬಿಸಿ ಭರತ್ ರೆಡ್ಡಿ ಹಾಗೂ ಅವರ ಬೆಂಬಲಿಗರು ಬಳ್ಳಾರಿಯಿಂದ ಇಡೀ ನಾಡಿಗೆ ಕೆಟ್ಟ ಸಂದೇಶ ರವಾನಿಸಿದ್ದಾರೆ. ಕೆಟ್ಟ ಕೆಲಸಗಳಿಗೆ ಬಳ್ಳಾರಿಯನ್ನು ಉರುಗೋಲಾಗಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ಯೋಗ್ಯತೆ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತಾಯಿತು. ಶಾಸನಸಭೆಯ ಮಹತ್ವ ಗೊತ್ತಿಲ್ಲದವರು ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ ಎಂದರು.

ಮಹರ್ಷಿ ವಾಲ್ಮೀಕಿಯ ಹೆಸರು ಹೇಳಿಕೊಂಡು ಶಾಸಕ ಭರತ್ ರೆಡ್ಡಿ ಪಾಪದ ಕೆಲಸ ಮಾಡಿದ್ದಾರೆ. ರಾಮಾಯಣದಂತಹ ಮಹಾಕಾವ್ಯ ಬರೆದ ಮಹರ್ಷಿಯನ್ನು ತನ್ನ ರಾಜಕೀಯ ಹಿತಾಸಕ್ತಿ ಬಳಸಿಕೊಂಡ ಭರತ್ ರೆಡ್ಡಿ ಅವರಿಗೆ ಒಳ್ಳೆಯದಾಗುವುದಿಲ್ಲ. ಪಾಪದ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇಡೀ ಘಟನೆ ಕುರಿತು ಮಾಧ್ಯಮಗಳಲ್ಲಿ ನೋಡಿದೆ. ಬೆಚ್ಚಿ ಬೀಳುವಂತೆ ಕೃತ್ಯ ಎಸಗಲಾಗಿದೆ. ನನ್ನ 49 ವರ್ಷದ ರಾಜಕಾರಣದಲ್ಲಿ ಇಂತಹ ನೀಚ ಕೆಲಸ ನೋಡಿರಲಿಲ್ಲ. ಜನಾರ್ದನ ರೆಡ್ಡಿ ಅವರ ಕುಟುಂಬವನ್ನೇ ನಾಶ ಮಾಡುತ್ತೇನೆ ಎಂಬ ಪಾಪದ ಕೆಲಸ ಮತ್ತೊಂದಿಲ್ಲ. ಒಂದು ವೇಳೆ ಶ್ರೀರಾಮುಲು ತಾಳ್ಮೆ ಕಳೆದುಕೊಂಡಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು.

ಕಾಲು ಕೆರೆದು ಜಗಳಕ್ಕೆ ಹೋಗಿರುವ ಭರತ್ ರೆಡ್ಡಿ ಅವರಿಂದಲೇ ಯುವಕನ ಸಾವು ಸಂಭವಿಸಿದೆ. ಮಹರ್ಷಿ ವಾಲ್ಮೀಕಿಯಂತಹ ಮಹಾನ್ ವ್ಯಕ್ತಿಯ ಹೆಸರು ಹೇಳುವ ಯೋಗ್ಯತೆ ಸಹ ಶಾಸಕ ಭರತ್ ರೆಡ್ಡಿ ಅವರಿಗೆ ಇಲ್ಲ. ಗೃಹ ಸಚಿವರು ರಬ್ಬರ್ ಸ್ಟ್ಯಾಂಪ್ ಆಗಿದ್ದು, ಅವರಿಂದ ಸೂಕ್ತ ತನಿಖೆಯ ಭರವಸೆಯಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಜನಾರ್ದನ ರೆಡ್ಡಿ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಮಾಜಿ ಶಾಸಕರಾದ ಸುರೇಶ್‌ಬಾಬು, ಎಂ.ಎಸ್. ಸೋಮಲಿಂಗಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.ಭರತ್ ರೆಡ್ಡಿ ನನ್ನ ಬಳಿ ಕಳುಹಿಸಿ, ತರಬೇತಿ ನೀಡುವೆ:

ಶಾಸಕ ಭರತ್ ರೆಡ್ಡಿ ಅವರನ್ನು ನನ್ನ ಬಳಿ ಆರು ತಿಂಗಳು ಕಳುಹಿಸಿದರೆ ಸಾರ್ವಜನಿಕ ಜೀವನ ಎಂದರೆ ಏನು? ಬಡತನ, ದ್ವೇಷ ರಾಜಕಾರಣಕ್ಕೆ ಹೋದವರು ಏನಾಗಿದ್ದಾರೆ ಎಂಬುದರ ಕುರಿತು ತರಬೇತಿ ನೀಡಿ, ಕಳುಹಿಸಿಕೊಡುತ್ತೇನೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.

ಶಾಸಕರಾದವರು ಶಾಸನ ಸಭೆ ಅರ್ಥ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಮಹರ್ಷಿ ವಾಲ್ಮೀಕಿ ಅವರ ನೆಪವಾಗಿಟ್ಟುಕೊಂಡು ಪಾಪದ ಕೆಲಸ ಮಾಡಿದ್ದಾರೆ. ನೀನಿನ್ನು ಚಿಕ್ಕ ಹುಡುಗ. 49 ವರ್ಷ ರಾಜಕಾರಣದಲ್ಲಿ ಅನುಭವ ಹೊಂದಿರುವ ನನ್ನ ಬಳಿ ಆರು ತಿಂಗಳು ತರಬೇತಿಗೆ ಬಾರಪ್ಪ. ದ್ವೇಷ ರಾಜಕಾರಣದಿಂದ ಮೂಲೆಗುಂಪಾದವರ ಬಗ್ಗೆ ತಿಳಿಹೇಳುತ್ತೇನೆ ಎಂದರು.