ಸಾರಾಂಶ
ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮೈಲಾರದಲ್ಲಿ ಸಮಾಜದ ಹಾಸ್ಟೆಲ್‌ಗೆ ₹13 ಕೋಟಿ ಅನುದಾನ ನೀಡಿದ್ದಾರೆ.
ಹೊಸಪೇಟೆ: ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಕಷ್ಟಕಾಲದಲ್ಲಿದ್ದಾರೆ. ಅವರಿಗೆ ನಾವು ಬೆಂಬಲ ಕೊಟ್ಟರೆ ನಮ್ಮ (ಕುರುಬ) ಸಮಾಜಕ್ಕೆ ಮುಂದೆ ಅವರು ಕೈಹಿಡಿಯಲಿದ್ದಾರೆ. ಸಿದ್ದರಾಮಯ್ಯ ಈಗ ಸಿಎಂ ಆಗಿದಾರೆ. ಈ ಬಗ್ಗೆ ನಮಗೆ ತಕರಾರು ಇಲ್ಲ. ಆದರೆ, ಇಲ್ಲಿ ಮಾತ್ರ ನಾವು ಶ್ರೀರಾಮುಲು ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಬೈರತಿ ಬಸವರಾಜ್ ಹೇಳಿದರು.
ನಗರದಲ್ಲಿ ಬುಧವಾರ ನಡೆದ ಹಾಲುಮತ ಸಮಾಜದ ಸಾಮಾಜಿಕ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮೈಲಾರದಲ್ಲಿ ಸಮಾಜದ ಹಾಸ್ಟೆಲ್‌ಗೆ ₹13 ಕೋಟಿ ಅನುದಾನ ನೀಡಿದ್ದಾರೆ. ಹೊಸದುರ್ಗದಲ್ಲಿ ಕನಕದಾಸರ ಪ್ರತಿಮೆ ಸ್ಥಾಪನೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ₹5 ಕೋಟಿ ಅನುದಾನ ನೀಡಿದರು. ಆನಂದ ಸಿಂಗ್ ಹೊಸಪೇಟೆಯಲ್ಲಿ ಸ್ವಂತ ಖರ್ಚಿನಲ್ಲಿ ಕನಕದಾಸರ ಪ್ರತಿಮೆ ಮಾಡಿಸಿದ್ದಾರೆ. ಹಾಗಾಗಿ ಹಾಲುಮತ ಸಮಾಜ ಮಾತು ಕೊಟ್ಟರೆ ತಪ್ಪುವುದಿಲ್ಲ. ನಾವು ಈಗ ಶ್ರೀರಾಮುಲು ಅವರಿಗೆ ಮಾತು ಕೊಡೋಣ. ಅವರನ್ನು ಲೋಕಸಭೆಗೆ ಗೆಲ್ಲಿಸಿ ಕಳುಹಿಸೋಣ. ನಾನು ಯಾವತ್ತೂ ಸಮಾಜದ ಜೊತೆಗೆ ಇರುವೆ ಎಂದರು.ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ದೇಶದ ಚುಕ್ಕಾಣಿ ಹಿಡಿಯಬೇಕು. ಇಂದು ಉತ್ತಮ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ. ಬಳ್ಳಾರಿಯಿಂದ ಶ್ರೀರಾಮುಲು ಅವರನ್ನು ಗೆಲ್ಲಿಸಿ, ಮೋದಿಗೆ ಶಕ್ತಿ ಕೊಡೋಣ ಎಂದರು.
ಹಡಗಲಿ ಶಾಸಕ ಕೃಷ್ಣ ನಾಯ್ಕ ಮಾತನಾಡಿ, ದೇಶದಲ್ಲಿ ಈ ಬಾರಿ ಬಿಜೆಪಿ ಪರ ಅಲೆ ಇದೆ. 400 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ. ಇದರಲ್ಲಿ ಯಾವುದೇ ಕಾರಣಕ್ಕೂ ಸಂಖ್ಯೆ ಕಡಿಮೆ ಆಗುವುದಿಲ್ಲ. ಹಾಲುಮತ ಸಮಾಜ ಹೂವಿನಹಡಗಲಿಯಲ್ಲಿ ನನ್ನ ಬೆನ್ನಿಗೆ ನಿಂತಿದೆ. ಈ ಬಾರಿ ಶ್ರೀರಾಮುಲು ಅವರಿಗೆ ಮತ ನೀಡುವುದರ ಮೂಲಕ ಅವರ 35 ವರ್ಷದ ಹೋರಾಟಕ್ಕೆ ಮರು ಧ್ವನಿ ನೀಡೋಣ ಎಂದರು.ಬಿ.ಶ್ರೀರಾಮುಲು ಮಾತನಾಡಿ, ಹಿಂದುಳಿದ ವರ್ಗಗಳು ಒಗ್ಗಟ್ಟಾದರೆ ಖಂಡಿತ ಗೆಲುವು ದೊರೆಯಲಿದೆ. ಕನಕದಾಸರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಹಾಗಾಗಿ ವಾಲ್ಮೀಕಿ ನಾಯಕ ಸಮುದಾಯ ಮತ್ತು ಹಾಲುಮತ ಸಮುದಾಯ ಬಿಜೆಪಿ ಜೊತೆಗೆ ಸಾಗಬೇಕು. ನಾವು ಈ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಈ ಬಾರಿ ಬಿಜೆಪಿ ಗೆಲ್ಲಿಸೋಣ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಸಿದ್ದಾರ್ಥ ಸಿಂಗ್, ಈ.ಟಿ. ಲಿಂಗರಾಜ, ಬಲ್ಲಾಹುಣಸಿ ರಾಮಣ್ಣ, ಆರ್. ಕೊಟ್ರೇಶ್, ಭರಮನಗೌಡ, ಶಂಕರ ಮೇಟಿ, ಮುಟುಗಾನಹಳ್ಳಿ ಕೊಟ್ರೇಶ್, ಎಂ. ಪರಮೇಶ್ವರಪ್ಪ, ಬುಡ್ಡಿ ಬಸವರಾಜ್, ಐನಹಳ್ಳಿ ಭಾಗ್ಯಮ್ಮ, ಮಜ್ಜಿಗೆ ನಾಗರಾಜ, ಉಜ್ಜಿನಿ ಲೋಕಪ್ಪ, ಪವಿತ್ರಾ ರಾಮಸ್ವಾಮಿ, ಹುಲುಗಪ್ಪ, ನೀಲಪ್ಪ, ಎಲ್.ಎಸ್. ಆನಂದ, ನಾಗೇಶ್, ಕೆ. ಗಾದಿಲಿಂಗಪ್ಪ, ಕರಿಬಸಪ್ಪ ಇದ್ದರು.