ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಶ್ರೀರಂಗಮುಡಿ ಮಹೋತ್ಸವ ಭಾನುವಾರ ಸಂಜೆ ಸಡಗರ ಸಂಭ್ರಮದಿಂದ ನಡೆಯಿತು.ಶ್ರೀರಂಗನಾಥನ ಜಯಂತಿ ಪ್ರಯುಕ್ತ ಪಟ್ಟಣದ ದೇವಾಲಯದಲ್ಲಿ ಉತ್ಸವವನ್ನು ದೇವಾಲಯದ ಅರ್ಚಕರ ತಂಡ ಹಾಗೂ ಆಡಳಿತ ಮಂಡಳಿ ಸದಸ್ಯರ ನೇತೃತ್ವದಲ್ಲಿ, ಶ್ರೀರಂಗನ ಉತ್ಸವ ಮೂರ್ತಿ ಹಾಗೂ ಶ್ರೀರಂಗನಾಯಕಮ್ಮ ಅವರಿಗೆ ವಜ್ರಖಚಿತ ಕಿರುಮುಡಿಯ ಧಾರಣೆ ಮಾಡಲಾಯಿತು.
ನಂತರ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಶ್ರೀರಂಗಮುಡಿ ಉತ್ಸವ ಮೂರ್ತಿ ಮೆರವಣಿಗೆಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸೋಮಶೇಖರ್ ಹಾಗೂ ದೇವಾಲಯದ ಇಒ ಉಮಾ ಚಾಲನೆ ನೀಡಿದರು.ಶ್ರೀರಂಗನಾಥಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ವಿಗ್ರಹಕ್ಕೆ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ದೇವರಿಗೆ ಮಹಾಭಿಷೇಕವನ್ನು ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ಜರುಗಿತು.
ಮಧ್ಯಾಹ್ನ ನೆರದಿದ್ದ ಭಕ್ತರಿಗೆ ಪ್ರಸಾದ ನಿಯೋಗ ನಡೆಸಲಾಯಿತು. ಸಂಜೆ ಪಟ್ಟಣದ ಉಪಡಿಜಾನೆಯಲ್ಲಿದ್ದ ವಜ್ರ ಖಚಿತ ಚಿನ್ನದ ಕಿರೀಟವನ್ನು ರಂಗನಾಥಸ್ವಾಮಿಗೆ ಕಿರೀಟ ಧಾರಣೆ ಮಾಡಿ ಪಲ್ಲಕಿ ಮೇಲಿರಿಸಿ ಪಟ್ಟಣದ ರಾಜಬೀದಿ, ಪೂರ್ಣಯ್ಯ ಬೀದಿ ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಮಾಡಲಾಯಿತು.ಮೆರವಣಿಗೆ ನಡೆಯುವ ಬೀದಿಗಳಲ್ಲಿ ಮಹಿಳೆಯರು ರಂಗವಲ್ಲಿ ಹಾಕಿ ಹಣ್ಣು ಆರತಿ ಪೂಜೆ ಸಲ್ಲಿಸಿದರು. ದಾರಿಯುದ್ದಕ್ಕೂ ಶ್ರೀರಂಗನ ಭಕ್ತರು ಸಾಲುಗಟ್ಟಿ ದೇವರ ದರ್ಶನ ಪಡೆದರು. ರಂಗಮುಡಿ ಉತ್ಸವದ ಅಂಗವಾಗಿ ರಾಜ್ಯವಲ್ಲದೇ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ ಇತರೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ವೇದ ಬ್ರಹ್ಮ ಡಾ.ಭಾನು ಪ್ರಕಾಶ್ ಶರ್ಮ, ದೇವಾಲಯದ ಕಾರ್ಯನಿರ್ವಾಣಾಧಿಕಾರಿ ಎಂ.ಉಮಾ, ಅಧ್ಯಕ್ಷ ಸೋಮಶೇಖರ್, ಸದಸ್ಯರಾದ ಸತೀಶ್, ಆನಂದ್, ಕಮಲಮ್ಮ ಸೇರಿದಂತೆ ಇತರ ಅಧಿಕಾರಿ ವೃಂದ ಹಾಗೂ ಶ್ರೀರಂಗನಾಥನ ಭಕ್ತರು ಹಾಜರಿದ್ದರು.ಮೇ 7ಕ್ಕೆ ಶ್ರೀನಿಮಿಷಾಂಬ ಅಮ್ಮನವರ ವರ್ಧಂತಿ ಉತ್ಸವ
ಕನ್ನಡಪ್ರಭ ವಾರ್ತೆ ಮಂಡ್ಯಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ಮೇ 7ರಂದು ಶ್ರೀ ನಿಮಿಷಾಂಬ ಅಮ್ಮನವರ ವರ್ಧಂತಿ ಹಮ್ಮಿಕೊಳ್ಳಲಾಗಿದೆ.
ಮೇ 6ರಂದು ಗಣಪತಿ ಪೂಜೆ, ಪುಣ್ಯಾಹ ಮಹಾಸಂಕಲ್ಪ ಕಲಶಸ್ಥಾಪನೆ, ಸಪ್ತಶತೀ ಪಾರಾಯಣ, ಕಲಶ ಪೂಜೆ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಗುವುದು.ಮೇ 7ರಂದು ಬೆಳಗ್ಗೆ 8 ಗಂಟೆಗೆ ನಿಮಿಷಾಂಬ ಹೋಮ, 10.30 ಗಂಟೆಗೆ ಪೂರ್ಣಾಹುತಿ, 10.45 ಗಂಟೆಗೆ ಕಳಶ ಪೂಜೆ ಮತ್ತು 121 ಕಲಶಗಳ ಮಹಾಭಿಷೇಕ ನಂತರ ಅಷ್ಟದಿಗ್ಬಲಿ, ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ ಪ್ರಸಾದ ವಿತರಣೆ, ಸಂಜೆ 6.30 ಗಂಟೆಗೆ ದಕ್ಷಿಣ ಗಂಗೆ ಕಾವೇರಿ ಮಾತೆಗೆ ಪೂಜೆ ಮತ್ತು ಮಹಾ ಆರತಿ, 7 ಗಂಟೆಗೆ ಉತ್ಸವ, ಮಹಾಪೂಜೆ, ಮಹಾ ಮಂಗಳಾರತಿ ಪ್ರಸಾದ ವಿತರಣೆ ಧಾರ್ಮಿಕ ಕಾರ್ಯಕ್ರಮ ಮಾಡಲಾಗುವುದು.