ಶ್ರೀರಂಗನಾಥನ ಜಾತ್ರೆ: ನಿರೀಕ್ಷೆ ಮೀರಿದ ಜಾನುವಾರು ದಂಡು ಆಗಮನ

| Published : Jan 12 2024, 01:46 AM IST

ಶ್ರೀರಂಗನಾಥನ ಜಾತ್ರೆ: ನಿರೀಕ್ಷೆ ಮೀರಿದ ಜಾನುವಾರು ದಂಡು ಆಗಮನ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನರಾಯಪಟ್ಟಣದ ಹಿರೀಸಾವೆ ಹೋಬಳಿಯ ಪುರಾಣ ಪ್ರಸಿದ್ಧ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಪ್ರಾರಂಭಗೊಂಡಿರುವ ೯೩ ನೇ ವರ್ಷದ ಬೃಹತ್ ದನಗಳ ಜಾತ್ರಾ ಮಹೋತ್ಸನಕ್ಕೆ ಕಳೆದ ವರ್ಷಕ್ಕಿಂತ ನಿರೀಕ್ಷೆಗೂ ಮೀರಿ ಜಾನುವಾರು ಆಗಮಿಸಿವೆ.

ಪುರಾಣ ಪ್ರಸಿದ್ಧ ಬೂಕನಬೆಟ್ಟದ 93ನೇ ಜಾತ್ರಾ ಮಹೋತ್ಸವ । ಕಳೆದ ವರ್ಷಕ್ಕಿಂತ ನಿರೀಕ್ಷೆಗೂ ಮೀರಿದ ದನಗಳ ಪ್ರಮಾಣ । 11 ದಿನ ಉತ್ಸವ

ನಂದನ್‌ ಪುಟ್ಟಣ್ಣ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಹಿರೀಸಾವೆ ಹೋಬಳಿಯ ಪುರಾಣ ಪ್ರಸಿದ್ಧ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಪ್ರಾರಂಭಗೊಂಡಿರುವ ೯೩ ನೇ ವರ್ಷದ ಬೃಹತ್ ದನಗಳ ಜಾತ್ರಾ ಮಹೋತ್ಸನಕ್ಕೆ ಕಳೆದ ವರ್ಷಕ್ಕಿಂತ ನಿರೀಕ್ಷೆಗೂ ಮೀರಿ ಜಾನುವಾರು ಆಗಮಿಸಿವೆ.

ಬೂಕನಬೆಟ್ಟದ ತಪ್ಪಲಿನಲ್ಲಿ ಪ್ರತೀ ವರ್ಷವೂ ಜನವರಿ ತಿಂಗಳಲ್ಲಿ ಸುಮಾರು ೧೧ ದಿನಗಳ ಕಾಲ ಬೃಹತ್ ದನಗಳ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನಡೆಯುತ್ತದೆ. ಕಳೆದ ೩-೪ ವರ್ಷಗಳಿಂದ ಕೊರೋನಾ ಹಿನ್ನೆಲೆ ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಲಾಗುತ್ತಿತ್ತು.

ಸದ್ಯ ಈ ಬಾರಿ ಯಾವುದೇ ವಿಘ್ನವಿಲ್ಲದಂತೆ ಪ್ರಾರಂಭಗೊಂಡಿದ್ದು ಈಗಾಗಲೇ ಸರಿಸುಮಾರು ೫ ರಿಂದ ೬ ಸಾವಿರಕ್ಕೂ ಹೆಚ್ಚು ಜೋಡಿ ದನಗಳು ಸೇರಿವೆ. ಕಳೆದ ಎರಡು ದಿನಗಳಿಂದಲೇ ದೂರದ ಊರುಗಳಿಂದ ರೈತರು ತಮ್ಮ ಜಾನುವಾರನ್ನು ಬೂಕನಬೆಟ್ಟಕ್ಕೆ ಕರೆತಂದಿರುವುದು ವಿಶೇಷ.

ಎರಡು ಸಾವಿರಕ್ಕೂ ಹೆಚ್ಚು ಜಾನುವಾರು ಆಗಮಿಸುವ ನಿರೀಕ್ಷೆ ಇದ್ದು ಜಾತ್ರೆ ಮತ್ತಷ್ಟು ಕಳೆಗಟ್ಟಲಿದೆ. ಉತ್ತಮ ಮೈಕಟ್ಟು ಹೊಂದಿರುವ ಹೋರಿ ಹಾಗೂ ದನಗಳು ಆಗಮಿಸಿದ್ದು ಹಳ್ಳಿಕಾರ ತಳಿಯ ಎತ್ತುಗಳಿಗೆ ಇಲ್ಲಿ ಹೆಚ್ಚು ಬೇಡಿಕೆ ಇದೆ.

ಈಗಾಗಲೇ ಜಾನುವಾರು ವ್ಯಾಪಾರವು ಸಹ ಪ್ರಾರಂಭವಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ರೈತರು ಉತ್ತಮ ಎತ್ತುಗಳನ್ನು ಖರೀದಿಸಲು ಇಲ್ಲಿಗೆ ಆಗಮಿಸಿದ್ದಾರೆ. ಈ ಬಾರಿ ೬೦ ಸಾವಿರ ರೂ.ಗಳಿಂದ ಪ್ರಾರಂಭಗೊಂಡಿದ್ದು ೬ ಲಕ್ಷ ರು. ವರಗೆ ಬೆಲೆ ಬಾಳುವ ಎತ್ತುಗಳು (ಹೋರಿಗಳು) ಸೇರಿವೆ. ನೋಡುಗರ ಗಮನ ಸೆಳೆಯುವುದರ ಜತೆಗೆ ಖರೀದಿಗೆಂದು ಬಂದಿರುವ ರೈತರ ಮುಖದಲ್ಲಿ ಹರ್ಷ ಮೂಡಿದೆ.

ಇಲ್ಲಿ ೧೧ ದಿನಗಳ ಕಾಲ ನಡೆಯುವ ಜಾನುವಾರು ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಾನುವಾರು ಪಾಲ್ಗೊಳ್ಳುವುದರಿಂದ ಪಶುಪಾಲನಾ ಇಲಾಖೆ ವತಿಯಿಂದ ಪಶು ವೈದ್ಯರು ಮುನ್ನೆಚ್ಚರಿಕೆ ವಹಿಸಲಿದ್ದು ಜಾತ್ರಾ ಆವರಣದಲ್ಲಿ ಜಾನುವಾರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.

ಜಾನುವಾರುಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಮಾಡಿದ್ದು ಯಾವುದೇ ಸಮಸ್ಯೆಯಾಗದಂತೆ ಪ್ರತಿದಿನ ೨ ಬಾರಿ ತಲಾ ೨೫ ಸಾವಿರ ಲೀಟರ್ ಸಾಮರ್ಥ್ಯವುಳ್ಳ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸುವ ವ್ಯವಸ್ಥೆಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ಮಾಡಿದ್ದಾರೆ.

ಹಾಸನ ಜಿಲ್ಲಾ ವ್ಯಾಪ್ತಿ ಸೇರಿದಂತೆ ಮಂಡ್ಯ, ತುಮಕೂರು ಹಾಗೂ ಮೈಸೂರು ಜಿಲ್ಲೆಯ ರೈತರು ಜಾನುವಾರು (ಎತ್ತುಗಳನ್ನು) ಮಾರಾಟ ಮಾಡಲು ಆಗಮಿಸಿದ್ದರೆ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಮಹಾರಾಷ್ಟ್ರದ ಗಡಿ ಭಾಗದ ಜಿಲ್ಲೆಗಳ ರೈತರು ಸಹ ಇಲ್ಲಿ ಜಾನುವಾರು ಖರೀದಿಸಲು ಆಗಮಿಸಿದ್ದು, ಜಾನುವಾರು ವ್ಯಾಪಾರ ಜೋರಾಗಿಯೇ ಪ್ರಾರಂಭಗೊಂಡಿದೆ.

ಜಾತ್ರೆಯಲ್ಲಿ ಈಗಾಗಲೇ ಸೇರಿರುವ ಜಾನುವಾರನ್ನು ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳಿಂದ ಯುವ ಸಮುದಾಯ ಹಾಗೂ ರೈತರು ಜಮಾಸಿದ್ದಾರೆ. ಜಾನುವಾರು ಮೈತೊಳೆದು ಕೊಂಬುಗಳಿಗೆ ಬಣ್ಣ ಬಳಿದು ಸಿಂಗರಿಸಿದ್ದು ಒಂದಕ್ಕಿಂತ ಒಂದರಂತೆ ಜೋಡಿ ಎತ್ತುಗಳು ನೋಡುಗರ ಗಮನ ಸೆಳೆಯುತ್ತಿವೆ.ಕೋಟ್..

‘ಹೋರಿಗಳನ್ನು ಮಾರುವ ಹಾಗೂ ಖರಿದಿಸುವ ಸಲುವಾಗಿ ಪ್ರತಿ ವರ್ಷವೂ ಈ ಬೃಹತ್ ಜಾತ್ರೆಗೆ ನಾನು ಆಗಮಿಸುತ್ತೇನೆ. ಪ್ರತಿ ವರ್ಷದಂತೆಯೇ ಈ ಬಾರಿಯೂ ಉತ್ತಮ ಮೈಗಟ್ಟಿನ ಹಾಗೂ ಹೆಚ್ಚು ಬೆಲೆಯ ಜಾನುವಾರು ಸೇರಿವೆ. ಈ ಜಾತ್ರೆಯ ಹೋರಿಗಳೆಂದರೆ ರೈತರಿಗೆ ಬಲು ಇಷ್ಟ. ರೈತರ ನಿರೀಕ್ಷೆಯ ಹೋರಿಗಳು ಇಲ್ಲಿ ಸಿಗಲಿವೆ’.

ಲೋಹಿತ್, ಯುವರೈತ, ಅಂತನಹಳ್ಳಿ.ಕೋಟ್‌..

ಶ್ರೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಜಾತ್ರೆಯನ್ನು ವೈಭವದಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ಯಾವುದೇ ಸಮಸ್ಯೆ ಎದುರಾಗದಂತೆ ನಡೆಯುತ್ತಿದೆ. ಅಗತ್ಯ ವಿದ್ಯುತ್ ಪೂರೈಕೆ ಹಾಗೂ ಜನ-ಜಾನುವಾರು ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ.

ಸಿ.ಎನ್.ಬಾಲಕೃಷ್ಣ, ಶಾಸಕ.ಫೋಟೋ:ಸಿಆರ್‌ಪಿ೧:

ಹಿರೀಸಾವೆ ಹೋಬಳಿ ಬೂಕನಬೆಟ್ಟದಲ್ಲಿ ನಡೆಯುತ್ತಿರುವ ಶ್ರೀ ರಂಗನಾಥಸ್ವಾಮಿಯ ಜಾತ್ರೆಗೆ ಹೋರಿಗಳನ್ನು ಮೆರವಣಿಗೆಯೊಂದಿಗೆ ಕರೆತರುತ್ತಿರುವ ರೈತರು.