ಮೂಲ ದಸರಾ ನೆಲೆಯಾದ ಶ್ರೀರಂಗಪಟ್ಟಣದಲ್ಲಿ ಗುರುವಾರ ವೈಭವದಿಂದ ದಸರಾ ಮಹೋತ್ಸವ ಜರುಗಿತು. ನಾಡದೇವತೆ ಶ್ರೀಚಾಮುಂಡೇಶ್ವರಿ ವಿಗ್ರಹವಿರುವ ಅಂಬಾರಿ ಹೊತ್ತ ಧನಂಜಯನ ಗಜ ಗಾಂಭೀರ್ಯ ನಡೆ ಜನರನ್ನು ಆಕರ್ಷಿಸಿತು. ಜಂಬೂ ಸವಾರಿಯಲ್ಲಿ ಧನಂಜಯನಿಗೆ ಸಾಥ್ ನೀಡಿದ ಲಕ್ಷ್ಮೀ ಹಾಗೂ ರೂಪಾ ಆನೆಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದ್ದವು.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಮೂಲ ದಸರಾ ನೆಲೆಯಾದ ಶ್ರೀರಂಗಪಟ್ಟಣದಲ್ಲಿ ಗುರುವಾರ ವೈಭವದಿಂದ ದಸರಾ ಮಹೋತ್ಸವ ಜರುಗಿತು. ನಾಡದೇವತೆ ಶ್ರೀಚಾಮುಂಡೇಶ್ವರಿ ವಿಗ್ರಹವಿರುವ ಅಂಬಾರಿ ಹೊತ್ತ ಧನಂಜಯನ ಗಜ ಗಾಂಭೀರ್ಯ ನಡೆ ಜನರನ್ನು ಆಕರ್ಷಿಸಿತು. ಜಂಬೂ ಸವಾರಿಯಲ್ಲಿ ಧನಂಜಯನಿಗೆ ಸಾಥ್ ನೀಡಿದ ಲಕ್ಷ್ಮೀ ಹಾಗೂ ರೂಪಾ ಆನೆಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದ್ದವು.

ಕಿರಂಗೂರು ಬನ್ನಿ ಮಂಟಪದ ಬಳಿ ಮಧ್ಯಾಹ್ನ ೩.೩೫ ಗಂಟೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ೨೫೦ ಕೆಜಿ ತೂಕದ ಮರದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಡಾ.ವಿ.ರವಿಚಂದ್ರನ್ ಅವರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಇದಕ್ಕೂ ಮುನ್ನ ಬನ್ನಿಮಂಟಪದಲ್ಲಿ ವಿಶೇಷವಾಗಿ ವಿವಿಧ ಬಗೆಯ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿದ್ದ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವೇದಬ್ರಹ್ಮ ಡಾ.ಭಾನುಪ್ರಕಾಶ್‌ಶರ್ಮಾ ನೇತೃತ್ವದಲ್ಲಿ ವೈದಿಕರ ತಂಡ ಮೊದಲಿಗೆ ಸ್ಥಳಶುದ್ಧಿ, ಗಣಪತಿ ಹೋಮ, ಪುಣ್ಯಾಹ, ದುರ್ಗಾಶಪ್ತಸತಿ ಪಾರಾಯಣ, ಬನ್ನಿಪೂಜೆ, ಶತವೃದ್ರಪಾರಾಯಣ, ಕೂಷ್ಮಾಂಡ ಛೇದನ, ಮಹಾ ಮಂಗಳಾರತಿ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್‌ ಬಂಡಿಸಿದ್ದೇಗೌಡ ಅವರು ತಮ್ಮ ಪತ್ನಿ ಸುಮತಿ ಸಮೇತ ಪೂಜೆಯಲ್ಲಿ ಪಾಲ್ಗೊಂಡು ಬನ್ನಿವೃಕ್ಷ ಪೂಜೆ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

೬೨ ಕಲಾತಂಡಗಳು, ೧೦ ಸ್ತಬ್ಧ ಚಿತ್ರಗಳು:

ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟು ೬೨ ಕಲಾತಂಡಗಳು ಹಾಗೂ ೧೦ ಸ್ತಬ್ಧಚಿತ್ರಗಳು ಭಾಗವಹಿಸಿ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಅನಾವರಣಗೊಳಿಸಿದವು. ಸಾಕ್ಸೋಪೋನ್, ನಾದಸ್ವರ, ಬ್ಯಾಂಡ್‌ಸೆಟ್, ನಂದಿಧ್ವಜ, ಪೂಜಾಕುಣಿತ, ತಾಯಮ್, ಚಂಡೆಮೇಳ, ತಮಟೆ, ನಗಾರಿ, ಪಟಕುಣಿತ, ಹುಲಿವೇಷ, ವೀರಗಾಸೆ, ವೀರ ಭದ್ರಕುಣಿತ, ಕಾಳಿ ಕುಣಿತ, ಕುಚುಪುಡಿ, ಕಂಸಾಳೆ, ಪೊಲೀಸ್ ಬ್ಯಾಂಡ್, ವೀರ ಮಕ್ಕಳ ಕುಣಿತ, ಒನಕೆ ಕುಣಿತ, ಕೋಲಾಟ, ಕರಗದ ಕೋಲಾಟ, ಕತಕಳಿ, ನಾಸಿಕ್ ಡೊಲು, ಗಾರುಡಿಗೊಂಬೆ, ಚಿಲಿಪಿಲಿಗೊಂಬೆ, ಭಜರಂಗಿ, ಗೊಂಬೆಕುಣಿತ, ಕೊಂಬುಹಕಳೆ, ಕೀಲಿಕುದುರೆ, ದೊಳ್ಳುಕುಣಿತ, ಕಂಗಿಲುಕುಣಿತ, ಬೆಂಕಿಬರಾಟೆ, ದೊಣ್ಣೆವರಸೆ, ಸೋಮನಕುಣಿತ, ಬೇಡರವೇಷ, ಹಾಲಕ್ಕಿ ಸುಗ್ಗಿ ಕುಣಿತ, ಎತ್ತುಗಳ ಪ್ರದರ್ಶನ ಸೇರಿದಂತೆ ಒಟ್ಟು ೬೦ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ಬನ್ನಿ ಮಂಟಪದಿಂದ ಹೊರಟ ಅಂಬಾರಿ ಮೆರವಣಿಗೆಯು ಕಿರಂಗೂರು, ಬಾಬುರಾಯನಕೊಪ್ಪಲು ಮಾರ್ಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಶ್ರೀರಂಗಪಟ್ಟಣ ಮುಖ್ಯದ್ವಾರವನ್ನು ಪ್ರವೇಶಿಸಿದವು. ಪಟ್ಟಣದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಸಾರ್ವಜನಿಕರು ಅಂಬಾರಿ ಮೆರವಣಿಗೆ ಹಾಗೂ ಕಲಾತಂಡಗಳ ಸೊಬಗನ್ನು ಕಣ್ತುಂಬಿಕೊಂಡರು. ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ನಿರ್ಮಾಣಗೊಂಡಿರುವ ಶ್ರೀರಂಗ ವೇದಿಕೆ ಬಳಿ ಮೆರವಣಿಗೆಯನ್ನು ಅಂತ್ಯಗೊಳಿಸಲಾಯಿತು.

ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಭಾರತೀಯ ಬೌದ್ದ ಮಹಾಸಭಾ ವತಿಯಿಂದ ಸಾಮಾಜಿಕ ಕಾಳಜಿಯುಳ್ಳ ಹತ್ತಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಸಾಗಿದವು.

ಬನ್ನಿಮಂಟಪದ ಬಳಿ ವಿಶೇಷ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಚಾಲನೆ ನೀಡುವ ದೃಷ್ಯವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಬೆಂಗಳೂರು-ಮೈಸೂರು ಹೆದ್ದಾರಿ ಬನ್ನಿಮಂಟಪ ಮುಂಭಾಗ, ಪಟ್ಟಣದ ಪುರಸಭೆ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಇತರೆಡೆಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು.

ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ ಪಿ.ಎಂ ನರೇಂದ್ರಸ್ವಾಮಿ, ಪೌರಾಡಳಿತ ಸಚಿವ ಹೆಚ್.ಸಿ ಬಾಲಕೃಷ್ಣ, ಸ್ಥಳೀಯ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶಬಾಬು ಬಂಡಿಸಿದ್ದೇಗೌಡ, ರಾಜ್ಯ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್‌ಗೂಳಿಗೌಡ, ಶಾಸಕರಾದ ಪಿ.ರವಿಕುಮಾರ್, ದರ್ಶನ್ ಪುಟ್ಟಣಯ್ಯ, ಕೆ.ಎಂ ಉದಯ, ವಿಧಾನಪರಿಷತ್ ಸದಸ್ಯರಾದ ಮಧು ಜಿ. ಮಾದೇಗೌಡ, ಕೆ.ವಿವೇಕಾನಂದ, ಮಾಜಿ ಶಾಸಕ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಎಸ್ ಆತ್ಮಾನಂದ, ಮೈಸೂರು ಸಕ್ಕರೆ ಕಂಪನಿ ಅಧ್ಯಕ್ಷ ಸಿ.ಡಿ ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿ.ಪಂ ಸಿಇಒ ನಂದಿನಿ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ಪಿ ಪ್ರಕಾಶ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಎಂ.ಎಲ್ ದಿನೇಶ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.ಸಹಸ್ರಾರು ಜನರಿಂದ ವೀಕ್ಷಣೆ

ಶ್ರೀರಂಗಪಟ್ಟಣದ ಸಮೀಪದ ಕಿರಂಗೂರಿನಲ್ಲಿರುವ ಬನ್ನಿ ಮಂಟಪದ ಬಳಿ ಆರಂಭವಾಗಲಿದ್ದ ಜಂಬೂಸವಾರಿ ವೀಕ್ಷಣೆಗೆ ಸಹಸ್ರಾರು ಜನರು ನೆರೆದಿದ್ದರು. ಜನರು ಕುಳಿತುಕೊಂಡು ವೀಕ್ಷಣೆ ಮಾಡುವುದಕ್ಕೆ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಸುಮಾರು ೧ ಗಂಟೆಯಿಂದಲೇ ಜನರ ದಂಡು ಬನ್ನಿ ಮಂಟಪದ ಬಳಿಗೆ ಆಗಮಿಸಲಾರಂಭಿಸಿತು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಿಸಿಲ ನಡುವೆಯೂ ಛತ್ರಿ ಹಿಡಿದು, ತಲೆಯ ಮೇಲೆ ಕರ್ಚಿಫ್ ಹಾಕಿಕೊಂಡು ವೀಕ್ಷಣೆಗೆ ಕಾತುರದಿಂದ ಎದುರುನೋಡುತ್ತಿದ್ದರು.

ಅಂಬಾರಿ ಹೊರುವುದಕ್ಕೆ ಆನೆಗಳು ಬಂದ ಸಮಯದಲ್ಲಿ ಯುವಕರು ಅವುಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹರ್ಷ ವ್ಯಕ್ತಪಡಿಸಿದರು. ಹಲವಾರು ಜಾನಪದ ಕಲಾತಂಡಗಳನ್ನು ಹಲವರು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದರು. ಜಂಬೂಸವಾರಿಗೆ ಚಾಲನೆ ನೀಡಲು ರವಿಚಂದ್ರನ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ನೋಡುವುದಕ್ಕೆ ಜನರು ಮುಗಿಬಿದ್ದರು. ಮಹಿಳೆಯರು, ಯುವತಿಯರು, ಯುವಕರು ದೂರದಿಂದಲೇ ರವಿಚಂದ್ರನ್‌ನತ್ತ ಕೈಬೀಸಿದರು. ರವಿಚಂದ್ರನ್ ಕೂಡ ಖುಷಿಯಿಂದಲೇ ಜನರತ್ತ ಕೈಬೀಸುತ್ತಾ ಮುನ್ನಡೆದರು. ಜನರು ರವಿಚಂದ್ರನ್ ಬಳಿಗೆ ಹೋಗದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರಿಂದ ಯುವಕ-ಯುವತಿಯರು ನಿರಾಸೆಗೊಳಗಾದರು.ರಕ್ಷಣಾ ವೇದಿಕೆಯಿಂದ ಅನ್ನಸಂತರ್ಪಣೆ

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣಶ್ರೀರಂಗಪಟ್ಟಣ ದಸರಾ ಅಂಗವಾಗಿ ಆಗಮಿಸಿದ ಭಕ್ತರು, ಕಲಾವಿದರು ಹಾಗೂ ಸಾರ್ವಜನಿಕರಿಗೆ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಅನ್ನ ಸಂತರ್ಪಣೆ ಮಾಡಿ, ಜನ ಮೆಚ್ಚಿಗೆ ಪಡೆದರು.

ತಾಲೂಕಿನ ಕಿರಂಗೂರು ಬನ್ನಿ ಮಂಟಪದ ಬಳಿ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ನೇತೃತ್ವದಲ್ಲಿ ಕಾರ್ಯಕರ್ತರು, ದಸರಾ ಅಂಬಾರಿ ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದ ಭಕ್ತರು, ಬರುವ ಕಲಾವಿದರು, ಪ್ರೇಕ್ಷಕರಿಗೆ ಅನ್ನ ಸಂತರ್ಪನೆ ಮಾಡಿದರು. ಬಳಿಕ ಬಿಸಿಲಿನ ದಾವಾಸಿಕೊಳ್ಳಲು ಮಜ್ಜಿಗೆ, ಪಾನಕ, ನೀರು, ಬಾಳೆ ಹಣ್ಣು ಸೇರಿದಂತೆ ಇತರೆ ತಿಂಡಿಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರದರು.