ಗಣಂಗೂರು ಬಳಿ ಇರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ಸಿಬ್ಬಂದಿ ಮಂಗಳವಾರ ರಾತ್ರಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸೆಗಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಪ್ರಯಾಣಿಕರ ಮೇಲೆ ರೌಡಿಗಳನ್ನು ಕರೆಸಿ ಹಲ್ಲೆ ನಡೆಸಿ, ಚಿನ್ನದ ಸರ ಕದಿಯಲು ಮುಂದಾಗಿದ್ದರು ಎಂಬ ಆರೋಪಗಳು ಕೇಳಿಬಂದಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಗಣಂಗೂರು ಟೋಲ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ಹಲ್ಲೆಗೊಳಗಾದ ಪ್ರಯಾಣಿಕರು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಎದುರು ಧರಣಿ ನಡೆಸಿದರು.ತಾಲೂಕಿನ ಗಣಂಗೂರು ಬಳಿ ಇರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ಸಿಬ್ಬಂದಿ ಮಂಗಳವಾರ ರಾತ್ರಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸೆಗಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಪ್ರಯಾಣಿಕರ ಮೇಲೆ ರೌಡಿಗಳನ್ನು ಕರೆಸಿ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿ, ಚಿನ್ನದ ಸರ ಕದಿಯಲು ಮುಂದಾಗಿದ್ದರು ಎಂಬ ಆರೋಪಗಳು ಕೇಳಿಬಂದಿದೆ.
ಕೆ.ಪಿ ಪ್ರಕಾಶ್ ಎಂಬುವವರು ತಮ್ಮ ಕುಟುಂಬ ಸಮೇತ ತಮ್ಮ ಕಾರ್‌ನಲ್ಲಿ ಟೋಲ್ ಮುಖಾಂತರ ಹಾಯ್ದು ಹೋಗುತ್ತಿದ್ದ ವೇಳೆ, ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ನಿಂತಿರುವುದನ್ನ ಕಂಡು, ಮುಚ್ಚಿರುವ ಮತ್ತಷ್ಟು ಗೇಟ್‌ಗಳನ್ನ ತೆಗೆದು ವಾಹನಗಳ ದಟ್ಟಣೆ ಕಡಿಮೆ ಮಾಡುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಟೋಲ್ ಸಿಬ್ಬಂದಿ, ಮೊದಲು ನಿನ್ನ ಕಾರಿನ ಫಾಸ್ಟ್‌ಟ್ಯಾಗ್ ಸರಿಯಾಗಿ ಅಂಟಿಸಿಕೋ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ. ಇದನ್ನ ಪ್ರಶ್ನಿದ ಪ್ರಕಾಶ್ ಅವರಿಗೆ ಟೋಲ್ ಸಿಬ್ಬಂದಿ ರೌಡಿಗಳನ್ನ ಕರೆಯಿಸಿ, ಹಲ್ಲೆ ಮಾಡಿ, ಕತ್ತಿನಲ್ಲಿದ್ದ ಚಿನ್ನದ ಸರ ಕದಿಯಲು ಯತ್ನಿಸಿದ್ದಾರೆ. ಅದೃಷ್ಟವಶಾತ್ ಚಿನ್ನದ ಸರ ತುಂಡಾಗಿ ಬನಿಯನ್ ಒಳಗೆ ಬಿದ್ದರಿಂದ ಚಿನ್ನದ ಸರ ಉಳಿದುಕೊಂಡಿದೆ ಎಂದು ದೂರಿದರು.ನಂತರ ಪಟ್ಟಣ ಸಾರ್ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹಲ್ಲೆ ನಡೆಸಿದ ಟೋಲ್ ಸಿಬ್ಬಂದಿ ವಿರುದ್ಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದರೆ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ಹಾಗಾಗಿ ಗ್ರಾಮಸ್ಥರ ಜೊತೆಗೂಡು ಠಾಣೆ ಎದುರು ಧರಣಿ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಟೋಲ್ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸದೆ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.