ಶ್ರೀರಂಗಪಟ್ಟಣ ದಸರಾ ಕಾಟಾಚಾರದ ಆಚರಣೆ ಸಲ್ಲದು: ಪಾಪು

| Published : Sep 29 2024, 01:37 AM IST

ಸಾರಾಂಶ

ನೆಪಮಾತ್ರಕ್ಕೆ ಕಳೆದ ಸೆ.19ರಂದು ದಸರಾ ಪೂರ್ವಭಾವಿ ಕರೆದಿದ್ದು ಯಾವುದೇ ಗಂಭೀರ ಚರ್ಚೆಗಳು ನಡೆದಿಲ್ಲ. ತಮ್ಮ ಹಿತ ಕಾಯುವವರಿಗೆ ಮಾತ್ರ ವಕಾಲತ್ತು ವಹಿಸುವುದಷ್ಟೆ ಚರ್ಚೆಯಾಗಿದೆ. ಸಭೆಗೆ ಪಕ್ಷಾತೀತವಾಗಿ ಸಂಘ ಸಂಸ್ಥೆಗಳಿಗೆ ಸರಿಯಾದ ರೀತಿಯಲ್ಲಿ ಆಹ್ವಾನ ನೀಡಿಲ್ಲ. ಇದರಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ದಸರಾ ಮಹೋತ್ಸವ ಒಂದು ಪಕ್ಷದ ಆಚರಣೆಯಾಗುತ್ತಿದೆ. ಸರ್ಕಾರದ ಸಾರ್ವಜನಿಕರ ತೆರಿಗೆ ಹಣದಿಂದ ದಸರಾಗೆ 3 ಕೋಟಿಗೂ ಹೆಚ್ಚು ಹಣ ಬಂದಿದೆ. ಈ ಹಣವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗಬೇಕು ಎಂದು ರೈತ ಮುಖಂಡ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಕ್ಷೇತ್ರದ ಶಾಸಕರು ದಸರಾ ಆಚರಣೆಯಲ್ಲಿ ಪಕ್ಷಾತೀತವಾಗಿ ಸಂಘ-ಸಂಸ್ಥೆ ಸಾರ್ವಜನಿಕ ಸಮೂಹವನ್ನು ಜತೆಗೂಡಿ ಕರೆದುಕೊಂಡು ಹೋಗುತ್ತಿಲ್ಲ ಎಂದು ದೂರಿದ್ದಾರೆ.

ನೆಪಮಾತ್ರಕ್ಕೆ ಕಳೆದ ಸೆ.19ರಂದು ದಸರಾ ಪೂರ್ವಭಾವಿ ಕರೆದಿದ್ದು ಯಾವುದೇ ಗಂಭೀರ ಚರ್ಚೆಗಳು ನಡೆದಿಲ್ಲ. ತಮ್ಮ ಹಿತ ಕಾಯುವವರಿಗೆ ಮಾತ್ರ ವಕಾಲತ್ತು ವಹಿಸುವುದಷ್ಟೆ ಚರ್ಚೆಯಾಗಿದೆ. ಸಭೆಗೆ ಪಕ್ಷಾತೀತವಾಗಿ ಸಂಘ ಸಂಸ್ಥೆಗಳಿಗೆ ಸರಿಯಾದ ರೀತಿಯಲ್ಲಿ ಆಹ್ವಾನ ನೀಡಿಲ್ಲ. ಇದರಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ಶ್ರೀರಂಗಪಟ್ಟಣ ದಸರಾ ಪೂರ್ವಭಾವಿ ಸಭೆಗೆ ಒಂದು ಗಾಂಭೀರ್ಯತೆ ಇದೆ. ಆದರೆ, ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ಕಾಮಗಾರಿ ಮಾಡುವುದು, ಕಾರ್ಯಕ್ರಮ ಆಯೋಜಿಸುವುದು, ಆತುರದಲ್ಲಿ ಕಲಾ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಮ್ಮ ಹಿತ ಕಾಯುವವರನ್ನು ಆಯ್ಕೆ ಮಾಡುವುದು ನಡೆಯುತ್ತದೆ ಎಂದು ಆರೋಪಿಸಿದ್ದಾರೆ.

ಸ್ಥಳೀಯ ಕಲಾವಿದರಿಗೆ ಅಲ್ಪಸ್ವಲ್ಪ ಅವಕಾಶ ನೀಡುವುದನ್ನು ಬಿಟ್ಟರೆ ಆಹಾರ, ಲೈಂಟಿಂಗ್ಸ್, ವೇದಿಕೆ ಇನ್ನಿತರ ಕಾರ್ಯಗಳನ್ನು ತಮ್ಮ ಹಿತ ಕಾಯುವವರಿಗೇ ನೀಡಲಾಗುತ್ತಿದೆ. ಪಕ್ಷಾತೀತವಾಗಿ ಸಂಘಸಂಸ್ಥೆ ಒಳಗೊಂಡಂತೆ ಸಂಪೂರ್ಣ ಸಮಿತಿ ರಚನೆ ಮಾಡಿ ಕೆಲವು ಜವಾಬ್ದಾರಿ ನೀಡಬೇಕು. ಅದು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಒಂದು ದಿನವೂ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ ದಸರಾ ಸಿದ್ಧತೆ ಬಗ್ಗೆ ಚರ್ಚಿಸಿಲ್ಲ. ಸ್ಥಳಕ್ಕೂ ಭೇಟಿ ನೀಡಿಲ್ಲ. ಸಂಘಸಂಸ್ಥೆಗಳ ಮುಖಂಡರನ್ನು ಪಕ್ಷಾತೀತವಾಗಿ ಕರೆದು ಚರ್ಚಿಸುವ ಗೋಜಿಗೂ ಹೋಗಿಲ್ಲ. ಇದರಿಂದ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಟೀಕೆಗೆ ಒಳಗಾಗಬೇಕಾಗುತ್ತದೆ ಎಂದು ಎಂದು ಎಚ್ಚರಿಸಿದ್ದಾರೆ.