2020ರಲ್ಲಿ ಕೋವಿಡ್ ಮಹಾಮಾರಿ ಇಡೀ ವಿಶ್ವವನ್ನೇ ತತ್ತರಗೊಳಿಸಿದ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದರು. ಇದರ ಫಲವಾಗಿ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆ ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಐದನೇ ಸ್ಥಾನವನ್ನೂ ಗಳಿಸಿತ್ತು.

ಎಲ್.ವಿ ನವೀನ್‌ಕುಮಾರ್‌

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಏಳು ವರ್ಷಗಳ ಹಿಂದೆ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿಗೆ ಪಾತ್ರವಾಗಿದ್ದ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆ ಇದೀಗ ಅವ್ಯವಸ್ಥೆಯ ಕೂಪವಾಗಿದೆ. ವೈದ್ಯರ ನಿರ್ಲಕ್ಷ್ಯ, ಸ್ವಚ್ಛತೆ, ಮೂಲಸೌಕರ್ಯಗಳ ಕೊರತೆ ಮತ್ತು ಸರಿಯಾದ ಚಿಕಿತ್ಸೆ ನೀಡದಿರುವುದು ಸ್ಥಳೀಯ ಸಂಘಟನೆಗಳು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆರೋಗ್ಯ ಸೇವೆ ಎಂದರೆ ಕೇವಲ ಚಿಕಿತ್ಸೆ ನೀಡುವುದಲ್ಲ. ಅದು ಮಾನವೀಯತೆ, ಭದ್ರತೆ ಮತ್ತು ಸಾಮಾಜಿಕ ನ್ಯಾಯದ ಪ್ರತೀಕ. ಆದರೆ, ಇದಕ್ಕೆ ತದ್ವಿರುದ್ದವೆಂಬಂತೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸದೆ, ರೋಗಿಗಳಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ರೋಗಿಗಳಲ್ಲಿ ಬೇಸರ ತರಿಸಿದೆ.

2018- 19ನೇ ಸಾಲಿನಲ್ಲಿ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯು ಸ್ವಚ್ಛತೆ, ಚಿಕಿತ್ಸೆ ಹಾಗೂ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವುದನ್ನು ಗಮನಿಸಿ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದಲ್ಲಿ ಐದನೇ ಸ್ಥಾನವನ್ನು ಗಳಿಸಿತ್ತು. ಇದರಿಂದ ಹಲವಾರು ಸಂಘ- ಸಂಸ್ಥೆಗಳು, ರೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದರು. ಆದರೆ, ಇದೀಗ ಸಂಘ- ಸಂಸ್ಥೆಗಳೇ ಇಲ್ಲಿನ ವ್ಯವಸ್ಥೆ ಕಂಡು ಪ್ರತಿಭಟನೆ ನಡೆಸುವಂಥ ದುಸ್ಥಿತಿಗೆ ತಲುಪಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ತರಿಸಿದೆ.

ತಾಲೂಕು ವೈದ್ಯಾಧಿಕಾರಿಗಳಿಲ್ಲ:

ಕಳೆದ ಎರಡು ವರ್ಷಗಳ ಹಿಂದೆ ತೆರವಾಗಿದ್ದ ತಾಲೂಕು ವೈದ್ಯಾಧಿಕಾರಿಗಳನ್ನು ನೇಮಿಸದೇ ಇರುವುದು ಇಲ್ಲಿನ ಅವ್ಯವಸ್ಥೆಗೆ ಒಂದು ಕಾರಣವಾಗಿದೆ. ಜೊತೆಗೆ ಈಗಿರುವ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ವೈದ್ಯರು, ಸಿಬ್ಬಂದಿ ಸಮನ್ವಯತೆ ಕೊರತೆ ಮತ್ತು ಅಶಿಸ್ತಿನಿಂದ ವರ್ತಿಸುವವರ ವಿರುದ್ಧ ಕೆಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಆಸ್ಪತ್ರೆ ಇಂತಹ ದುಸ್ಥಿತಿಗೆ ತಲುಪಲು ಕಾರಣವಾಗಿದೆ.

ವಿದೇಶಿ ತಂತ್ರಜ್ಞಾನ ಯಂತ್ರ:

ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹತ್ವದ ಬದಲಾವಣೆಗಳು ನಡೆದು, 2018-23ನೇ ಸಾಲಿನಲ್ಲಿ ಹಳೆಯ ಎಕ್ಸ್‌-ರೇ ಯಂತ್ರಗಳ ಬದಲಿಗೆ ಸುಮಾರು 10 ಲಕ್ಷ ರು. ಮೌಲ್ಯದ ಅತ್ಯಾಧುನಿಕ ಡಿಜಿಟಲ್ ಎಕ್ಸ್‌-ರೇ ಯಂತ್ರ ಅಳವಡಿಕೆಯಾಗಿದೆ. ಲ್ಯಾಬೋರೇಟರಿ ವಿಭಾಗ ನವೀಕರಿಸಿ, ವಿದೇಶಿ ತಂತ್ರಜ್ಞಾನ ಹೊಂದಿದ ಯಂತ್ರ, ರಕ್ತ, ಮೂತ್ರ ಮತ್ತು ತುರ್ತು ಪರೀಕ್ಷೆಗಳ ವರದಿಗಳು ಸ್ಥಳದಲ್ಲೇ ದೊರೆಯುವುದು. ಸ್ತ್ರೀರೋಗ, ಶಸ್ತ್ರಚಿಕಿತ್ಸೆ, ಚರ್ಮರೋಗ, ಫಿಸಿಷಿಯನ್, ಇಎನ್‌ಟಿ, ಮಕ್ಕಳ, ಮೂಳೆ ಹಾಗೂ ಅನಸ್ತೇಶಿಯಾ ವಿಭಾಗಗಳಲ್ಲಿ ಪರಿಣತ ವೈದ್ಯರು ಸೇವೆ ಸಲ್ಲಿಸುವಂತೆ ಮಾಡಿ ಸಾರ್ವಜನಿಕ ಆಸ್ಪತ್ರೆಯನ್ನು ಸಂಪೂರ್ಣ ಚಿಕಿತ್ಸಾ ಕೇಂದ್ರವನ್ನಾಗಿ ರೂಪಿಸಲಾಗಿತ್ತು.

ಕೋವಿಡ್‌ ಸಂಕಷ್ಟದಲ್ಲಿ ಮಾನವೀಯತೆ:

2020ರಲ್ಲಿ ಕೋವಿಡ್ ಮಹಾಮಾರಿ ಇಡೀ ವಿಶ್ವವನ್ನೇ ತತ್ತರಗೊಳಿಸಿದ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದರು. ಇದರ ಫಲವಾಗಿ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆ ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಐದನೇ ಸ್ಥಾನವನ್ನೂ ಗಳಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಹಕಾರದಿಂದ ಸುಮಾರು 1 ಕೋಟಿ ರು. ವೆಚ್ಚದಲ್ಲಿ ನೈಸರ್ಗಿಕ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸಿ ಆಸ್ಪತ್ರೆಯ ಪ್ರತಿಯೊಂದು ಹಾಸಿಗೆ ಪಕ್ಕಕ್ಕೂ ನೇರವಾಗಿ ಆಮ್ಲಜನಕ ಪೂರೈಕೆಯಾಗುತ್ತಿದೆ.

ಕಣ್ಣಿನ ಶಸ್ತ್ರಚಿಕಿತ್ಸೆ:

ಸುಸಜ್ಜಿತ ಕಣ್ಣಿನ ಶಸ್ತ್ರಚಿಕಿತ್ಸಾ ವಿಭಾಗವನ್ನು ಸ್ಥಾಪಿಸಿ, ಗ್ರಾಮೀಣ ಬಡ ಜನರಿಗೆ ಉಚಿತವಾಗಿ ಸ್ಥಳೀಯವಾಗಿಯೇ ಗುಣಮಟ್ಟದ ಶಸ್ತ್ರ ಚಿಕಿತ್ಸೆಗಾಗಿ ನಿರ್ಮಿಸಿದ್ದ ವಿಶೇಷವಾಗಿ ಕಣ್ಣಿನ ಶಸ್ತ್ರಚಿಕಿತ್ಸಾ ವಿಭಾಗದ ಯಂತ್ರಗಳು ಕೆಟ್ಟು ನಿಂತಿವೆ. ಅಲ್ಲದೇ, ಲ್ಯಾಬೋರೋಟರಿ ಉಪಕರಣಗಳ ನಿರ್ವಹಣೆಯ ಕೊರತೆಯಿಂದ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವವರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ 30- 40 ಸಾವಿರ ರು. ಹಣ ವ್ಯಯಿಸಿ ಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಹಿಂದಿನ ಅವಧಿಯ ರಕ್ಷಾ ಸಮಿತಿ ಸದಸ್ಯ ಡಾ.ಡಿ.ಎ.ಪ್ರಶಾಂತ್ ಪಾಲಹಳ್ಳಿ ಪ್ರತಿಕ್ರಿಯಿಸಿ, 2018ರಿಂದ 2023ರವರೆಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ನಾಯಕತ್ವದಿಂದ ಆರೋಗ್ಯ ಕ್ರಾಂತಿಯನ್ನೇ ಮಾಡಲಾಗಿತ್ತು. ಆರೋಗ್ಯವು ಮಾನವನ ಮೂಲಭೂತ ಹಕ್ಕು ಎಂಬ ನಂಬಿಕೆಯಿಂದ ಕೆಲಸ ಮಾಡಿದ್ದೇವೆ. ಆಸ್ಪತ್ರೆಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರಲು ಆರೋಗ್ಯ ಕ್ಷೇತ್ರದಲ್ಲಿ ಅನುಭವ ಹಾಗೂ ಸೇವಾಭಾವನೆ ಹೊಂದಿದ್ದ ನಾಲ್ವರು ನಿಷ್ಠಾವಂತರನ್ನು ಆರೋಗ್ಯ ರಕ್ಷಾ ಸಮಿತಿಗೆ ನೇಮಿಸಲಾಗಿತ್ತು.

ಈ ಸಮಿತಿ ಕೇವಲ ಕಾಗದದ ಮೇಲಿನ ವ್ಯವಸ್ಥೆಯಾಗಿರದೆ, ಆಸ್ಪತ್ರೆಯ ದೈನಂದಿನ ಸಮಸ್ಯೆಗಳನ್ನು ಗುರುತಿಸಿ ಸರಿಪಡಿಸಲಾಗುತ್ತಿತ್ತು. ಆದರೆ ಇಂದಿನ ರಕ್ಷಾ ಸಮಿತಿ ಹಾಗೂ ಆಡಳಿತ ವ್ಯವಸ್ಥೆ ಆಸ್ಪತ್ರೆಯತ್ತ ಗಮನ ಹರಿಸುತ್ತಿದೆಯೇ ಎಂಬ ಸಂಶಯಗಳು ಮೂಡಿವೆ. ಇನ್ನಾದರೂ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿನ ಹಲವಾರು ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಸಂಘ-ಸಂಸ್ಥೆಗಳ ಆರೋಪ ಶುದ್ಧ ಸುಳ್ಳು. ವೈದ್ಯರು ಶಸ್ತ್ರ ಚಿಕಿತ್ಸೆಯಲ್ಲಿದ್ದ ವೇಳೆ ಬಂದು ವೈದ್ಯರೇ ಇಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವರು ಬಂದ ತಕ್ಷಣ ನಮ್ಮ ಕೆಲಸವಾಗಿಲ್ಲ ಎಂಬ ಕಾರಣಕ್ಕೂ ಆರೋಪಗಳನ್ನು ಮಾಡುತ್ತಾರೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಸೇರಿದಂತೆ ಹಲವರು ಕಳೆದ ಜೂನ್ -ಜುಲೈ ತಿಂಗಳಿನಲ್ಲಿ ವರ್ಗಾವಣೆಗೊಂಡಿರುವುದರಿಂದ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಇದೀಗ ನಿಯೋಜನೆಗೊಂಡಿರುವ ವೈದ್ಯರು ನೀಡುವ ಚಿಕಿತ್ಸೆ ಬಗ್ಗೆ ತಿಳಿದು ರೋಗಿಗಳು ಆಸ್ಪತ್ರೆಯತ್ತ ಬರಲಿದ್ದಾರೆ. ಅಲ್ಲದೆ ಕೆಲವರು ರೋಗಿಗಳಿಂದ ಹಣ ಪಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೂ ಬಂದಿದ್ದು, ಅಂತಹವರ ವಿರುದ್ಧ ಕ್ರಮ ವಹಿಸಲಾಗುವುದು.

- ಡಾ.ವಿಜಯಲಕ್ಷ್ಮೀ, ಅಡಳಿತಾಧಿಕಾರಿ