ಸಾರಾಂಶ
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಹಾಗೂ ಮೈಸೂರು ನನಗೆ ಅದೃಷ್ಟದ ಸ್ಥಳಗಳು. ಇಲ್ಲಿ ಮಾಡಿದ ಚಲನಚಿತ್ರಗಳು ಯಶಸ್ವಿಯಾಗಿವೆ ಎಂದು ಚಿತ್ರನಟ ಡಾ.ಶಿವಕುಮಾರ್ ಹೇಳಿದರು. ಪಟ್ಟಣದ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,
ಬಹಳಷ್ಟು ಚಲನಚಿತ್ರಗಳನ್ನು ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಇಲ್ಲಿ ನನಗೆ ಅಭಿಮಾನಿಗಳು, ಬಂಧುಬಳಗ ಹೆಚ್ಚಾಗಿದ್ದಾರೆ ಎಂದರು.ಯಾವುದೇ ಜಾತಿ, ಮತ, ಪಂಥಗಳಿಗೆ ಹಬ್ಬ ಮೀಸಲಾಗದೇ ಎಲ್ಲರೂ ಒಟ್ಟಿಗೆ ಭಾಗವಹಿಸಿ ಆಚರಿಸುವ ಹಬ್ಬವೇ ದಸರಾ ಹಬ್ಬ. ದಸರಾ ಜಂಬೂ ಸವಾರಿ, ಉದ್ಘಾಟನೆಗೆ ಆಹ್ವಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ನಾಡಹಬ್ಬ ದಸರಾಗೆ 414 ವರ್ಷದ ಇತಿಹಾಸವಿದೆ. ಸರ್ಕಾರದ ವತಿಯಿಂದ ಶ್ರೀರಂಗಪಟ್ಟಣದಲ್ಲಿ ದಸರಾ ಹಬ್ಬ ಆಚರಿಸಲು ಪ್ರಾರಂಭವಾಗಿ 16 ವರ್ಷವಾಗಿದೆ. ಪ್ರತಿ ವರ್ಷ ಶ್ರೀರಂಗಪಟ್ಟಣ ದಸರಾ ತನ್ನ ಮೆರಗನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದರು.ದಸರಾ ವೇಳೆ ಸಾಂಸ್ಕೃತಿಕ ರಂಗದಲ್ಲಿ ಅನೇಕರನ್ನು ಗುರುತಿಸಿ ಅವರನ್ನು ಗೌರವವಿಸಲಾಗುತ್ತಿದೆ. ದಸರಾ ಯಶಸ್ವಿಯಾಗಿ ನಡೆಸಲು ಸಹಕರಿಸಿದಂತಹ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ತಿಳಿಸಿದರು. ಇದೇ ವೇಳೆ ನಟ ಶಿವರಾಜ್ ಕುಮಾರ್ ಹಸಿದಾಗ ಅನ್ನ ದಣಿದಾಗ ನೀರು, ಇವನ್ಯಾರ ಮಗನೋ, ಯಾರೇ ಕೂಗಾಡಲಿ, ಗೊಂಬೆ ಹೇಳುತೈತೆ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಕೆ.ವಿವೇಕನಂದ, ವೇ.ಬ್ರ.ಭಾನುಪ್ರಕಾಶ್ ಶರ್ಮಾ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ , ಎಸಿ ಶಿವಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಮನ್ಮುಲ್ ಅಧ್ಯಕ್ಷ ಬೋರೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಹಲವರು ಇದ್ದರು.