ದಸರಾ ಉತ್ಸವದಿಂದ ಶ್ರೀರಂಗಪಟ್ಟಣದ ಹೆಸರು ಉನ್ನತ ಮಟ್ಟಕ್ಕೆ: ಸತೀಶ್ ಜಾರಕಿಹೊಳಿ

| Published : Oct 08 2024, 01:01 AM IST

ದಸರಾ ಉತ್ಸವದಿಂದ ಶ್ರೀರಂಗಪಟ್ಟಣದ ಹೆಸರು ಉನ್ನತ ಮಟ್ಟಕ್ಕೆ: ಸತೀಶ್ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ದಸರಾ ಬಹಳ ಅದ್ಧೂರಿಯಾಗಿ ಜರುಗಿದೆ. ಈ ವೇದಿಕೆಯ ಮುಖಾಂತರ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡಲಾಗಿದೆ. ಕಲಾವಿದರು ಪ್ರದರ್ಶನ ನೀಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ. ಅದೇ ರೀತಿ ಉತ್ಸವದ ಮೂಲಕ ಶ್ರೀರಂಗಪಟ್ಟಣದ ಹೆಸರು ಉನ್ನತ ಮಟ್ಟಕ್ಕೇರಲಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದಸರಾ ಉತ್ಸವದ ಮೂಲಕ ಶ್ರೀರಂಗಪಟ್ಟಣದ ಹೆಸರು ಉನ್ನತ ಮಟ್ಟಕ್ಕೇರಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದ ಶ್ರೀರಂಗ ವೇದಿಕೆಯಲ್ಲಿ ನಡೆದ ಶ್ರೀರಂಗಪಟ್ಟಣ ದಸರಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಶ್ರೀರಂಗಪಟ್ಟಣ ದಸರಾ ಹಬ್ಬದ ರೀತಿಯಲ್ಲಿ ನಡೆದು ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸುವಂತಹ ಕೆಲಸವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ದಸರಾ ಬಹಳ ಅದ್ಧೂರಿಯಾಗಿ ಜರುಗಿದೆ. ಈ ವೇದಿಕೆಯ ಮುಖಾಂತರ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡಲಾಗಿದೆ. ಕಲಾವಿದರು ಪ್ರದರ್ಶನ ನೀಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ. ಅದೇ ರೀತಿ ಉತ್ಸವದ ಮೂಲಕ ಶ್ರೀರಂಗಪಟ್ಟಣದ ಹೆಸರು ಉನ್ನತ ಮಟ್ಟಕ್ಕೇರಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸಾಂಸ್ಕೃತಿಕ ನೆಲಗಟ್ಟಿನಲ್ಲಿ ಪಾರಂಪರಿಕ ದಸರಾ ಬಹಳ ಅರ್ಥಪೂರ್ಣವಾಗಿ ನಡೆದಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದಂತಹ ಪ್ರತಿಯೊಬ್ಬರಿಗೂ ಅಭಿನಂದನೆ ಅರ್ಪಿಸುತ್ತೇನೆ‌ ಎಂದರು.

ದಸರಾ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸೇರಿದಂತೆ ಅನೇಕ ಜನಪರವಾದ ಸುಮಾರು 150ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು ಎಂದರು.

ಕಳೆದ ಬಾರಿ ಹವಾಮಾನ ವೈಪರಿತ್ಯದಿಂದಾಗಿ ಮಳೆಯಾಗದೇ ಸರ್ಕಾರದ ವಿರುದ್ಧ ಹಲವು ಟೀಕೆ ಟಿಪ್ಪಣಿಗಳು ಕೇಳಿ ಬಂದಿದ್ದವು. ಈ ಬಾರಿ ಕೆಆರ್‌ಎಸ್ ಅಣೆಕಟ್ಟೆ ತುಂಬಿ ಸಿಎಂ, ಡಿಸಿಎಂ ಬಾಗಿನವನ್ನು ಅರ್ಪಿಸಿದ್ದಾರೆ. ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ವರುಣನ ಆಶೀರ್ವಾದದಿಂದ ಸಾಕಷ್ಟು ಮಳೆಯಾಗುತ್ತಿದೆ ಎಂದರು.

ಮಂಡ್ಯ ಜಿಲ್ಲೆಯ ಕೊನೆ ಭಾಗದ ರೈತರುಗಳಿಗೆ ಪೂರ್ಣಪ್ರಮಾಣದಲ್ಲಿ ನೀರು ಹರಿಸಿದರೂ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಅಚ್ಚುಕಟ್ಟು ಪ್ರದೇಶಗಳಲ್ಲಿ ಸರಿಯಾಗಿ ಮಳೆಯಾದ ಕಾರಣ ಈ ವ್ಯತ್ಯಾಸವಾಗಿದೆ. ಮುಂದಿನ ದಿನಗಳಲ್ಲಿ ತಾಯಿ ಚಾಮುಂಡೇಶ್ವರಿ ಹಾಗೂ ಶ್ರೀರಂಗನಾಥಸ್ವಾಮಿ ಕೃಪೆಯಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದರು.

ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಆದರೆ, ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಎಲ್ಲವನ್ನೂ ಮೆಟ್ಟಿ ನಿಲ್ಲಲಿದೆ. ಮಾಧ್ಯಮಗಳ ಮುಂದೆ ಮಾಡುವ ಟೀಕೆ ಟಿಪ್ಪಣಿಗಳು ಯಾವುದೇ ಚರ್ಚೆ ಆಗುವುದಿಲ್ಲ. ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಸಹ ಸರ್ಕಾರ ಗ್ಯಾರಂಟಿ, ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಕ ರಮೇಶ ಬಂಡಿಸಿದ್ದೇಗೌಡ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಜಿಲ್ಲಾಧಿಕಾರಿ ಡಾ.ಕುಮಾರ, ಕಿರಂಗೂರು ಗ್ರಾಪಂ ಅಧ್ಯಕ್ಷೆ ಶೃತಿ, ಕೆಪಿಎಸ್‌ಸಿ ಸದಸ್ಯ ಬಿ. ಪ್ರಭುದೇವ್, ಮನ್ಮುಲ್ ಅಧ್ಯಕ್ಷ ಬೋರೇಗೌಡ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಪರಶುರಾಮ್ ಸತ್ತೀಗೇರಿ ಸೇರಿದಂತೆ ಇನ್ನಿತರೆ ‌ಗಣ್ಯರು ಉಪಸ್ಥಿತರಿದ್ದರು.