ರೇಣುಕಾದೇವಿರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ಮಂಗಳವಾದ್ಯ, ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆಮದ್ದರೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಇಡೀ ರಾತ್ರಿ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಹೊಳೇ ಬೀದಿಯ ಶ್ರೀರೇಣುಕಾ ಎಲ್ಲಮ್ಮ ದೇವಿಯ ದೇಗುಲದಲ್ಲಿ 54ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ವಿಶೇಷ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ನೆರವೇರಿತು.

ಜಾತ್ರೆ ಅಂಗವಾಗಿ ಮುಂಜಾನೆ ದೇಗುಲದಲ್ಲಿ ರೇಣುಕಾದೇವಿ ಮೂಲ ವಿಗ್ರಹಕ್ಕೆ ಅಭಿಷೇಕ, ಪುಷ್ಪಾಲಂಕಾರ ಸೇವೆಯೊಂದಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ನಂತರ ಚಂಡಿಕಾ ಹೋಮ, ಹವನಾದಿಗಳ ತರುವಾಯ ಪೂರ್ಣಾಹುತಿ, ಸುಹಾಸಿನಿ ಆರಾಧನೆ ಹಾಗೂ ಕನಿಕ ಆರಾಧನೆ ನಂತರ ಮಧ್ಯಾಹ್ನ 12:30ರ ಸುಮಾರಿಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ದ ಬಳಿಕ ನೆರೆದಿದ್ದ ನೂರಾರು ಮುತ್ತೈದೆಯರಿಂದ ತಂಬಿಟ್ಟಿನ ಆರತಿ ನೆರವೇರಿಸಿ ಧನ್ಯತಾಭಾವ ಮೆರೆದರು.

ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಶ್ರೀರೇಣುಕಾ ಎಲ್ಲಮ್ಮ ದೇವಿ ಟ್ರಸ್ಟ್ ನ ಟಿ.ಶ್ರೀನಿವಾಸ್ ಹಾಗೂ ಪದಾಧಿಕಾರಿಗಳಿಂದ ಅನ್ನ ಸಂತರ್ಪಣೆ ನಡೆಯಿತು. ಸಂಜೆ ರೇಣುಕಾದೇವಿರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ಮಂಗಳವಾದ್ಯ, ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಇಡೀ ರಾತ್ರಿ ಮೆರವಣಿಗೆ ನಡೆಸಲಾಯಿತು.

ನಾಗರಿಕರು ಪುಷ್ಪಾಲಂಕೃತ ಶ್ರೀರೇಣುಕಾದೇವಿ ಉತ್ಸವ ಮೂರ್ತಿಗೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು. ಫೆ.2 ರಂದು ಬೆಳಗ್ಗೆ 8.30 ರ ಸುಮಾರಿಗೆ ಪಂಚಗವ್ಯರಾಧನೆ, ಮೂಲ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಅಲಂಕಾರದೊಂದಿಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಶ್ರೀ ರೇಣುಕಾ ಎಲ್ಲಮ್ಮ ದೇವಿಯವರ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.