ಕನ್ನಡಪ್ರಭ ವಾರ್ತೆ ಎಚ್.ಡಿ.ಕೋಟೆ

ತಾಲೂಕಿನ ಮಹದೇವನಗರ ಗ್ರಾಮದ ಕಂಚಮ್ಮಳ್ಳಿ ಗೇಟಿನಲ್ಲಿರುವ ಶ್ರೀಕ್ಷೇತ್ರ ಶ್ರೀಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಶನೈಶ್ಚರಸ್ವಾಮಿ ಚಾರಿಟಬಲ್ ಟ್ರಸ್ಟಿನಿಂದ ದೇವರ ಗುಡ್ಡಪ್ಪ ಕುಮಾರಸ್ವಾಮಿ ನೇತೃತ್ವದಲ್ಲಿ ಶನೈಶ್ಚರ ಸ್ವಾಮಿಯ ಜಯಂತಿ, ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ವಿಧಿ-ವಿಧಾನಗಳು ಜರುಗಿದವು. ದೇವರನ್ನು ಪುರ ಗ್ರಾಮದ ತೋಟಕ್ಕೆ ಕರೆದುಕೊಂಡು ಬಂದು ದೇವರ ವಿಗ್ರಹಮೂರ್ತಿಗಳನ್ನು ತೊಳೆದು ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಬಳಿಗೆ ಕರೆತರಲಾಯಿತು. ವೀರಗಾಸೆ ನೃತ್ಯ ಪ್ರದರ್ಶಿಸಲಾಯಿತು. ವಾದ್ಯಗೋಷ್ಠಿಗಳು ಮೊಳಗಿದವು. ದೇವಸ್ಥಾನಕ್ಕೆ ತಳಿರು-ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಇದಲ್ಲದೆ ವಿದ್ಯುತ್ ದೀಪಾಲಂಕಾರವನ್ನೂ ಮಾಡಲಾಗಿತ್ತು.

ಜಾತ್ರಾ ಮಹೋತ್ಸವ ಹಿನ್ನೆಲೆ ತುಳಸಿಹಾರದೊಂದಿಗೆ ವಿವಿಧ ಹೂವುಗಳಿಂದ ದೇವಸ್ಥಾನವನ್ನು ಅಲಂಕೃತಗೊಳಿಸಲಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ, ಲಿಂಗೈಕ್ಯ ಗುರುಲಿಂಗಪ್ಪ ಅವರ ಸ್ಮರಣಾರ್ಥವಾಗಿ ಗುರುವಂದನಾ ಕಾರ್ಯಕ್ರಮ, ಪಾದಪೂಜಾ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಛಾಯಾದೇವಿ ಕಳಸ, ಸೂರ್ಯದೇವರ ಕಳಸ, ಶನೇಶ್ವರಸ್ವಾಮಿ ದೇವರ ಉತ್ಸವಮೂರ್ತಿಯೂ ಮೆರವಣಿಗೆ ಮೂಲಕ ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಸಾಗಿ ದೇವಸ್ಥಾನ ತಲುಪಿತು. ಕುದುರೆ ವಾಹನ, ಸತ್ತಿಗೆ ಸೂರಪಾನಿ, ತಮಟೆವಾದ್ಯ, ಅರಮನೆ ಬ್ಯಾಂಡ್ ಸೇರಿದಂತೆ ನಾನಾ ಕಲಾಪ್ರಕಾರಗಳು ಮೆರವಣಿಗೆಗೆ ಮೆರಗು ತಂದವು. ಭಕ್ತರು ದಾರಿಯುದ್ದಕ್ಕೂ ವಿವಿಧ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಟ್ರಸ್ಟಿನ ಅಧ್ಯಕ್ಷ ಕುಮಾರಸ್ವಾಮಿ ಇದ್ದರು.


ದೇವಸ್ಥಾನದಲ್ಲಿಯು ಶ್ರೀ ಗುರುಲಿಂಗಪ್ಪ ಅವರ ಆಶೀರ್ವಾದದೊಂದಿಗೆ ಶ್ರೀ ಶನೈಶ್ಚರ ಸ್ವಾಮಿಗೆ ಹೋಮ, ಅಭಿಷೇಕ, ಪೂಜೆ ನಡೆಯಿತು. ಬಸವ, ಕುದುರೆ ಜತೆಗೆ ದೇವರ ಬೆಳ್ಳಿ ವಿಗ್ರಹಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ನಡೆಯಿತು. ದಾರಿಯಲ್ಲಿ ಮಜ್ಜಿಗೆ ಪಾನಕ ವಿತರಿಸಲಾಯಿತು.

ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ತಿರಿಸಿದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.ಮೊತ್ತ ಗ್ರಾಮದಲ್ಲಿ ಅದ್ಧೂರಿ ಶ್ರೀಶನೈಶ್ಚರ ಸ್ವಾಮಿ ಪಲ್ಲಕ್ಕಿ ಉತ್ಸವ

ಕನ್ನಡಪ್ರಭ ವಾರ್ತೆ ಎಚ್.ಡಿ.ಕೋಟೆತಾಲೂಕಿನ ಮೊತ್ತ ಗ್ರಾಮದಲ್ಲಿ ಶ್ರೀಶನೈಶ್ಚರ ಸ್ವಾಮಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನೆರವೇರಿತು.

ಗ್ರಾಮಸ್ಥರೆಲ್ಲ ಸೇರಿ ಭಕ್ತಿಪೂರ್ವಕವಾಗಿ ಸ್ವಾಮಿಯ ಉತ್ಸವದಲ್ಲಿ ಪಾಲ್ಗೊಂಡಿದ್ದರು, ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು, ಹೋಮ ಹವನಗಳು ನೆರವೇರಿದವು, ಶನೈಶ್ಚರ ವಿಗ್ರಹಕ್ಕೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿದ್ದು, ದೇವಾಲಯದ ಒಳಗೂ ಹೊರಗೂ ಹೂಗಳಿಂದ ಸಿಂಗರಿಸಲಾಗಿದ್ದು, ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು,ಮುಂಜಾನೆಯಿಂದಲೂ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಶನೇಶ್ವರ ದರ್ಶನ ಪಡೆದು ಪುನೀತರಾದರು, ಪ್ರತಿವರ್ಷದಂತೇ ಈ ವರ್ಷವೂ ಸಹ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಊರ ಹೊರ ಭಾಗದಿಂದ ದೇವರನ್ನು ತರಲಾಯಿತು, ಈ ವೇಳೆ ಪುಟ್ಟ ಪುಟ್ಟ ಹೆಣ್ಣುಮಕ್ಕಳು ದೀಪದಾರತಿ ತಂದದ್ದು ಅತ್ಯಾಕರ್ಷಕವಾಗಿದ್ದು, ಬಸವನ ಮೆರವಣಿಗೆ, ವೀರಗಾಸೆ ಕುಣಿತ, ಮಹಿಳಾ ವೀರಗಾಸೆ ಕುಣಿತ, ಸೇರಿ ಹಲವು ಕಲಾತಂಡಗಳ ಪ್ರದರ್ಶನ ಏರ್ಪಡಿಸಲಾಗಿತ್ತು, ರಾತ್ರಿ ಹನ್ನೊಂದು ಗಂಟೆಗೆ ಶುರುವಾದ ಸ್ವಾಮಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಂಜಾನೆವರೆಗೂ ನೆರವೇರಿತು, ಬೆಳ್ಳಿ ರಥದಲ್ಲಿ ಶ್ರೀ ಶನೈಶ್ಚರ ಸ್ವಾಮಿಯು ವಿರಾಜಮಾನವಾಗಿ ಕಂಗೊಳಿಸಿದರು, ಪೂಜೆಯಲ್ಲಿ ಪಾಲ್ಗೊಂಡ ಭಕ್ತರು ಸ್ವಾಮಿಯನ್ನು ಕಣ್ತುಂಬಿಕೊಂಡು ಭಕ್ತಿಪರವಶರಾದರು.