ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ವಿಭಾಗದ 10 ನೇ ತರಗತಿಯ ವಿದ್ಯಾರ್ಥಿನಿ ಸೃಷ್ಟಿ ರವೀಂದ್ರ ಬನ್ನಟ್ಟಿ ಕರ್ನಾಟಕ ನಾಮಕರಣಗೊಂಡ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮಕ್ಕೆ ಭಾಗವಹಿಸಲು ಆಯ್ಕೆಯಾಗಿದ್ದಾಳೆ.ಉಸಿರಾಗಲಿ ಕನ್ನಡ, ಕರ್ನಾಟಕ ನಾಮಕರಣಗೊಂಡ 50 ವರ್ಷ ಪೂರ್ಣಗೊಂಡ ಹಿನ್ನೆಲೆ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯಲ್ಲಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಎಲ್ಲ ಜಿಲ್ಲೆಗಳ ಆಯ್ದ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನ.21ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ ಕಾರ್ಯಕ್ರಮ ಜರುಗಲಿದೆ.ಕ್ಷೇತ್ರದಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ ಐದು ವಿದ್ಯಾರ್ಥಿಗಳಲ್ಲಿ ಗುಳೇದಗುಡ್ಡ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 10ನೇ ತರಗತಿಯ ಸೃಷ್ಟಿ ರವೀಂದ್ರ ಬನ್ನಟ್ಟಿ ವಿದ್ಯಾರ್ಥಿನಿಯನ್ನು, ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಾದಾಮಿ ಇವರು ಆಯ್ಕೆ ಮಾಡಿದ್ದಾರೆ ಎಂದು ಉಪಪ್ರಾಚಾರ್ಯ ಎಂ.ಪಿ.ಮಾಗಿ ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲು ವಿದ್ಯಾರ್ಥಿನಿ ಸೃಷ್ಟಿ ಸ್ವತಃ ತಾನೇ ತಯಾರಿಸಿದ ಕನ್ನಡ ನಾಡಿನ ನಕ್ಷೆಯೊಂದಿಗೆ ಮುಖ್ಯಮಂತ್ರಿಗಳ ಭಾವಚಿತ್ರವನ್ನು ಸಿದ್ಧಪಡಿಸಿಕೊಂಡಿರುವುದು ವಿಶೇಷವಾಗಿದೆ ಎಂದರು.ಈ ಸಂದರ್ಭದಲ್ಲಿ ಸಹಶಿಕ್ಷಕರಾದ ವೈ.ಜಿ.ತಳವಾರ, ಸಿ.ಎಂ.ಕುರುಬರ, ಎಸ್.ಎಸ್.ಪಟ್ಟಣಶೆಟ್ಟಿ, ದೇವರಾಜ ಅಡ್ಡಿ, ಆರ್.ವಿ.ಬಳ್ಳಾ, ಸಿ.ಪಿ.ಹಲಗಲಿ ಇದ್ದರು