ಕೇರಳಾಪುರದ ಶ್ರೀವೀರಭದ್ರೇಶ್ವರ ರಥೋತ್ಸವ ಸಂಪನ್ನ

| Published : Mar 20 2024, 01:18 AM IST

ಸಾರಾಂಶ

ಕೇರಳಾಪುರ ಗ್ರಾಮವು ೪ ತಾಲೂಕುಗಳ ಸಂಗಮ ಸ್ಥಳವಾಗಿದ್ದು, ಶ್ರೀವೀರಭದೇಶ್ವರ ಸ್ವಾಮಿಯು ೪ ತಾಲೂಕುಗಳ ಅನೇಕ ಕುಟುಂಬಗಳಿಗೆ ಕುಲದೈವವಾಗಿದ್ದಾನೆ.ಅಲ್ಲದೇ ರಾಜ್ಯದ ಅನೇಕ ಜಿಲ್ಲೆಗಳಿಂದಲೂ ಶ್ರೀಸ್ವಾಮಿಯವರ ದರ್ಶನಕ್ಕಾಗಿ ಭಕ್ತಾದಿಗಳು ಅಗಮಿಸುತ್ತಾರೆ.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಇಲ್ಲಿಗೆ ಸಮೀಪದ ಮಲ್ಲಿಗೆಯ ಗ್ರಾಮದ ಕಾವೇರಿ ನದಿ ಎಡದಂಡೆಯ ಮೇಲೆ ನೆಲೆಗೊಂಡಿರುವ ದೇವಾಲಯಗಳ ಊರು ಕೇರಳಾಪುರದ ಪುರಾಣ ಪ್ರಸಿದ್ಧ ಐತಿಹಾಸಿಕ ದೇವಾಲಯ ಶ್ರೀವೀರಭದ್ರೇಶ್ವರ ದೇವರ ರಥೋತ್ಸವವು ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಜರುಗಿತು. ಕೇರಳಾಪುರ ಗ್ರಾಮವು ೪ ತಾಲೂಕುಗಳ ಸಂಗಮ ಸ್ಥಳವಾಗಿದ್ದು, ಶ್ರೀವೀರಭದೇಶ್ವರ ಸ್ವಾಮಿಯು ೪ ತಾಲೂಕುಗಳ ಅನೇಕ ಕುಟುಂಬಗಳಿಗೆ ಕುಲದೈವವಾಗಿದ್ದಾನೆ.ಅಲ್ಲದೇ ರಾಜ್ಯದ ಅನೇಕ ಜಿಲ್ಲೆಗಳಿಂದಲೂ ಶ್ರೀಸ್ವಾಮಿಯವರ ದರ್ಶನಕ್ಕಾಗಿ ಭಕ್ತಾದಿಗಳು ಅಗಮಿಸುತ್ತಾರೆ. ಹಾಸನ ಜಿಲ್ಲೆಯಲ್ಲೇ ಅತಿ ಎತ್ತರವಾದ ರಥಗಳಲ್ಲಿ ಇದು ಒಂದಾಗಿದ್ದು, ರಥೋತ್ಸವಕ್ಕೆ ಗ್ರಾಮದಲ್ಲಿನ ಹೂವಿನ ಅಲಂಕಾರ ಮತ್ತಷ್ಟು ಮೆರುಗನ್ನು ನೀಡಿತ್ತು. ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗಿನಿಂದಲೇ ಶ್ರೀಸ್ವಾಮಿಗೆ ಪೂಜಾದಿ ವಿಶೇಷ ಕೈಂಕರ್ಯಗಳು ಜರುಗಿದವು. ಸರತಿಯ ಸಾಲಿನಲ್ಲಿ ಭಕ್ತಾದಿಗಳು ನಿಂತು ದೇವರ ದರ್ಶನ ಪಡೆದರು. ನಂತರ ಶ್ರೀವೀರಭದ್ರೇಶ್ವರ ಸ್ವಾಮಿಯವರನ್ನು ಅಲಂಕೃತ ರಥದಲ್ಲಿ ಕುಳ್ಳಿರಿಸಿ ದೇವಸ್ಥಾನ ಬೀದಿಯಲ್ಲಿ ರಥೋತ್ಸವವನ್ನು ಜರುಗಿಸಲಾಯಿತು. ಈ ವೇಳೆ ಭಕ್ತಾದಿಗಳು ಹಣ್ಣು, ದವನ ತೂರಿ ಪುನೀತ ಭಾವನೆ ಹೊಂದಿದರು.

ಗ್ರಾಪಂನಿಂದ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಕೇರಳಾಪುರ ಗ್ರಾಪಂ ಅಧ್ಯಕ್ಷ ಜ್ಯೋತಿಕುಮಾರ್, ಉಪಾಧ್ಯಕ್ಷ ರಾಮಶೆಟ್ಟಿ, ಗ್ರಾಪಂ ಸದಸ್ಯರಾದ ಶಿವಣ್ಣ ಹಾಗೂ ಇತರ ಸದಸ್ಯರು, ಗ್ರಾಪಂ ಮಾಜಿ ಅಧ್ಯಕ್ಷ ಕರೀಗೌಡ, ಮಂಜುನಾಥ್, ನಾಗರಾಜ್, ಪಿಡಿಒ ಲೋಕೇಶ್, ಹಿರಿಯರಾದ ಪರಮೇಶ್ವರಣ್ಣ, ನಿವೃತ್ತ ಅಬಕಾರಿ ಅಧಿಕಾರಿ ಹನ್ಯಾಳು ವೀರಪ್ಪ ಹಾಗೂ ಹಲವು ಪ್ರಮುಖರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಕೊಣನೂರು ಪೋಲಿಸ್ ಠಾಣೆಯ ಅರಕ್ಷಕ ಉಪನೀರಿಕ್ಷಕ ಗಿರೀಶ್ ಮತ್ತು ಸಿಬ್ಬಂದಿ ವರ್ಗ ಭದ್ರತೆ ಒದಗಿಸಿದ್ದರು.