ಎಸ್ಸೆಸ್ಸೆಲ್ಸಿ ಫಲಿತಾಂಶ: ಕೋಲಾರ ಜಿಲ್ಲೆಗೆ 17ನೇ ಸ್ಥಾನ

| Published : May 10 2024, 01:44 AM IST

ಸಾರಾಂಶ

ಈ ಬಾರಿ ಕೋಲಾರ ಜಿಲ್ಲೆಯಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ ೧೯೨೮೨ ಮಂದಿ ಪೈಕಿ ೧೪೪೫೦ ಮಂದಿ ಉತ್ತೀರ್ಣರಾಗಿ ಶೇ.೭೪.೯೪ ಫಲಿತಾಂಶ ಬಂದಿದೆ. ಯಲ್ದೂರಿನ ಶ್ರೀನಿವಾಸ ಪಬ್ಲಿಕ್ ಶಾಲೆ, ಕೆಜಿಎಫ್‌ನ ನಾಚಪಲ್ಲಿಯ ವಿಶ್ವೇಶ್ವರಯ್ಯ ಮೆಮೊರಿಯಲ್ ಶಾಲೆ ಶೂನ್ಯ ಸಾಧನೆ ಮಾಡಿವೆ

ಕನ್ನಡಪ್ರಭ ವಾರ್ತೆ ಕೋಲಾರ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಪರೀಕ್ಷೆಗೆ ಕುಳಿತಿದ್ದ ೧೯೨೮೨ ಮಂದಿ ವಿದ್ಯಾರ್ಥಿಗಳ ಪೈಕಿ ೧೪೪೫೦ ಮಂದಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಶೇ.೭೪.೯೪ ಫಲಿತಾಂಶದೊಂದಿಗೆ ೧೭ನೇ ಸ್ಥಾನ ಬಂದಿದ್ದು, ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿನಿ ಎ.ದರ್ಶಿತಾ ೬೨೩ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಹಾಗೂ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಅವರು, ಈ ಬಾರಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ ೧೯೨೮೨ ಮಂದಿ ಪೈಕಿ ೧೪೪೫೦ ಮಂದಿ ಉತ್ತೀರ್ಣರಾಗಿ ಶೇ.೭೪.೯೪ ಫಲಿತಾಂಶ ಬಂದಿದೆ. ಇದರಲ್ಲಿ ಪರೀಕ್ಷೆಗೆ ಕುಳಿತದ್ದ ೯೬೧೮ ಬಾಲಕಿಯರ ಪೈಕಿ ೭೮೧೮ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೮೧.೨೮ ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಪರೀಕ್ಷೆಗೆ ಕುಳಿತಿದ್ದ ೯೬೬೪ ಬಾಲಕರಲ್ಲಿ ೬೬೩೦ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೬೮.೬೨ ಮಂದಿ ತೇರ್ಗಡೆಯಾಗಿದ್ದಾರೆ.ದರ್ಶಿತಾಗೆ ೬೨೩ ಅಂಕಜಿಲ್ಲೆಗೆ ಟಾಫರ್ ಆಗಿ ಹೊರಹೊಮ್ಮಿರುವ ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿನಿ ಎ.ದರ್ಶಿತಾ ೬೨೩ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದು, ಈ ವಿದ್ಯಾರ್ಥಿನಿ ಕೆಜಿಎಫ್ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಎ.ಆನಂದ್ ಹಾಗೂ ಕ್ಯಾಸಂಬಳ್ಳಿ ಸರ್ಕಾರಿ ಶಾಲೆ ಶಿಕ್ಷಕಿ ಜಿ.ಎಸ್.ಪದ್ಮಶ್ರೀ ಅವರ ಪುತ್ರಿ, ಈಗಾಗಲೇ ಐಐಟಿ ಕೋಚಿಂಗ್ ಪಡೆಯುತ್ತಿದ್ದಾರೆ.ಇಬ್ಬರಿಗೆ ಎರಡನೇ ಸ್ಥಾನ

ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ೬೨೧ ಅಂಕಗಳಿಸುವ ಮೂಲಕ ಜಿಲ್ಲೆಗೆ ೨ನೇ ಸ್ಥಾನ ಪಡೆದುಕೊಂಡಿದ್ದು, ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಮೇದಾ ಕೆ.ಎಂ. ಹಾಗೂ ಮುಳಬಾಗಿಲು ಪಟ್ಟಣದ ಸೆಂಟ್‌ಆನ್ಸ್ ಶಾಲೆಯ ಆಯಿಷಾ ಖಾನಂ ಈ ಸಾಧನೆ ಮಾಡಿದ್ದಾರೆ.ಉಳಿದಂತೆ ಮೂವರು ವಿದ್ಯಾರ್ಥಿನಿಯರು ೬೨೦ ಅಂಕಗಳೊಂದಿಗೆ ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡಿದ್ದು, ನಗರ ಹೊರವಲಯದ ಬೆಗ್ಲಿ ಹೊಸಹಳ್ಳಿಯ ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯ ಹೆಚ್.ವಿ.ಹರ್ಷಿತಾ, ಶ್ರೀನಿವಾಪುರ ಪಟ್ಟಣದ ವೇಣು ವಿದ್ಯಾಸಂಸ್ಥೆಯ ಪಿ.ಆರ್.ಸೃಜನಶ್ರೀ ಹಾಗೂ ಮುಳಬಾಗಿಲು ಸೆಂಟ್‌ಆನ್ಸ್ ಶಾಲೆಯ ಜೆ.ಪೂರ್ಣವಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಮುಳಬಾಗಿಲು ಪಟ್ಟಣದ ಅಮರಜ್ಯೋತಿ ಶಾಲೆಯ ಎಸ್.ಧನ್ಯ ಹಾಗೂ ಸುಂದರಪಾಳ್ಯದ ಅಪೋಲೋ ಪಬ್ಲಿಕ್ ಶಾಲೆಯ ಕೆ.ಶೃತಿ ೬೧೯ ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. 618 ಅಂಕ ಪಡೆದ ವಿದ್ಯಾರ್ಥಿಗಳು

ತಾಲ್ಲೂಕಿನ ಮದನಹಳ್ಳಿ ಮೊರಾರ್ಜಿದೇಸಾಯಿ ವಸತಿ ಶಾಲೆಯ ವಸಂತ ಕುಮಾರ್, ಪಿಸಿ ಬಡಾವಣೆ ಸೆಂಟ್‌ಆನ್ಸ್ ಶಾಲೆಯ ಶ್ರೇಯಸ್, ಮುಳಬಾಗಿಲು ಸೆಂಟ್‌ಆನ್ಸ್‌ನ ಆಯಿಷಾಬಾನು ೬೧೮ ಅಂಕಗಳಿಸಿದ್ದು, ಮಾಲೂರಿನ ವಿವೇಕಾನಂದ ಶಾಲೆಯ ವಿವೇಕ್ ಎಂ.ಪಂಚಾಲ್, ಚಿನ್ಮಯ ಶಾಲೆಯ ಎಸ್.ಭೂಮಿಕಾ, ಬೈರವೇಶ್ವರ ಶಾಲೆಯ ಟಿ.ಎಸ್.ಪ್ರಜ್ಞ ೬೧೭ ಅಂಕಗಳೊಂದಿಗೆ ೬ನೇ ಸ್ಥಾನ ಪಡೆದುಕೊಂಡಿದ್ದಾರೆ. 12 ವಸತಿ ಶಾಲೆಗಳಿಗೆ ಶೇ.೧೦೦ ಫಲಿತಾಂಶ

ಮೊರಾರ್ಜಿದೇಸಾಯಿ ವಸತಿ ಶಾಲೆಗಳಾದ ಗಟ್ಟಗುಡಿ, ಮದನಹಳ್ಳಿ,ಮಾಲೂರು,ಗೌನಪಲ್ಲಿ, ಸೋಮಯಾಹಲಪಲ್ಲಿ.ಕೂತಾಂಡ್ಲಹಳ್ಳಿ, ಘಟ್ಟ ಶಾಲೆಗಳಿಗೆ ಶೇ.೧೦೦ ಫಲಿತಾಂಶ ಬಂದಿದೆ. ಉಳಿದಂತೆ ಚಲ್ದಿಗಾನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ,ರೋಣೂರಿನ ಅಂಬೇಡ್ಕರ್ ವಸತಿ ಶಾಲೆ, ಶ್ರೀನಿವಾಸಪುರದ ಏಕಲವ್ಯ ವಸತಿ ಶಾಲೆ,ಕುರುಡುಮಲೆ ಕಿತ್ತೂರು ರಾಣಿ ವಸತಿ ಶಾಲೆಗಳಿಗೆ ಶೇ.೧೦೦ ಫಲಿತಾಂಶ ಬಂದಿದೆ.

ಸರ್ಕಾರಿ ಶಾಲೆಗಳು ಶೇ.೧೦೦ ಸಾಧನೆ

ಶೇ.೧೦೦ ಸಾಧನೆಯಲ್ಲಿ ಸರ್ಕಾರಿ ಶಾಲೆಗಳು ಮುಂಚೂಣಿಯಲ್ಲಿದ್ದು, ಇಮರಕುಂಟೆ ಸರ್ಕಾರಿ ಪ್ರೌಢಶಾಲೆ, ತಾಡಿಗೋಳು ಸರ್ಕಾರಿ ಪ್ರೌಢಶಾಲೆ, ಶ್ರೀನಿವಾಸಪುರ ಪಟ್ಟಣದ ರಂಗಾರಸ್ತೆ ಸರ್ಕಾರಿ ಪಿಯು ಕಾಲೇಜು, ಪುಲುಗೂರುಕೋಟೆ ಸರ್ಕಾರಿ ಪ್ರೌಢಶಾಲೆಗಳು ಶೇ.೧೦೦ ಸಾಧನೆ ಮಾಡಿ ಗಮನ ಸೆಳೆದಿವೆ.ಶೂನ್ಯ ಸಾಧನೆಯನ್ನು ಜಿಲ್ಲೆಯ ಯಲ್ದೂರಿನ ಶ್ರೀನಿವಾಸ ಪಬ್ಲಿಕ್ ಶಾಲೆ, ಕೆಜಿಎಫ್‌ನ ನಾಚಪಲ್ಲಿಯ ವಿಶ್ವೇಶ್ವರಯ್ಯ ಮೆಮೊರಿಯಲ್ ಶಾಲೆ ಶೂನ್ಯ ಸಾಧನೆ ಮಾಡಿವೆ ಎಂದು ತಿಳಿಸಿದ್ದಾರೆ.