ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಾಂಸ್ಕೃತಿಕ ಹಬ್ಬ ಕಲೋತ್ಸವ - 2026 ಕ್ಕೆ ಈಗಾಗಲೇ ವೇದಿಕೆ ಸಜ್ಜಾಗಿದ್ದು ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ ಲಿಂಗೇಗೌಡರವರು ಕಲೋತ್ಸವ - 2026ರ ಲೋಗೋವನ್ನು ಬಿಡುಗಡೆಗೊಳಿಸುವುದರ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ತುಮಕೂರುಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಾಂಸ್ಕೃತಿಕ ಹಬ್ಬ ಕಲೋತ್ಸವ - 2026 ಕ್ಕೆ ಈಗಾಗಲೇ ವೇದಿಕೆ ಸಜ್ಜಾಗಿದ್ದು ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ ಲಿಂಗೇಗೌಡರವರು ಕಲೋತ್ಸವ - 2026ರ ಲೋಗೋವನ್ನು ಬಿಡುಗಡೆಗೊಳಿಸುವುದರ ಮೂಲಕ ಚಾಲನೆ ನೀಡಿದರು. ನಗರದ ಎಸ್‌ಎಸ್‌ಐಟಿ ಕಾಲೇಜ್‌ನ ಸರ್. ಎಂ.ವಿ. ಬ್ಲಾಕ್‌ನ ಆವರಣದಲ್ಲಿ ಕಲೋತ್ಸವ 2026 ರ ಲೋಗೋ ಲಾಂಚ್ ಮಾಡಿ ಮಾತನಾಡಿದ ಅವರು ಕಲೋತ್ಸವ ಎಂಬ ಹೆಸರು ಎಸ್‌ಎಸ್‌ಐಟಿ ಕಾಲೇಜಿನ ಬ್ರಾಂಡ್ ಆಗಿದ್ದು ಈ ಕಾರ್ಯಕ್ರಮ ಕ್ಯಾಂಪಸ್ ನ ಒಂದು ಬಹುದೊಡ್ಡ ಸಾಂಸ್ಕೃತಿಕ ಹಬ್ಬವಾಗಿದೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎರಡು ತಂಡಗಳಾದ ಐಕ್ಯ ಮತ್ತು ಸಂಸ್ಕೃತಿ ತಂಡಗಳ ಸ್ಪರ್ಧೆ ಎಂಥವರನ್ನೂ ರೋಮಾಂಚನಗೊಳಿಸುತ್ತದೆ. ಪ್ರತಿಯೊಬ್ಬರೂ ಈ ಕಲೋತ್ಸವ 2026 ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯ ಅನಾವರಣಗೊಳಿಸಿ ಎಂದು ಹೇಳಿದರು. ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಮಹಾಂತೇಶ್ ಎಂ. ನಡಕಟ್ಟಿ ಮಾತನಾಡಿ, ಕಲೋತ್ಸವ ವಿದ್ಯಾಥಿಗಳ ಪ್ರತಿಭಾ ಪ್ರದರ್ಶನಕ್ಕೆ ನಡೆಸಲಾಗುವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ತಮ್ಮ ಪ್ರತಿಭೆಯ ಪ್ರದರ್ಶನವನ್ನು ಮಾಡುವುದರ ಮೂಲಕ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಲೋತ್ಸವ 2026ರ ಪೋಸ್ಟರ್ ಬಿಡುಗಡೆಗೊಳಿಸುವುದರ ಜೊತೆಗೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಟ್ರೋಫಿ ಕಫ್ ಅನ್ನು ಬಿಡುಗಡೆ ಮಾಡಿದರು. ಈ ವೇಳೆ ವಿದ್ಯಾರ್ಥಿಗಳಿಂದ ನೃತ್ಯ, ಸಂಗೀತ, ಫ್ಯಾಷನ್, ಶೋಗಳ ಒಂದು ಝಲಕ್ ಅನ್ನು ಕಾಲೇಜಿನ ಎರಡೂ ತಂಡಗಳು ಪ್ರದರ್ಶಿಸಿ ಗಮನ ಸೆಳೆದರು. ಕಲೋತ್ಸವ ಇದೇ ತಿಂಗಳ 27 ಮತ್ತು 28 ರಂದು ಅದ್ಧೂರಿಯಾಗಿ ನಡೆಯಲಿದ್ದು, ಈಗಾಗಲೇ ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಅಕಾಡೆಮಿಕ್ ಡೀನ್ ಡಾ. ರೇಣುಕಾಲತಾ, ಈ ಬಾರಿಯ ಕಲೋತ್ಸವ ಉಸ್ತುವಾರಿಗಳಾದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಪ್ರದೀಪ್, ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.