ಸಾರಾಂಶ
ರಾಮನಗರ: ಶಾಲಾ ಶಿಕ್ಷಣ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ರಾಮನಗರ ಜಿಲ್ಲೆ ಶೇ.63.12ರಷ್ಟು ಫಲಿತಾಂಶ ಲಭಿಸಿದ್ದು, ರಾಜ್ಯದಲ್ಲಿ 24ನೇ ಸ್ಥಾನ ಪಡೆದುಕೊಂಡಿದೆ.
ಜಿಲ್ಲೆಯ ನಾಲ್ಕು ತಾಲೂಕಿನಿಂದ ಒಟ್ಟು 12,090 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 7,631 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.63.12ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ.2023ರಲ್ಲಿ ಶೇ.89.90ರಷ್ಟು ಫಲಿತಾಂಶವನ್ನು ದಾಖಲು ಮಾಡಿದ್ದ ಜಿಲ್ಲೆ, 2024ರಲ್ಲಿ ಶೇ.71.16ರಷ್ಟು ಫಲಿತಾಂಶ ಪಡೆದು ಕುಸಿತ ಕಂಡು ರಾಜ್ಯದಲ್ಲಿ 26ನೇ ಸ್ಥಾನ ಪಡೆದಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ.8.04ರಷ್ಟು ಕಡಿಮೆ ಫಲಿತಾಂಶ ಬಂದಿದ್ದರೂ 24ನೇ ಸ್ಥಾನ ಅಲಂಕರಿಸಿದೆ.
ರಾಮನಗರ ತಾಲೂಕಿನಲ್ಲಿ 3209 ಮಂದಿಯಲ್ಲಿ 2099 (ಶೇ.65), ಚನ್ನಪಟ್ಟಣ ತಾಲೂಕಿನಲ್ಲಿ 2820 ಮಂದಿಯಲ್ಲಿ 1727 (ಶೇ.60.10), ಕನಕಪುರ ತಾಲೂಕಿನಲ್ಲಿ 3674 ಮಂದಿ ಪೈಕಿ 2131 (ಶೇ.58) ಹಾಗೂ ಮಾಗಡಿ ತಾಲೂಕಿನಲ್ಲಿ 2387 ಮಂದಿಯಲ್ಲಿ 1674 (ಶೇ.70) ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಗ್ರೇಡ್ ಮಾದರಿ ಹಾಗೂ ಗುಣಾತ್ಮಕ ವಿಧಾನದ ಮೂಲಕ ಫಲಿತಾಂಶ ಪ್ರಕಟಿಸಲಾಗಿದ್ದು, ಇದರಲ್ಲಿ 570 ವಿದ್ಯಾರ್ಥಿಗಳು ಎ+ ಶ್ರೇಣಿ, 1205 ವಿದ್ಯಾರ್ಥಿಗಳು ಎ ಶ್ರೇಣಿ , 1538 ಮಂದಿ ಬಿ + ಶ್ರೇಣಿ , 1955 ವಿದ್ಯಾರ್ಥಿಗಳು ಬಿ ಶ್ರೇಣಿ, 1921 ಮಂದಿ ಸಿ + ಶ್ರೇಣಿ ಹಾಗೂ 397 ವಿದ್ಯಾರ್ಥಿಗಳು ಸಿ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಬಾಲಕಿಯರ ಮೇಲುಗೈ :ಈ ಬಾರಿಯೂ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 5805 ಬಾಲಕರ ಪೈಕಿ 3122 ಮಂದಿ ಉತ್ತೀರ್ಣರಾಗಿ ಶೇ.53.79 ಹಾಗೂ 6285 ಬಾಲಕಿಯರ ಪೈಕಿ 4509 ಮಂದಿ ತೇರ್ಗಡೆಯಾಗಿ ಶೇ.71.77ರಷ್ಟು ಫಲಿತಾಂಶ ಗಳಿಸಿದ್ದಾರೆ.
ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಮುಂದು:ಪರೀಕ್ಷೆ ಬರೆದವರ ಪೈಕಿ ಮಾಧ್ಯಮವಾರು ಅಂಕಿ ಅಂಶದಲ್ಲಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾದರೆ, ಉರ್ದು ಮಾಧ್ಯಮ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹಾಜರಾದ 5960 ವಿದ್ಯಾರ್ಥಿಗಳ ಪೈಕಿ 3259 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.54.60ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ. ಆಂಗ್ಲ ಮಾಧ್ಯಮ ಪಡೆದು ಪರೀಕ್ಷೆಗೆ ಹಾಜರಾದ 6040 ವಿದ್ಯಾರ್ಥಿಗಳ ಪೈಕಿ 4324 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಒಟ್ಟು 71.58ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ. ಜತೆಗೆ, ಉರ್ದು ಮಾಧ್ಯಮ 90 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 48 ಮಂದಿ ಮಾತ್ರ ಉತ್ತೀರ್ಣರಾಗುವ ಮೂಲಕ ಶೇ.53.33ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ.
ಖಾಸಗಿ ಶಾಲೆ ಮುಂದು:ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಫಲಿತಾಂಶದ ಪೈಕಿ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳಲ್ಲಿ 3990 ವಿದ್ಯಾರ್ಥಿಗಳ ಪೈಕಿ 2893 ಮಂದು ಉತ್ತೀರ್ಣರಾಗಿ ಶೇ.72.50ರಷ್ಟು ದಾಖಲು ಮಾಡಿದರೆ, ಸರ್ಕಾರಿ ಶಾಲೆಗಳಲ್ಲಿ 5134 ವಿದ್ಯಾರ್ಥಿಗಳ ಪೈಕಿ 3155 ಮಂದಿ ತೇರ್ಗಡೆಯಾಗಿ ಶೇ.61.45 ಹಾಗೂ ಅನುದಾನಿತ ಶಾಲೆಗಳಲ್ಲಿ 2966 ವಿದ್ಯಾರ್ಥಿಗಳಲ್ಲಿ 1583 ಮಂದಿ ಪಾಸಾಗಿ ಶೇ.53.37ರಷ್ಟು ಫಲಿತಾಂಶವನ್ನು ದಾಖಲು ಮಾಡಿದೆ.
ಇನ್ನು ಈ ಬಾರಿ ಎಸ್ಸೆಸ್ಸೆಲ್ಸಿಯ ಆರು ವಿಷಯಗಳಲ್ಲಿಯು ಶೇ.70ರಷ್ಟು ಮೇಲ್ಪಟ್ಟು ಫಲಿತಾಂಶವನ್ನು ದಾಖಲು ಮಾಡಿವೆ. ಪ್ರಥಮ ಭಾಷೆ ಶೇ.77.81, ದ್ವಿತೀಯ ಭಾಷೆ ಶೇ.78.89, ತೃತೀಯ ಭಾಷೆ ಶೇ.78.66, ಗಣಿತ ಶೇ.74.04, ವಿಜ್ಞಾನ ಶೇ.73.80 ಹಾಗೂ ಸಮಾಜ ವಿಜ್ಞಾನ ಶೇ.75.87 ರಷ್ಟು ಫಲಿತಾಂಶವನ್ನು ದಾಖಲು ಮಾಡಿದೆ.ಬಾಕ್ಸ್ .................
ಜಿಲ್ಲೆಯ ಟಾಪರ್ಸ್:ಮಾಗಡಿ ಪಟ್ಟಣದ ವಾಸವಿ ವಿದ್ಯಾನಿಕೇತನ ಶಾಲೆ ವಿದ್ಯಾರ್ಥಿನಿ ಟಿ.ಎಚ್.ಯಶಿಕಾ 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮಾಗಡಿ ತಾಲೂಕು ಕುದೂರು ಗ್ರಾಮದ ಗುರುಕಲ ವಿದ್ಯಾಮಂದಿರ ಯುವನಶ್ರೀ 623 ಅಂಕ ಪಡೆದು ದ್ವಿತೀಯ, ಮಾಗಡಿಯ ವಾಸವಿ ವಿದ್ಯಾನಿಕೇತನ ಶಾಲೆಯ ಜಿ.ಎಸ್.ಆದಿತ್ಯ ಶಮೀತ್ 622 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಮಾಗಡಿ ವಿದ್ಯಾನಿಕೇತನ ಶಾಲೆಯ ಡಿ.ಜಿ.ರಚನಾ 621, ರಾಮನಗರ ತಾಲೂಕು ಮಾಯಗಾನಹಳ್ಳಿ ಶಿವಗಂಗಾ ಪಬ್ಲಿಕ್ ಶಾಲೆಯ ಸಿ.ಕುಶಾಲ್ ಗೌಡ 620, ಚನ್ನಪಟ್ಟಣ ತಾಲೂಕು ಶೆಟ್ಟಿಹಳ್ಳಿ ಮತ್ತಿಕೆರೆ ಸರ್ಕಾರಿ ಆದರ್ಶ ವಿದ್ಯಾಲಯದ ಸಿ.ಎಸ್. ಹಂಸಿನಿ 620, ಸೇಂಟ್ ಮೈಕಲ್ಸ್ ಇಂಗ್ಲಿಷ್ ಶಾಲೆಯ ಜಿ.ಲಕ್ಷ್ಯ 619, ಕನಕಪುರ ತಾಲೂಕು ಶ್ರೀ ಕಾಲಭೈರವೇಶ್ವರ ಪ್ರೌಢಶಾಲೆ ವಿ.ಪ್ರಣತಿ 619, ಪ್ರಗತಿ ವಿದ್ಯಾನಿಕೇತನ ಪ್ರೌಢಶಾಲೆಯ ಜಿ.ರಚನಾ 619, ಮಾಗಡಿ ತಾಲೂಕು ಕುದೂರು ಗ್ರಾಮದ ಗುರುಕುಲ ವಿದ್ಯಾಮಂದಿರದ ಇ.ರೇವಂತ 619 ಅಂಕ ಪಡೆದು ಟಾಪ್ 10ನಲ್ಲಿ ಸ್ಥಾನ ಪಡೆದಿದ್ದಾರೆ.