ಕನ್ನಡಪ್ರಭ ವಾರ್ತೆ ಕೋಲಾರವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಮಯ ಪಾಲನೆಯೊಂದಿಗೆ ಕ್ರಮಬದ್ಧ, ವಿದ್ಯಾರ್ಥಿಸ್ನೇಹಿ ಮೌಲ್ಯಮಾಪನ ನಡೆಸಿ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಜಂಟಿ ಹಾಗೂ ಉಪ ಮೌಲ್ಯಮಾಪಕರು, ಕೇಂದ್ರ ವ್ಯವಸ್ಥಾಪಕರಿಗೆ ಕರೆ ನೀಡಿದ ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಏ.೮ ರಿಂದ ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನ ಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿಸಿದರು. ಮಂಗಳವಾರ ನಗರದ ವಿವಿಧ ಮೌಲ್ಯಮಾಪನ ಕೇಂದ್ರಗಳಲ್ಲಿ ಜಂಟಿ ಹಾಗೂ ಉಪ ಮೌಲ್ಯಮಾಪಕರು, ಜಿಲ್ಲಾಮಟ್ಟದ ಕಂಪ್ಯೂಟರ್ ಪ್ರೋಗ್ರಾಮರ್‌ಗಳು ಮೌಲ್ಯಮಾಪನ ಕಾರ್ಯದಲ್ಲಿ ಅನುಸರಿಸಬೇಕಾದ ನಿಯಮಗಳ ಪಾಲನೆ, ಅಂಕಗಳ ನೀಡಿಕೆ ಕುರಿತು ಅರಿವು ಮೂಡಿಸಿ ಮಾತನಾಡಿದರು.ಈ ಬಾರಿಯೂ ನೀವೇ ಗಣಕಯಂತ್ರದಲ್ಲಿ ಆನ್‌ಲೈನ್‌ನಲ್ಲಿ ದಾಖಲಿಸಬೇಕಾಗಿದೆ, ಪ್ರತಿ ವಿದ್ಯಾರ್ಥಿಯ ಭವಿಷ್ಯ ಅಡಗಿರುವ ಈ ಮೌಲ್ಯಮಾಪನ ಕಾರ್ಯದಲ್ಲಿ ಉಪ ಮುಖ್ಯ ಮೌಲ್ಯಮಾಪಕರು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು, ಸಹ ಮೌಲ್ಯಮಾಪಕರು ಮೌಲ್ಯಮಾಪನ ನಡೆಸಿದ ಉತ್ತರ ಪತ್ರಿಕೆಗಳನ್ನು ಅಡ್ಡ ಪರಿಶೀಲನೆ ನಡೆಸಬೇಕು, ತಪ್ಪುಗಳು ಮಾಡಿದರೆ ದಂಡ ತೆರಬೇಕಾಗುತ್ತದೆ ಎಂದು ತಿಳಿಸಿದರು.ಕರ್ನಾಟಕ ಶಿಕ್ಷಣ ಕಾಯಿದೆ ೨೮ ಹಾಗೂ ೧೨೬ ರ ಅನ್ವಯ ಹಾಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿಯಮಗಳು-೨೦೧೨ರಂತೆ ಮೌಲ್ಯಮಾಪನ ಕಾರ್ಯವನ್ನು ಕಡ್ಡಾಯಗೊಳಿಸಲಾಗಿದೆ ಸಕಾರಣವಿಲ್ಲದೇ ಮೌಲ್ಯಮಾಪನ ಕಾರ್ಯಕ್ಕೆ ಗೈರಾಗುವ ಶಿಕ್ಷಕರ ವಿರುದ್ದ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.೧೮೩೩ ಮಂದಿಯಿಂದ ಮೌಲ್ಯಮಾಪನ ಕಾರ್ಯ
ನಗರದ ಆರು ಮೌಲ್ಯಮಾಪನ ಕೇಂದ್ರಗಳಲ್ಲಿ ೬ ಜಂಟಿ ಮುಖ್ಯ ಮೌಲ್ಯಮಾಪಕರು, ೬ ಮಂದಿ ವ್ಯವಸ್ಥಾಪಕರು ಸೇರಿದಂತೆ ೨೫೧ ಉಪ ಮುಖ್ಯಮೌಲ್ಯಮಾಪಕರು, ೧೫೭೦ ಮಂದಿ ಸಹ ಮೌಲ್ಯಮಾಪಕರು ಕಾರ್ಯನಿರ್ವಹಿಸುವರು ಎಂದು ತಿಳಿಸಿದರು. ಡಿಕೋಡಿಂಗ್ ಇಂದು:ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಶಂಕರೇಗೌಡ ಮಾತನಾಡಿ, ಡಿಕೋಡಿಂಗ್ ಮತ್ತಿತರ ಸಿದ್ದತೆಗಳನ್ನು ಜಂಟಿ ಹಾಗೂ ಉಪ ಮುಖ್ಯ ಮೌಲ್ಯಮಾಪಕರು ಮಂಗಳವಾರ ಮಾಡಲಿದ್ದು, ಏ.೮ ರಿಂದ ಎಲ್ಲಾ ಸಹ ಮೌಲ್ಯಮಾಪಕರು ಹಾಜರಾಗುವ ಮೂಲಕ ಪೂರ್ಣಪ್ರಮಾಣದಲ್ಲಿ ಅಂದೇ ಮೌಲ್ಯಮಾಪನಕ್ಕೆ ಚಾಲನೆ ಸಿಗಲಿದೆ ಎಂದರು.ಮೊಬೈಲ್ ಬಳಕೆ ನಿಷೇಧ:ಮೌಲ್ಯಮಾಪನ ಕೇಂದ್ರದಲ್ಲಿ ಮೊಬೈಲ್ ಬಳಸುವುದನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಎಂದು ತಿಳಿಸಿದ ಅವರು, ಅಂತಹ ದೂರುಗಳು ಕಂಡು ಬಂದಲ್ಲಿ ಶಿಕ್ಷಕರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಂಟಿ ಮುಖ್ಯ ಪರೀಕ್ಷಕರಾಗಿ ಕನ್ನಡಕ್ಕೆ ಕೆ.ಗಣೇಶಯ್ಯ, ಇಂಗ್ಲೀಷ್‌ಗೆ ಫರೀದಾಖಾನಂ, ಹಿಂದಿಗೆ ರೆಹನಾಬೇಗಂ, ಗಣಿತಕ್ಕೆ ಸವಿತಾಶರ್ಲಿನ್ ಚಾರ್ಲ್ಸ್, ವಿಜ್ಞಾನಕ್ಕೆ ಎಂ.ಎಸ್.ಶ್ರೀನಿವಾಸಗೌಡ ಸಮಾಜವಿಜ್ಞಾನಕ್ಕೆ ಕೆ.ಬಿ.ನಾರಾಯಣಸ್ವಾಮಿ, ನೇಮಿಸಲಾಗಿದ್ದು, ಗಣಕ ಯಂತ್ರ ವಿಭಾಗದ ಉಸ್ತುವಾರಿಯಾಗಿ ಡಿಡಿಪಿಐ ಕಚೇರಿಯ ವೇಣು ನೇಮಕಗೊಂಡಿದ್ದಾರೆ ಎಂದು ತಿಳಿಸಿದರು.