ಸಾರಾಂಶ
ಕೆ.ಆರ್.ಪೇಟೆ : ತಾಲೂಕಿನ 6 ಕೇಂದ್ರಗಳಲ್ಲಿ 2967 ಮಂದಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ತಿಳಿಸಿದ್ದಾರೆ.
ತಾಲೂಕಿನ 59 ಪ್ರೌಢಶಾಲೆಗಳ 1529 ವಿದ್ಯಾರ್ಥಿನಿಯರು, 1438 ವಿದ್ಯಾರ್ಥಿಗಳು ಸೇರಿ ಒಟ್ಟಾರೆ 2967 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇದಕ್ಕಾಗಿ ಪಟ್ಟಣದಲ್ಲಿ ಎರಡು, ಸಂತೇಬಾಚಹಳ್ಳಿ, ಕಿಕ್ಕೇರಿ, ಅಕ್ಕಿಹೆಬ್ಬಾಳು, ಬೂಕನಕೆರೆ ಸೇರಿದಂತೆ ಆರು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಸಿಸಿಟಿವಿಯನ್ನು ಅಳವಡಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವೆಬ್‌ಕ್ಯಾಸ್ಟಿಂಗ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ರೀಕ್ಷಾ ಕೇಂದ್ರಗಳ ಕಾರ್ಯ ಚಟುವಟಿಕೆಗಳನ್ನು ತಾಲೂಕು, ಜಿಲ್ಲಾ ಹಾಗೂ ರಾಜ್ಯದ ಹಂತದಲ್ಲಿಯೂ ಸಹ ವೀಕ್ಷಣೆ ಮಾಡಲು ತಾಲೂಕು ಹಂತದಲ್ಲಿ ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಲಾಗಿದೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಸ್ಥಾನಿಕ ಜಾಗೃತ ದಳದ ಸಿಬ್ಬಂದಿ ಹಾಗೂ ಅನ್ಯ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಯನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ತಾಲೂಕು ಹಂತದಲ್ಲಿ ತಹಸೀಲ್ದಾರ್ , ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಿಚಕ್ಷಣ ದಳ ನೇಮಿಸಲಾಗಿದೆ ಎಂದು ತಿಳಿಸಿದರು.ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದ ಭದ್ರತೆಗಾಗಿ ಆರಕ್ಷಕ ಸಿಬ್ಬಂದಿ ಹಾಗೂ ಮಕ್ಕಳ ಆರೋಗ್ಯ ಕಾಳಜಿಗಾಗಿ ಆರೋಗ್ಯ ಶುಶ್ರೂಷಕರನ್ನು ನಿಯೋಜಿಸಲಾಗಿದೆ ಎಂದರು.
ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಸುಲಲಿತವಾಗಿ ಪರೀಕ್ಷೆ ಬರೆಯಲು ಸೂಕ್ತೋಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಡಿಜಿಟಲ್ ಸ್ಮಾರ್ಟ್ ಕೈಗಡಿಯಾರಗಳನ್ನು ಧರಿಸುವಂತಿಲ್ಲ. ಪರೀಕ್ಷೆಯನ್ನು ಸುಗಮ ಹಾಗೂ ಮುಕ್ತ, ಪಾರದರ್ಶಕವಾಗಿ ನಡೆಸಲು ಶಿಕ್ಷಣ ಇಲಾಖೆ ಸರ್ವ ರೀತಿಯಲ್ಲೂ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ತಿಳಿಸಿದರು.