ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನವೇ 329 ಗೈರು!

| Published : Mar 26 2024, 01:00 AM IST

ಸಾರಾಂಶ

ರಾಜ್ಯಾದ್ಯಂತ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸೋಮವಾರ ಆರಂಭವಾದವು. ಮೊದಲ ದಿನವಾದ ಸೋಮವಾರ ಪ್ರಥಮ ಭಾಷೆ ಪರೀಕ್ಷೆ ನಡೆದಿದ್ದು, ನೋಂದಣಿ ಮಾಡಿಕೊಂಡ ಒಟ್ಟು 28,866 ವಿದ್ಯಾರ್ಥಿಗಳ ಪೈಕಿ 329 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ಆರಂಭವಾಗಿದೆ. ಮೊದಲ ದಿನವಾದ ಸೋಮವಾರ ಪ್ರಥಮ ಭಾಷೆ ಪರೀಕ್ಷೆ ನಡೆದಿದ್ದು, ನೋಂದಣಿ ಮಾಡಿಕೊಂಡ ಒಟ್ಟು 28,866 ವಿದ್ಯಾರ್ಥಿಗಳ ಪೈಕಿ 329 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.ಬಂಟ್ವಾಳದಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡ 5,776 ವಿದ್ಯಾರ್ಥಿಗಳ ಪೈಕಿ 80 ಮಂದಿ ಗೈರು ಹಾಜರಾಗಿದ್ದರೆ, ಬೆಳ್ತಂಗಡಿಯಲ್ಲಿ 3,843ರಲ್ಲಿ 30 ವಿದ್ಯಾರ್ಥಿಗಳು ಗೈರಾಗಿದ್ದರು. ಮಂಗಳೂರು ಉತ್ತರದಲ್ಲಿ 5,543ರ ಪೈಕಿ 53, ಮಂಗಳೂರು ದಕ್ಷಿಣದಲ್ಲಿ 5,188 ಪೈಕಿ 48, ಮೂಡುಬಿದಿರೆಯಲ್ಲಿ 1,889ರ ಪೈಕಿ 12, ಪುತ್ತೂರಿನಲ್ಲಿ 4,732 ಪೈಕಿ 45, ಸುಳ್ಯದಲ್ಲಿ ನೋಂದಣಿ ಮಾಡಿದ 1,895 ವಿದ್ಯಾರ್ಥಿಗಳಲ್ಲಿ 61 ಮಂದಿ ಗೈರು ಹಾಜರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಜಿಲ್ಲೆಯ ಒಟ್ಟು 88 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷಾ ಕಾರ್ಯಕ್ಕಾಗಿ ಒಟ್ಟು 1588 ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಜತೆಗೆ 88 ಮುಖ್ಯ ಅಧೀಕ್ಷಕರು, 42 ಉಪ ಮುಖ್ಯ ಅಧೀಕ್ಷಕರು, 88 ಮೊಬೈಲ್ ಜಫ್ತುದಾರರು ಮತ್ತು ಇತರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ಸಿಸಿಟಿವಿ ಕ್ಯಾಮೆರಾ, ಆಸನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.ಉಡುಪಿ ಜಿಲ್ಲೆಯಲ್ಲಿ 95 ಮಂದಿ ಗೈರು

ಉಡುಪಿ ಜಿಲ್ಲಾದ್ಯಂತ ಸೋಮವಾರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗಳು ಆರಂಭಗೊಂಡಿದ್ದು, ಮೊದಲ ದಿನ ಕನ್ನಡ ಭಾಷಾ ಪರೀಕ್ಷೆಯಲ್ಲಿ ಒಟ್ಟು 95 ಮಂದಿ ಗೈರು ಹಾಜರಾಗಿದ್ದರು.

ಜಿಲ್ಲೆಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ 13,701 ಜನ ಪರೀಕ್ಷೆ ತೆಗೆದುಕೊಂಡಿದ್ದು, ಅವರಲ್ಲಿ 13606 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಬೈಂದೂರು ತಾಲೂಕಿನಲ್ಲಿ ಒಟ್ಟು 2055 ವಿದ್ಯಾರ್ಥಿಗಳು ನೋಂದಾಯಿಸಿ, 2046 ಹಾಜರಾಗಿ, 9 ವಿದ್ಯಾರ್ಥಿಗಳು ಗೈರಾಗಿದ್ದರು. ಕುಂದಾಪುರ ತಾಲೂಕಿನಲ್ಲಿ 2683 ವಿದ್ಯಾರ್ಥಿಗಳು ನೋಂದಾಯಿಸಿದ್ದು, 2666 ಪರೀಕ್ಷೆಗೆ ಹಾಜರಾಗಿ, 17 ಮಂದಿ ಗೈರು, ಕಾರ್ಕಳ ತಾಲೂಕಿನಲ್ಲಿ 2675 ಮಂದಿ ಪರೀಕ್ಷೆಗೆ ನೋಂದಾಯಿಸಿ, 2657 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 18 ಜನ ಗೈರು, ಬ್ರಹ್ಮಾವರ ತಾಲೂಕಿನಲ್ಲಿ 2759 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 2727 ಮಂದಿ ಪರೀಕ್ಷೆ ಬರೆದಿದ್ದು, 32 ಜನ ಗೈರು ಹಾಗೂ ಉಡುಪಿ ತಾಲೂಕಿನಲ್ಲಿ 3529 ಮಂದಿ ಪರೀಕ್ಷೆಗೆ ನೋಂದಾಯಿಸಿ, 3510 ಜನ ಹಾಜರಾಗಿ, 19 ಗೈರುಹಾಜರಾಗಿದ್ದರು.

* ಪರೀಕ್ಷೆಗೆ ಸಹಾಯ

ವಿಶೇಷ ಎಂದರೆ ಉಡುಪಿ ನಗರದ ನಿಟ್ಟೂರು ಹೈಸ್ಕೂಲಿನ ಮಾನಸಿಕ ವಿಕಲಚೇತನ ವಿದ್ಯಾರ್ಥಿನಿ ಮಧು ಕಂಕನವಾಡಿ ಪರವಾಗಿ 9ನೇ ತರಗತಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಪರೀಕ್ಷೆ ಬರೆದರೆ, ಭಾನುವಾರವಷ್ಟೆ ಬಿದ್ದು ತೀವ್ರತರವಾಗಿ ಗಾಯಗೊಂಡಿದ್ದ ಪರ್ಕಳ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನ ವಿದ್ಯಾರ್ಥಿನಿ ಭವಿಷ್ಯ ಅವರು ಸ್ತುತಿ ಶೆಟ್ಟಿ ಸಹಾಯದಿಂದ ಪರೀಕ್ಷೆ ಬರೆದಿದ್ದಾರೆ.

ನಗರದ ಮಣಿಪಾಲ ಜೂನಿಯರ್ ಕಾಲೇಜಿಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಿಡಿಪಿಐ ಗಣಪತಿ, ಶಿಕ್ಷಣಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಇತರರು ಉಪಸ್ಥಿತರಿದ್ದರು.