ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ದ.ಕ.ದಲ್ಲಿ 30,348 ವಿದ್ಯಾರ್ಥಿಗಳು

| Published : Mar 25 2024, 12:47 AM IST

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ದ.ಕ.ದಲ್ಲಿ 30,348 ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬಂಟ್ವಾಳದಲ್ಲಿ 17 ಪರೀಕ್ಷಾ ಕೇಂದ್ರಗಳಿದ್ದರೆ, ಬೆಳ್ತಂಗಡಿಯಲ್ಲಿ 13, ಮಂಗಳೂರು ಉತ್ತರದಲ್ಲಿ 18, ಮಂಗಳೂರು ದಕ್ಷಿಣದಲ್ಲಿ 16, ಮೂಡುಬಿದಿರೆಯಲ್ಲಿ 5, ಪುತ್ತೂರಿನಲ್ಲಿ 13 ಸೇರಿದಂತೆ 88 ಪರೀಕ್ಷಾ ಕೇಂದ್ರಗಳಿವೆ ಎಂದು ಡಿಡಿಪಿಐ ವೆಂಕಟೇಶ್ ಎಸ್. ಪಟಗಾರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ದಕ್ಷಿಣ ಕನ್ನಡದಲ್ಲಿ ಒಟ್ಟು 30,348 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 27,663 ಸಾಮಾನ್ಯ ವಿದ್ಯಾರ್ಥಿಗಳು, 1053 ಖಾಸಗಿ ಅಭ್ಯರ್ಥಿಗಳು, 1632 ಪುನರಾವರ್ತಿತ ಅಭ್ಯರ್ಥಿಗಳು. ಬಂಟ್ವಾಳ ತಾಲೂಕಿನಲ್ಲಿ 6123 ವಿದ್ಯಾರ್ಥಿಗಳು, ಬೆಳ್ತಂಗಡಿ- 4035, ಮಂಗಳೂರು ಉತ್ತರ- 5810, ಮಂಗಳೂರು ದಕ್ಷಿಣ- 5452, ಮೂಡುಬಿದಿರೆ- 1948, ಪುತ್ತೂರು- 4995, ಸುಳ್ಯದಲ್ಲಿ 1985 ವಿದ್ಯಾರ್ಥಿಗಳಿದ್ದಾರೆ.

88 ಪರೀಕ್ಷಾ ಕೇಂದ್ರಗಳು:

ಬಂಟ್ವಾಳದಲ್ಲಿ 17 ಪರೀಕ್ಷಾ ಕೇಂದ್ರಗಳಿದ್ದರೆ, ಬೆಳ್ತಂಗಡಿಯಲ್ಲಿ 13, ಮಂಗಳೂರು ಉತ್ತರದಲ್ಲಿ 18, ಮಂಗಳೂರು ದಕ್ಷಿಣದಲ್ಲಿ 16, ಮೂಡುಬಿದಿರೆಯಲ್ಲಿ 5, ಪುತ್ತೂರಿನಲ್ಲಿ 13 ಸೇರಿದಂತೆ 88 ಪರೀಕ್ಷಾ ಕೇಂದ್ರಗಳಿವೆ ಎಂದು ಡಿಡಿಪಿಐ ವೆಂಕಟೇಶ್ ಎಸ್. ಪಟಗಾರ ತಿಳಿಸಿದ್ದಾರೆ.

ಪರೀಕ್ಷಾ ಕಾರ್ಯಕ್ಕಾಗಿ ಒಟ್ಟು 1588 ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಇದರೊಂದಿಗೆ 88 ಮುಖ್ಯ ಅಧೀಕ್ಷಕರು, 42 ಉಪ ಮುಖ್ಯ ಅಧೀಕ್ಷಕರು, 88 ಮೊಬೈಲ್ ಜಫ್ತುದಾರರು ಮತ್ತು ಇತರರು ಕಾರ್ಯ ನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ಸಿಸಿಟಿವಿ ಕ್ಯಾಮೆರಾ, ಆಸನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಪರೀಕ್ಷಾ ಕೇಂದ್ರಗಳನ್ನು ತಲುಪಲು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಎಲ್ಲ ಉಪ ಖಜಾನೆ ಅಧಿಕಾರಿಗಳು ಖಜಾನೆಯಿಂದ ಪ್ರತಿನಿತ್ಯ ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಜಿಲ್ಲಾ ಮತ್ತು ತಾಲೂಕು ಖಜಾನೆ ಅಧಿಕಾರಿಗಳು ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿ ಪ್ರತಿನಿತ್ಯ ಮಂಗಳೂರಿನ ಕಪಿತಾನಿಯೊ ಪ್ರೌಢಶಾಲೆಯಲ್ಲಿರುವ ಜಿಲ್ಲಾ ಸುರಕ್ಷತಾ ಕೊಠಡಿಗೆ ಸಾಗಿಸಲಿದ್ದಾರೆ.