ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ವಿದ್ಯಾರ್ಥಿಗಳೇ ಆಲ್ ದಿ ಬೆಸ್ಟ್‌

| Published : Mar 21 2025, 12:36 AM IST

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ವಿದ್ಯಾರ್ಥಿಗಳೇ ಆಲ್ ದಿ ಬೆಸ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ 12,585 ಬಾಲಕರು, 12,151 ಬಾಲಕಿಯರು ಸೇರಿ ಒಟ್ಟು 24,736 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಕ್ರವಾರದಿಂದ ಆರಂಭಗೊಳ್ಳುತ್ತಿದ್ದು, ಜಿಲ್ಲೆಯ 24,736 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಅಣಿಯಾಗಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಪೂರ್ಣಗೊಳಿಸಲಾಗಿದ್ದು, ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷಾ ಕೊಠಡಿಗಳಲ್ಲಿ ಆಸನ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಬರೆದು ಅಗತ್ಯ ಮಾಹಿತಿಗಳನ್ನು ಸೂಚನಾ ಫಲಕಗಳಲ್ಲಿ ಅಳವಡಿಸುವ ಮೂಲಕ ಎಲ್ಲ ಸಿದ್ಧತೆಗಳನ್ನು ನಿಯೋಜಿತ ಸಿಬ್ಬಂದಿ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ 12,585 ಬಾಲಕರು, 12,151 ಬಾಲಕಿಯರು ಸೇರಿ ಒಟ್ಟು 24,736 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ರೆಗ್ಯುಲರ್ ವಿದ್ಯಾರ್ಥಿಗಳು 23,594 ಹಾಗೂ ಖಾಸಗಿ 287 ಮತ್ತು 757 ಪುನಾವರ್ತಿತ ಹಾಗೂ 98 ಖಾಸಗಿ ಪುನಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.ಜಿಲ್ಲೆಯಲ್ಲಿ 200 ಸರ್ಕಾರಿ, 157 ಅನುದಾನಿತ ಹಾಗೂ 102 ಅನುದಾನ ರಹಿತ ಸೇರಿ 459 ಪ್ರೌಢಶಾಲೆಗಳಿದ್ದು, ಈ ಪೈಕಿ 32 ಸರ್ಕಾರಿ, 36 ಅನುದಾನಿತ ಹಾಗೂ 12 ಅನುದಾನರಹಿತ ಸೇರಿ 80 ಶಾಲೆಗಳಲ್ಲಿ 1089 ಪರೀಕ್ಷಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಗಾಳಿ, ಬೆಳಕು, ಡೆಸ್ಕ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಸುಸೂತ್ರವಾಗಿ ಹಾಗೂ ಪಾರದರ್ಶಕ ರೀತಿಯಲ್ಲಿ ಪರೀಕ್ಷೆ ನಡೆಸಲು ವಿವಿಧ ಹಂತದಲ್ಲಿ ಅಧಿಕಾರಿಗಳನ್ನು, ಮೇಲ್ವಿಚಾರಕರನ್ನು ನೇಮಿಸಲಾಗಿದೆ.

ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವೆಬ್‌ ಕಾಸ್ಟಿಂಗ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್‌ವರೆಗೆ ನಿಷೇಧಿತ ಪ್ರದೇಶವೆಂದು ಈಗಾಗಲೇ ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ. ನಿಷೇಧಿತ ವಲಯದಲ್ಲಿ ಝೆರಾಕ್ಸ್ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಿಸಲು ಆದೇಶಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಲಾಗಿದೆ.ಬಿಸಿಲು, ಸೆಕೆ ಪ್ರಮಾಣ ಹೆಚ್ಚಿರುವುದರಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೇ ಧೈರ್ಯದಿಂದ ಪರೀಕ್ಷೆ ಬರೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಆಲ್‌ ದಿ ಬೆಸ್ಟ್‌ ಎಂದು ಶುಭ ಕೋರುತ್ತಿದ್ದೇವೆ.

15 ಪರೀಕ್ಷಾ ಕೇಂದ್ರಗಳ ಸ್ಥಾಪನೆ

ರಾಣಿಬೆನ್ನೂರು: ಮಾ. 21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಮುಖ್ಯ ಪರೀಕ್ಷಕರು, ಉಪಮುಖ್ಯ ಅಧೀಕ್ಷಕರು, ಮೊಬೈಲ್ ಸ್ವಾಧೀನ ಅಧಿಕಾರಿ, ಕೊಠಡಿ ಮೇಲ್ವಿಚಾರಕರು, ಕಸ್ಟೋಡಿಯನ್, ಮಾರ್ಗಾಧಿಕಾರಿ ನೇಮಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮ ಸುಂದರ ಅಡಿಗ ತಿಳಿಸಿದರು.ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಅವರು, ನಗರ ಮತ್ತು ಗ್ರಾಮೀಣ ಸೇರಿ ತಾಲೂಕಿನಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳಿವೆ. ಈ ಬಾರಿ ಒಟ್ಟು 4644 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ನಗರದಲ್ಲಿ 5 ಕೇಂದ್ರಗಳು ಗ್ರಾಮೀಣ ಭಾಗದಲ್ಲಿ 10 ಕೇಂದ್ರಗಳಿವೆ. ಎಲ್ಲ ಪರೀಕ್ಷೆ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಮತ್ತು ವೆಬ್ ಕಾಸ್ಟಿಂಗ್ ಅಳವಡಿಸಲಾಗಿದೆ. ಕುಡಿಯುವ ನೀರು, ಡೆಸ್ಕ್, ವಿದ್ಯುತ್ ಮತ್ತು ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸಿಸಿ ಕ್ಯಾಮೆರಾ ಡ್ರೈ ರನ್ ಮಾಡಿ ಚೆಕ್ ಮಾಡಲಾಗಿದೆ ಎಂದರು.

ನಗರ ಪ್ರದೇಶದ ಪರೀಕ್ಷಾ ಕೇಂದ್ರಗಳು: ರಾಜರಾಜೇಶ್ವರಿ ಬಾಲಕಿಯರ ಪ್ರೌಢಶಾಲೆ, ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಿ.ಕೆ. ಗುಪ್ತಾ ಪ್ರೌಢಶಾಲೆ, ಶ್ರೀ ಸಿದ್ಧೇಶ್ವರ ವಸತಿ ಪ್ರೌಢಶಾಲೆ, ಅಂಜುಮನ್ ಆಂಗ್ಲೋ ಉರ್ದು ಪ್ರೌಢಶಾಲೆ.ಗ್ರಾಮೀಣ ಪ್ರದೇಶ: ಶ್ರೀ ಹಾಲಸಿದ್ಧೇಶ್ವರ ಪ್ರೌಢಶಾಲೆ ಹಲಗೇರಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಅರೇಮಲ್ಲಾಪುರ, ಸಿಇಎಸ್ ಪ್ರೌಢಶಾಲೆ ಚಳಗೇರಿ, ಸರ್ಕಾರಿ ಪ್ರೌಢಶಾಲೆ ಇಟಗಿ, ಶ್ರೀ ಮಾಲತೇಶ ಪ್ರೌಢಶಾಲೆ ದೇವರಗುಡ್ಡ, ಸರ್ಕಾರಿ ಪ್ರೌಢಶಾಲೆ ಹರನಗಿರಿ, ಬಿಎಜೆಎಸ್‌ಎಸ್ ದುರ್ಗಾಮಾತಾ ಪ್ರೌಢಶಾಲೆ ಕವಲೆತ್ತು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸುಣಕಲ್ಲಬಿದರಿ, ಶ್ರೀ ಸಂಗನಬಸವೇಶ್ವರ ಪ್ರೌಢಶಾಲೆ ತುಮ್ಮಿನಕಟ್ಟಿ.